ಹೊಟ್ಟೆಪಾಡಿಗಾಗಿ ವಲಸೆ ಬಂದವರ ವಿರುದ್ಧ ಧ್ವನಿ ಎತ್ತುವುದು ಸರಿಯಾದ ಕ್ರಮವಲ್ಲ: ಕೆ.ನೀಲಾ
ಬೆಂಗಳೂರು, ಫೆ.9: ಹೊಟ್ಟೆಪಾಡಿಗಾಗಿ ದುಡಿಯಲು ಬಂದವರನ್ನು ರಾಜ್ಯ ಬಿಟ್ಟು ಹೋಗಿ ಎನ್ನುವುದು ತಪ್ಪಾಗುತ್ತದೆ. ಸರಕಾರವೇ ಉದ್ಯೋಗದ ವಿಚಾರದಲ್ಲಿ ಹೊಸ ನೀತಿಗಳನ್ನು ಜಾರಿಗೆ ತರಬೇಕೆಂದು ಸಾಮಾಜಿಕ ಚಿಂತಕಿ, ಬರಹಗಾರ್ತಿ ಕೆ.ನೀಲಾ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಪುರ ಭವನದ ಮುಂಭಾಗ ಕನ್ನಡಪರ ಸಂಘಟನೆಗಳು ಆಯೋಜಿಸಿದ್ದ ವಲಸಿಗರೆ ಕರ್ನಾಟಕ ಬಿಟ್ಟು ತೊಲಗಿ ಎಂಬ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದುಡಿಯಲು ಹೋಗಲು ಅವಕಾಶವಿದೆ. ಅದೇ ರೀತಿಯಾಗಿ ರಾಜ್ಯದ ಕನ್ನಡಿಗರು ಮುಂಬೈ ಸೇರಿ ಇನ್ನಿತರ ರಾಜ್ಯಗಳಿಗೆ ದುಡಿಯಲು ಹೋಗಿದ್ದಾರೆ. ಆ ರಾಜ್ಯದವರು ಏನಾದರೂ ಕನ್ನಡಿಗರು ತಮ್ಮ ರಾಜ್ಯಗಳಿಗೆ ಹೋಗಿ ಎಂದರೆ ಸಮಸ್ಯೆಗಳು ಮತ್ತಷ್ಟು ಜಟಿಲವಾಗುತ್ತದೆ. ಹೀಗಾಗಿ, ಕರ್ನಾಟಕ ಸರಕಾರವೇ ಉದ್ಯೋಗದ ವಿಚಾರದಲ್ಲಿ ಹೊಸ ನೀತಿಗಳನ್ನು ಜಾರಿಗೆ ತರಬೇಕೆಂದು ಅಭಿಪ್ರಾಯಪಟ್ಟರು.
ಸದ್ಯ ಎಲ್ಲ ಸರಕಾರಿ ವಲಯಗಳು ಖಾಸಗೀಕರಣಗೊಳ್ಳುತ್ತಿದೆ. ಮಾಲಕರೂ ತಮಗೆ ಬೇಕಾದವರಿಗೆ ಕೆಲಸ ನೀಡುತ್ತಿದ್ದಾರೆ. ಹಾಗೊಂದು ಬಾರಿ ಉದ್ಯೋಗಕ್ಕಾಗಿ ವಲಸೆ ಬರುವವರನ್ನು ತಡೆಗಟ್ಟಲು ಹೋದರೆ, ಕೋಮುವಾದಕ್ಕೆ ಆಸ್ಪದ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಿದರು.
ನಾಟಕಕಾರ, ನಿರ್ದೇಶಕ ಬಿ. ಸುರೇಶ್ ಮಾತನಾಡಿ, ಅನ್ಯ ಭಾಷಿಗರನ್ನು ರಾಜ್ಯ ಬಿಟ್ಟು ತೊಲಗಿ ಎಂದು ಹೇಳುವುದು ಸರಿಯಾದ ನಿಲುವಲ್ಲ ಬದಲಾಗಿ ಅವರನ್ನು ನಾವು ಒಳಗೊಳ್ಳಬೇಕು. ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳ ಉದ್ಯೋಗದಲ್ಲಿ ಸ್ಥಳೀಯರಿಗೆ ಅಂದರೆ ಕನ್ನಡ ಮಾತನಾಡುವವರಿಗೆ ಶೇ.60 ರಷ್ಟು ಅವಕಾಶವನ್ನು ನೀಡಬೇಕು. ಜೊತೆಗೆ ಕರ್ನಾಟಕಕ್ಕೆ ಬಂದವರು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದರು.
ಡಿವೈಎಫ್‌ಐ ಯುವಜನ ಸಂಘಟನೆಯ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ನಿರುದ್ಯೋಗದ ವಿರುದ್ಧವಾದ ಹೋರಾಟಗಳು ಸರಕಾರದ ನೀತಿಗಳ ವಿರುದ್ಧ ಹಾಗೂ ಉದ್ಯೋಗ ಸೃಷ್ಟಿಗಾಗಿ ನಡೆಯಬೇಕು. ಹೊರತಾಗಿ, ಪರರಾಜ್ಯದ ವಲಸೆ ಕಾರ್ಮಿಕರ ವಿರುದ್ಧ ದ್ವೇಷ ಹುಟ್ಟಿಸುವುದು ಉದ್ಯೋಗ ಹಕ್ಕಿನ ವಿರುದ್ಧದ ಹೋರಾಟವನ್ನು ದಾರಿತಪ್ಪಿಸುತ್ತದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ ಎಂದು ಕೇಳುವುದು ಸರಿಯಾಗಿದೆ. ಆದರೆ ಬೇರೆ ರಾಜ್ಯದ ಜನರ ವಿರುದ್ಧ ಕನ್ನಡಿಗರನ್ನು ಎತ್ತಿಕಟ್ಟುವುದು ತಪ್ಪಾದ ನಡೆ ಎಂದರು.