ಮಾರ್ಚ್ ತಿಂಗಳಾದ್ಯಂತ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತನ ಅಭಿಯಾನ: ಎನ್.ಕೆ.ಎಂ ಶಾಫಿ ಸಅದಿ

Update: 2020-02-08 17:48 GMT

ಬೆಂಗಳೂರು: ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಐಕ್ಯತೆ ಮೂಡಿಸಿ ಸಮಾಜದ ಸಬಲೀಕರಣ ಮತ್ತು ರಾಷ್ಟ್ರಹಿತದ ಸಂರಕ್ಷಣೆಗಾಗಿ ರೂಪುಗೊಂಡಿರುವ ಕರ್ನಾಟಕ ಮುಸ್ಲಿಂ ಜಮಾತ್ ಇದರ ಸದಸ್ಯತನ ಅಭಿಯಾನವು ಮಾರ್ಚ್1 ರಿಂದ 31ರ ತನಕ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ ಶಾಫಿ ಸಅದಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಪ್ರತಿನಿಧಿ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಿಎಎ, ಎನ್‌ಆರ್‌ಸಿ ಯಂತಹ ವಿವಾದಾತ್ಮಕ ಕಾಯ್ದೆಗಳಿಂದ ಬಹುಜನ ಭಾರತೀಯರು ಆತಂಕಕ್ಕೀಡಾಗಿದ್ದು, ಸಂವಿಧಾನವೇ ಪ್ರಶ್ನಿಸಲ್ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಬಹು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿಶ್ವ ಸಾಮಾಜಿಕ ನ್ಯಾಯ ದಿನವಾದ ಫೆಬ್ರವರಿ 20ರಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ದಿನವಾದ ಎಪ್ರಿಲ್ 14ರ ತನಕ 50 ದಿನಗಳ 'ಪ್ರಜಾ ಭಾರತ' ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದೇ ಸಂದರ್ಭ "ದ್ವೇಷ ಬಿಟ್ಟು ದೇಶ ಕಟ್ಟು" ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ವಿವಿಧ ಬಗೆಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಉಪಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ ಅಧ್ಯಕ್ಷತೆಯಲ್ಲಿ ನಡೆದ ಪ್ರತಿನಿಧಿ ಸಮಾವೇಶವನ್ನು ಉಪಾಧ್ಯಕ್ಷ ಮೌಲಾನಾ ಮುಫ್ತಿ ಶಬ್ಬೀರ್ ಅಲಿ ನೂರಿ ಬೆಂಗಳೂರು ಉದ್ಘಾಟಿಸಿದರು. 'ಭಾರತದ ಪ್ರಚಲಿತ ವಿದ್ಯಮಾನಗಳು' ಎಂಬ ವಿಷಯದ ಬಗ್ಗೆ ನಿವೃತ್ತ ಕೆಎಎಸ್ ಅಧಿಕಾರಿ ಈಜಾಝ್ ಅಹ್ಮದ್,  'ಮುಸ್ಲಿಮರ ರಾಜಕೀಯ ಸಬಲೀಕರಣ'ದ ಬಗ್ಗೆ ಹಿರಿಯ ಪತ್ರಕರ್ತ ಬಿಎಂ ಹನೀಫ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಯ ಯೋಜನೆಗಳು ಎಂಬ ಬಗ್ಗೆ ಪತ್ರಕರ್ತ ಅಬ್ದುಲ್ ಹಮೀದ್ ಬಜ್ಪೆ ವಿಷಯ ಮಂಡಿಸಿದರು.

ಸಯ್ಯದ್ ಸೈಫುಲ್ಲಾ ದಾವಣಗೆರೆ, ಹಾಜಿ ಮುಹಮ್ಮದ್ ಸಾಗರ, ಅಬ್ದುರ್ರಹ್ಮಾನ್ ನ್ಯಾಷನಲ್ ತಿರ್ಥಹಳ್ಳಿ, ಹಾಜಿ ಅಬೂಬಕರ್ ನೇಜಾರು, ಮೌಲಾನಾ ತಖಿಯುದ್ದೀನ್ ಹಾಸನ, ಅಬ್ದುಲ್ ಅಝೀಝ್ ರಝ್ವಿ ಬಿಜಾಪುರ, ಅಹ್ಮದ್ ಪಾಷಾ ಬೀದರ್, ನ್ಯಾಯವಾದಿ ಝುಲ್ಫಿಕರ್ ಅಲಿ ಚಿತ್ರದುರ್ಗ, ಅಸ್ಮತ್ ಪಾಷಾ ರಾಮನಗರ, ಜಾಕಿರ್ ಹುಸೇನ್ ಮೂಡಿಗೆರೆ, ಝಬೀಉಲ್ಲಾ ರಝ್ವಿ ತುಮಕೂರು, ಗೌಸ್ ಮುರಾದಾನ್ ಬಳ್ಳಾರಿ, ಮಂಝರ್ ಹುಸೈನ್ ಅಂಕೋಲಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಯಾಕೂಬ್ ಯೂಸುಫ್ ಶಿವಮೊಗ್ಗ ಸ್ವಾಗತಿಸಿ, ಮೀರಾನ್ ಸಾಬ್ ಕಡಬ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News