ಸ್ವಾಯತ್ತತೆ ಕಾಪಾಡಿಕೊಳ್ಳಬೇಕಾಗಿದ್ದ ಕಸಾಪದಂತಹ ಸಂಸ್ಥೆಗಳಿಂದು ನಿರ್ಜೀವ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2020-02-09 12:23 GMT

ಬೆಂಗಳೂರು, ಫೆ. 9: ಸಾಂಸ್ಕೃತಿಕ ಸ್ವಾಯತ್ತತೆ ಕಾಪಾಡಿಕೊಳ್ಳಬೇಕಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಇಂದು ನಿರ್ಜೀವವಾಗಿರುವುದು ವಿಪರ್ಯಾಸ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಕುವೆಂಪು ಅವರ ಸಾಹಿತ್ಯ ಮತ್ತು ಚಿಂತನೆ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಿದಾಗ ಉಂಟಾದ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದಕ್ಕೆ ತಾಜಾ ಉದಾಹರಣೆ. ರಾಜ್ಯ ಸರಕಾರ ಅಧ್ಯಕ್ಷರನ್ನು ಬದಲಾಯಿಸುವಂತೆ ಹೇಳಿದರೆ ಅದನ್ನು ಪಾಲಿಸುವವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕವಿ ಕವಿತೆ. ಸಾಹಿತಿ ಕಾದಂಬರಿ ಬರೆದರೆ ಸಾಲದು. ಮಿಮಾಂಸೆಯನ್ನು ರಚಿಸುವ, ಸಾಂಸ್ಕೃತಿಕ ತನವನ್ನು ಉಳಿಸಿಕೊಳ್ಳುವ ಹಾಗೂ ಸಮಾಜ ಕಟ್ಟವಂತಹ ಸಾಹಿತ್ಯದ ಅಗತ್ಯತೆ ಇದೆ ಎಂದು ಹೇಳಿದರು

ಸಾಹಿತ್ಯವೆಂದರೆ ಬಿಡುವಿನ ವೇಳೆಯಲ್ಲಿ ಓದುವುದಲ್ಲ. ಬದಲಾಗಿ ಸಾಹಿತ್ಯವನ್ನು ಆಸ್ವಾಧಿಸುವ ಗುಣ ಇರಬೇಕು. ಅದು ಇದ್ದಾಗ ಮಾತ್ರ ನಿಜವಾದ ಸಾಹಿತ್ಯದ ರುಚಿ ಲಭಿಸಲಿದೆ ಎಂದರು. ವಿಮರ್ಶೆ ಎಂದರೆ ಪರ ಅಥವಾ ವಿರೋಧವಲ್ಲ, ವಿಮರ್ಶೆ ಪೂರ್ವಾಗ್ರಹ ವಿಶ್ಲೇಷಣೆಯೂ ಅಲ್ಲ. ವಿಮರ್ಶೆಯಲ್ಲಿ ಮುಖ್ಯವಾಗಿ ಇರಬೇಕಾಗಿರುವುದು ಸಮಾಜವನ್ನು ಒಡೆಯುವ ಅಂಶಗಳಲ್ಲ. ಸದೃಡ ಸಮಾಜವನ್ನು ಕಟ್ಟುವುದ್ದಾಗಿರಬೇಕು. ಅಂತಹ ಸಾಹಿತ್ಯವನ್ನು ಕುವೆಂಪುಅವರಲ್ಲಿ ಕಾಣಬಹುದಾಗಿದೆ. ಅವರ ಸಾಹಿತ್ಯದಲ್ಲಿ ತಾತ್ವಿಕತೆ ಮುಖ್ಯವಾಗಿತ್ತು. ಕುವೆಂಪು ಜಾತಿ ಬಗ್ಗೆ ಬರೆದವರಲ್ಲ. ಅವರ ಸಾಹಿತ್ಯದಲ್ಲಿ ಸಾಮಾಜಿಕ, ಪಾರಂಪರಿಕ ತನ ಇತ್ತು. ರಮ್ಯತೆಯ ಜತೆಗೆ ವೈಚಾರಿಕತೆಯ ಪ್ರಜ್ಞೆ ಇತ್ತು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಎಸ್.ಜಿ ರಾಜಶೇಖರ ಕಿಗ್ಗಾ, ನ್ಯಾಷನಲ್ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಎಸ್. ನಾಗರಾಜ ರೆಡ್ಡಿ, ಪ್ರಾಶುಂಪಾಲೆ ಡಾ.ಸಿ.ಬಿ.ಅನ್ನಪೂರ್ಣಮ್ಮ, ನಿವೃತ್ತ ಮುಖ್ಯ ಅಭಿಯಂತರ ಕೆ.ಬಿ ನಾಗರಾಜ್, ಯುನಿವರ್ಸಲ್ ಅಕಾಡೆಮಿ ನಿರ್ದೇಶಕ ಎಂ.ಎಸ್ ಮಂಜುನಾಥ್ ಉಪಸ್ಥಿತರಿದ್ದರು.

'ಪ್ರತಿಭಟನೆ ನಡೆಸುವವರು ಹಣ ನೀಡಬೇಕಂತೆ...'
‘ನಗರದ ಪುರಭವನದ ಮುಂದೆ ಪ್ರತಿಭಟನೆ ನಡೆಸುವವರು 10ಲಕ್ಷ ರೂ.ಮುಂಗಡ ಹಣವನ್ನು ಇಡಬೇಕಂತೆ. ಅಷ್ಟೊಂದು ಹಣ ಪ್ರತಿಭಟನೆ ನಡೆಸುವವರ ಬಳಿ ಇದ್ದರೆ ಅವರ್ಯಾಕೆ ಹೋರಾಟಕ್ಕೆ ಇಳಿಯುತ್ತಿದ್ದರು. ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕಾಗಿ ಈ ರೀತಿಯಾಗಿ ಹೊಸ-ಹೊಸ ಕಾನೂನು ತರವುದು ವಿಪರ್ಯಾಸ’
-ಪ್ರೊ.ಬರಗೂರು ರಾಮಚಂದ್ರಪ್ಪಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News