ಶಿವರಾಮ ಕಾರಂತರ ಸಾಹಿತ್ಯ ಪ್ರಕಾರಗಳು ವೈಚಾರಿಕತೆಯ ವ್ಯಕ್ತಿತ್ವದಿಂದ ಕೂಡಿದೆ: ಈಶ್ವರ ದೈತೋಟ
ಬೆಂಗಳೂರು, ಫೆ.9: ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಶಿವರಾಮ ಕಾರಂತ ಅವರ ಸಾಹಿತ್ಯ ಪ್ರಕಾರಗಳು ವೈಚಾರಿಕತೆಯ ವ್ಯಕ್ತಿತ್ವದಿಂದ ಕೂಡಿದೆ ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಭಿಪ್ರಾಯಪಟ್ಟರು.
ರವಿವಾರ ಆರ್.ಟಿ.ನಗರದ ತರಳಬಾಳು ಕೇಂದ್ರದ ಗ್ರಂಥಾಲಯ ಸಭಾಂಗಣದಲ್ಲಿ ಶಿವರಾಮ ಕಾರಂತ ವೇದಿಕೆ ಆಯೋಜಿಸಿದ್ದ, ವೇದಿಕೆಯ 27ನೆ ವಾರ್ಷಿಕೋತ್ಸವ ಹಾಗೂ ಲಕ್ಷ್ಮೀನಾರಾಯಣ ಚಡಗ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ತ್ರಿಂಶತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರಂತರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿಯೇ ಮೂಢನಂಬಿಕೆ, ಬಾಲ್ಯವಿವಾಹ, ಅನಿಷ್ಟ ಪದ್ಧತಿಗಳ ಕುರಿತು ಬೆಳಕು ಚೆಲ್ಲುವ ಬರವಣಿಗೆ ಹೊರ ತಂದಿದ್ದರು. ಇನ್ನು ಹೊಸದನ್ನು ಕಲಿಯುವ ಹಂಬಲ ಇರುವ ಚಿಣ್ಣರಿಗೆ ಕಾರಂತರು ಸದಾ ಒಂದು ಮಾದರಿ. ತಮ್ಮ ಅನುಭವಕ್ಕೆ ಬಾರದ್ದನ್ನು ನಂಬುತ್ತಿರಲಿಲ್ಲ ಕಾರಂತರು. ಹೊಸದೊಂದು ವಿಚಾರ ತಮ್ಮ ಅನುಭವಕ್ಕೆ ಬಂದಾಗ, ತಮ್ಮ ಹಿಂದಿನ ನಿಲುವುಗಳನ್ನು ಬದಲಿಸಿಕೊಳ್ಳಲು ಹಿಂಜರಿಯುತ್ತಿರಲಿಲ್ಲ ಎಂದು ನುಡಿದರು.
ಇಂದಿನ ಕಾಲಘಟ್ಟದಲ್ಲಿ ಬಂಡವಾಳ ಶಾಹಿಗಳು ಮಾಧ್ಯಮ ಸಂಸ್ಥೆಗಳ ಮೇಲೂ ಹೂಡಿಕೆ ಮಾಡಿ ಉದ್ಯಮವನ್ನೆ ಸೃಷ್ಟಿಸಿದ್ದಾರೆ. ಆದರೆ, ಈ ಬಗ್ಗೆ ಅಂದೇ ಕಾರಂತರು ಬಂಡವಾಳ ಶಾಹಿಗಳ ಬಗ್ಗೆ ಎಚ್ಚರಿಕೆ ನೀಡಿದ್ದರು.ಅವರು ಸಹ ಪತ್ರಿಕೆ ನಡೆಸುವಲ್ಲಿ ಏಳು-ಬೀಳು ಕಂಡಿದ್ದಾರೆ ಎಂದು ಹೇಳಿದರು.
ನನ್ನಲ್ಲಿ ಕನ್ನಡ ಸಾಹಿತ್ಯ ಬಗ್ಗೆ ಆಸಕ್ತಿ, ಅಕ್ಕರೆ ಹುಟ್ಟಲು ಶಿವರಾಮ ಕಾರಂತರೇ ಕಾರಣ ಎಂದ ಅವರು, ಕಾರಂತರು ಸಾಹಿತಿ ಮಾತ್ರವಲ್ಲದೆ ಸಾಹಿತಿಯೂ ಹೌದು, ಹೋರಾಟಗಾರರೂ ಆಗಿದ್ದರು. ಜತೆಗೆ ಪ್ರಜಾಪ್ರಭುತ್ವವಾದಿ ಆಗಿಯೂ ನಮ್ಮ ನಡುವೆ ಉಳಿದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ವಾಂಸ ಪ್ರೊ.ಅಶ್ವಥ್ ನಾರಾಯಣ, ವೇದಿಕೆಯ ಅಧ್ಯಕ್ಷೆ ಡಾ.ನಿರ್ಮಲಾ ಪ್ರಭು, ಕಾರ್ಯದರ್ಶಿ ಡಾ.ಚಂದ್ರಶೇಖರ ಚಡಗ, ಕೋಶಾಧಿಕಾರಿ ಚಂದ್ರಶೇಖರ ಕಾರಂತ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.