ಕಾರು ಢಿಕ್ಕಿ: ಮುಖ್ಯಪೇದೆ ಸಾವು
ಬೆಂಗಳೂರು, ಫೆ.9: ಶರವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸಂಚಾರ ವಿಭಾಗದ ಮುಖ್ಯ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಚಿಕ್ಕಜಾಲದ ಸಂಚಾರ ಪೊಲೀಸ್ ಠಾಣೆಯ ಮುಖ್ಯ ಪೊಲೀಸ್ ಪೇದೆ ಧನಂಜಯ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಸಂಜೆ ಇಲ್ಲಿನ ಚಿಕ್ಕಜಾಲ ಬಳಿಯ ಮೇಲತ್ಸುವೆ ಮೇಲಿಂದ ಬಂದ ಕಾರು, ಸಂಚಾರಿ ನಿಯಮ ಉಲ್ಲಂಘಿಸಿ ವೇಗವಾಗಿ ಬಂದಿದೆ. ಇದನ್ನು ತಡೆಯಲು ಮುಂದಾದ ವೇಳೆ, ಏಕಾಏಕಿ ಕಾರು ಪೊಲೀಸ್ ಪೇದೆ ಧನಂಜಯ ಅವರಿಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.
ಢಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಧನಂಜಯ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಘಟನೆಯಲ್ಲಿ ಉಮಾ ಮಹೇಶ್ ಎಂಬುವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಧನಂಜಯ ಅವರ ಅಂತ್ಯಕ್ರಿಯೆಯನ್ನು ರವಿವಾರ ಇಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಏಕಾಶಿಪುರದಲ್ಲಿ ನೆರವೇರಿಸಲಾಗಿದೆ. ಅಪಘಾತಕ್ಕೆ ಕಾರಣನಾದ ಕಾರಿನ ಮಾಲಕ ಕುಶಾಲ್ ರಾಜ್ ಎಂಬಾತನನ್ನು ಬಂಧಿಸಿರುವ ಚಿಕ್ಕಜಾಲದ ಸಂಚಾರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.