ಹಕ್ಕಿಗಳು

Update: 2020-02-08 18:21 GMT

ಸಿಂಧು ಮೂರನೇ ತರಗತಿಯಲ್ಲಿ ಓದುತ್ತಿರುವ ಹುಡುಗಿ. ಅವಳಿಗೆ ಹಕ್ಕಿಗಳೆಂದರೆ ತುಂಬಾ ಇಷ್ಟ. ಅದೊಂದು ದಿನ ಸಿಂಧು ಶಾಲೆಗೆ ಹೊರಟಾಗ ಒಂದು ಅಂಗಡಿಯಲ್ಲಿ ಮಾರಲು ಇಟ್ಟ ಪಕ್ಷಿಗಳನ್ನು ನೋಡಿದಳು. ನೋಡಲು ಸುಂದರವಾಗಿರುವ ಬಣ್ಣ ಬಣ್ಣದ ಪಕ್ಷಿಗಳು ಚಿಲಿಪಿಲಿಗುಟ್ಟುತ್ತ ತಾವಿರುವ ಪಂಜರದಲ್ಲೇ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಓಡಾಡುತ್ತಿದ್ದವು. ಅವುಗಳನ್ನು ಕಂಡ ಸಿಂಧು ಶಾಲೆ ಮುಗಿಸಿಕೊಂಡು ಮನೆಗೆ ಹೋದಳು. ತಾನು ನೋಡಿದ ಪಕ್ಷಿಗಳ ಬಗೆಗೆ ತಂದೆಯ ಮುಂದೆ ವ್ಯಕ್ತಪಡಿಸಿದಳು. ಅವುಗಳನ್ನು ನಾವು ಮನೆಗೆ ತರೋಣ ಎಂದು ಹೇಳಿದಳು. ಅದಕ್ಕೆ ತಂದೆ ಒಪ್ಪಲಿಲ್ಲ. ಅದರಿಂದ ಸಿಂಧು ಬೇಸರಗೊಂಡಳು. ಅಳುತ್ತಾ ಓಡಿ ಹೋದಳು. ಮಾರನೇ ದಿನವೂ ಪಕ್ಷಿಗಳು ಬೇಕೇ ಬೇಕು ಎಂದು ಹಟ ಹಿಡಿದಳು.

ಅವಳ ಹಠದಿಂದಾಗಿ ತಂದೆ ನಾಲ್ಕು ಪಕ್ಷಿಗಳನ್ನು ತಂದು ಕೊಟ್ಟರು. ಪಂಜರದೊಳಗಿನ ಪಕ್ಷಿಗಳನ್ನು ನೋಡಿ ಸಿಂಧು ಸಂತೋಷದಿಂದ ಕುಣಿದಾಡಿದಳು. ಆ ಪಕ್ಷಿಗಳಿರುವ ಪಂಜರವನ್ನು ಕೈಯಲ್ಲಿ ಹಿಡಿದು ಮನೆ ತುಂಬಾ ಓಡಾಡಿದಳು ಮತ್ತು ಅವುಗಳನ್ನು ಮೆಲ್ಲಗೆ ಮುಟ್ಟಿ ಖುಷಿಪಟ್ಟಳು. ಅವುಗಳಿಗೆ ಆಹಾರ ನೀರಿನ ವ್ಯವಸ್ಥೆಯನ್ನು ತಾನೇ ಮಾಡಿದಳು. ಪದೇ ಪದೇ ಅವುಗಳನ್ನು ನೋಡಿ ಖುಷಿಪಡುತ್ತಿದ್ದಳು. ಶಾಲೆಗೆ ಹೋಗುವ ಮುನ್ನ ಅವುಗಳಿಗೆ ಹಾಯ್ ಹೇಳಿ ಹೋಗುತ್ತಿದ್ದಳು. ಶಾಲೆಯಿಂದ ಬಂದ ತಕ್ಷಣ ಅವುಗಳ ಬಳಿಗೆ ಹೋಗಿ ನೋಡುತ್ತಿದ್ದಳು. ಒಂದು ದಿನ ಸಂಜೆ ಜೋರಾಗಿ ಮಳೆ ಗಾಳಿ ಶುರುವಾಗಿತ್ತು. ಜೋರಾಗಿ ಬೀಸಿದ ಆ ಗಾಳಿಯ ರಭಸಕ್ಕೆ ಪಕ್ಷಿಗಳಿರುವ ಪಂಜರವು ಜಾರಿ ಕೆಳಗೆ ಬಿದ್ದುಬಿಟ್ಟಿತು. ಅದು ಬಿದ್ದ ಸದ್ದನ್ನು ಕೇಳಿ ಸಿಂಧು ಮತ್ತು ಅವಳ ತಾಯಿ ಪಂಜರದ ಬಳಿಗೆ ಓಡಿಬಂದರು. ಮೇಲಿಂದ ಕೆಳಗೆ ಬಿದ್ದ ಪಕ್ಷಿಗಳು ಒದ್ದಾಡುತ್ತಿದ್ದವು. ಪಂಜರವನ್ನು ತೆಗೆದು ನೋಡಿದಾಗ ಮೂರು ಪಕ್ಷಿಗಳು ರೆಕ್ಕೆ ಬಡಿದುಕೊಂಡು ಒದ್ದಾಡುತ್ತಿದ್ದವು. ಆದರೆ ಒಂದು ಪಕ್ಷಿ ಮಾತ್ರ ಒದ್ದಾಡುತ್ತಿರಲಿಲ್ಲ. ಅದು ಕೆಳಗೆ ಬಿದ್ದ ವೇಗಕ್ಕೆ ಸತ್ತುಹೋಗಿತ್ತು. ಅದನ್ನು ಕಂಡ ಸಿಂಧು ಅಳತೊಡಗಿದಳು. ತನ್ನ ನೆಚ್ಚಿನ ಪಕ್ಷಿಗೆ ಆ ಸ್ಥಿತಿ ಬಂದಿರುವುದನ್ನು ಕಂಡು ಅವಳಿಗೆ ಸಹಿಸಲಾಗದ ನೋವು ಉಂಟಾಯಿತು. ಅವಳ ತಾಯಿ ಎಷ್ಟೇ ಸಮಾಧಾನ ಮಾಡಿದರೂ ಅವಳ ಅಳು ನಿಲ್ಲಲೇ ಇಲ್ಲ. ಎರಡು ಮೂರು ದಿನಗಳಾದರು ಅದೇ ಬೇಸರದಲ್ಲಿ ಇದ್ದಳು. ಒಂದು ದಿನ ಅವರ ಶಾಲೆಯಲ್ಲಿ ‘ಹಕ್ಕಿಗಳ ಲೋಕ’ ಎನ್ನುವ ವಿಷಯವಾಗಿ ಪಕ್ಷಿಗಳ ತಜ್ಞರೊಬ್ಬರು ಉಪನ್ಯಾಸ ನೀಡಲು ಬಂದಿದ್ದರು. ಅವರು ತಮ್ಮ ಉಪನ್ಯಾಸದಲ್ಲಿ ಹಾರಾಡುವ ಹಕ್ಕಿಗಳನ್ನು ತಂದು ಪಂಜರದಲ್ಲಿ ಬಂಧಿಸಿಡಬಾರದು. ಅದರಿಂದ ಅವುಗಳ ಸ್ವಾತಂತ್ರವನ್ನು ನಾವು ಕಿತ್ತುಕೊಂಡಂತಾಗುತ್ತದೆ. ಮನುಷ್ಯರನ್ನು ಬಂಧಿಸಿಟ್ಟರೆ ಮನುಷ್ಯನಿಗೆ ಯಾವ ರೀತಿ ಬೇಸರವಾಗುವುದೋ ಅದೇ ರೀತಿ ಅವುಗಳಿಗೂ ಹಿಂಸೆ ಅನಿಸುತ್ತದೆ ಎಂದು ಹೇಳಿದರು. ಇದನ್ನು ಕೇಳಿದ ಸಿಂಧು ಹೌದು ನಮ್ಮ ಸಂತೋಷಕ್ಕೆ ಅವುಗಳನ್ನು ಪಂಜರದಲ್ಲಿ ಇಟ್ಟು ಅವುಗಳಿಗೆ ಹಿಂಸೆ ಮಾಡುವುದು ಸರಿಯಲ್ಲ ಎಂದು ಅವು ಆಕಾಶದಲ್ಲಿ ಹಾರಾಡಿಕೊಂಡು ಆರಾಮವಾಗಿ ಇರಲಿ ಎಂದು ತನ್ನ ಬಳಿ ಇರುವ ಮೂರು ಹಕ್ಕಿಗಳನ್ನು ಆಕಾಶಕ್ಕೆ ಹಾರಿ ಬಿಟ್ಟಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News