ಎನ್‌ಆರ್‌ಸಿ ಜಾರಿಯ ಮೊದಲ ಹೆಜ್ಜೆ ಎನ್‌ಪಿಆರ್ ಅನುಷ್ಠಾನ: ಬಾಪೂ ಹೆದ್ದೂರ ಶೆಟ್ಟಿ
ಬೆಂಗಳೂರು, ಫೆ.9: ‘ರಾಷ್ಟ್ರೀಯ ನಾಗರಿಕ ನೋಂದಣಿ’(ಎನ್‌ಆರ್‌ಸಿ) ಕಾಯ್ದೆ ಜಾರಿಯ ಮೊದಲ ಹಂತ ಎಂಬಂತೆ ‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ (ಎನ್‌ಪಿಆರ್) ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ವಾಸ್ತವವಾಗಿ ಎನ್‌ಆರ್‌ಸಿ ಜಾರಿಯ ಮೊದಲ ಹೆಜ್ಜೆಯೇ ಎನ್‌ಪಿಆರ್ ಅನುಷ್ಠಾನ ಮಾಡುವುದಾಗಿದೆ ಎಂದು ಸಮಾಜವಾದಿ ಚಿಂತಕ ಬಾಪೂ ಹೆದ್ದೂರ ಶೆಟ್ಟಿ ಹೇಳಿದರು.
ರವಿವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರಿಗೆ ‘ಸಿಎಎ-ಎನ್‌ಆರ್‌ಸಿ- ಎನ್‌ಪಿಆರ್’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎನ್‌ಆರ್‌ಸಿ ಜಾರಿಗೆ ಸದ್ಯ ಯೋಚಿಸಿಲ್ಲ. ಎನ್‌ಪಿಆರ್ ಅಷ್ಟೇ ಜಾರಿಗೆ ತರುವುದಾಗಿ ಹೇಳುತ್ತಿರುವ ಕೇಂದ್ರ ಸರಕಾರ, ಇವೆರಡು ಕಾಯ್ದೆಗೆ ಒಂದಕ್ಕೊಂದು ಸಂಬಂಧವಿಲ್ಲ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ ಎಂದು ಹೇಳಿದರು.
ಜನಸಂಖ್ಯಾ ನೋಂದಣಿಯಲ್ಲಿ ತಂದೆ -ತಾಯಿ ಹುಟ್ಟಿದ ಸ್ಥಳ ಕುರಿತು ಹೊಸ ಎರಡು ಪ್ರಶ್ನೆ ಸೇರಿಸಲಾಗಿದೆ. ಪೋಷಕರ ಹುಟ್ಟಿದ ಸ್ಥಳ ಬಗ್ಗೆ ದಾಖಲೆ ನೀಡದಿದ್ದಲ್ಲಿ ನಾಗರಿಕತೆ ಸಿಗುವುದು ಅನುಮಾನ. ಬಾಂಗ್ಲಾದಿಂದ ಅಸ್ಸಾಂಗೆ 19 ಲಕ್ಷ ನುಸುಳುಕೋರರು ಬಂದಿದ್ದಾರೆ ಎನ್ನುವ ಕೇಂದ್ರ, ಆ ವಲಸಿಗರಲ್ಲಿ ಸಿಖ್, ಬೌದ್ಧ, ಜೈನ್, ಹಿಂದುಗಳೆಷ್ಟು ಎಂಬ ಅಂಕಿ ಸಂಖ್ಯೆ ಈವರೆಗೂ ನೀಡಿಲ್ಲ ಎಂದು ದೂರಿದರು.
ತ್ರಿವಳಿ ತಲಾಖ್ ಮತ್ತು 370ನೇ ವಿಧಿ ರದ್ದು, ಬಾಬರಿ ಮಸೀದಿ ಧ್ವಂಸವಾದಾಗ ಹೋರಾಡದ ದೇಶದ ಮುಸ್ಲಿಮರು, ಕೇಂದ್ರದ ಈ ಮೂರು ಕಾಯ್ದೆಗಳಿಂದ ಸಂವಿಧಾನಕ್ಕೆ ಧಕ್ಕೆ ಉಂಟಾಗಲಿದೆ ಎಂಬುದು ಗೊತ್ತಾದ ಹಿನ್ನೆಲೆ ಎಲ್ಲರೂ ಬೀದಿಗಿಳಿದಿದ್ದಾರೆ. ಭಾರತದ ಜನರೆಲ್ಲರೂ ಸಮಾನರೆಂದು ಸಂವಿಧಾನದ ‘14ನೇ ವಿಧಿ’ ಹೇಳುತ್ತದೆ. ದೇಶಕ್ಕೆ ಬರುವ ನುಸುಳುಕೋರರಿಗೆ ಪೌರತ್ವ ನೀಡಿದರೆ ಎಲ್ಲರನ್ನು ಸಮಾನರಾಗಿ ನೋಡಬೇಕಾದ ಸ್ಥಿತಿ ಎದುರಾಗುತ್ತದೆ. ಆಗ ಮೂಲ ಭಾರತೀಯರಿಗೆ ತೊಂದರೆಯಾಗುತ್ತದೆ. ಈ ಕಾರಣಕ್ಕಾಗಿ ಕಾಯ್ದೆ ವಿರುದ್ಧ ದೇಶಾದ್ಯಂತ ಹೋರಾಟದ ಜ್ವಾಲೆ ಎದ್ದಿದ್ದು, ಪ್ರತಿಭಟನಾಕರರಿಗೆ ಈ ಬಗ್ಗೆ ಮತ್ತಷ್ಟು ಅರಿವು ಮೂಡಿಸಬೇಕು. ಜತೆಗೆ ಸಂಘಟಿತರಾಗಿ ಹೋರಾಡಬೇಕಿದೆ ಎಂದು ತಿಳಿಸಿದರು.
ಎಐಟಿಯುಸಿ ರಾಜ್ಯ ಸಮಿತಿಯ ಎಚ್.ವಿ. ಅನಂತ ಸುಬ್ಬರಾವ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಜನರ ಪ್ರತಿಭಟನಾ ಹಕ್ಕನ್ನು ಹಂತ ಹಂತವಾಗಿ ಕಿತ್ತುಕೊಳ್ಳುತ್ತಿದೆ. ಸಂವಿಧಾನ ಬದ್ಧ ನಮ್ಮ ಅಭಿವ್ಯಕ್ತಿ ಹಕ್ಕು ಚಲಾಯಿಸಲು ಅವಕಾಶವಿಲ್ಲದಂತೆ ಮಾಡಿದೆ. ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಜಾತಿ, ಧರ್ಮಾಧಾರಿತ ಕಾಯ್ದೆ ಜಾರಿ ಖಂಡನೀಯ ಎಂದರು.