×
Ad

ಬೆಂಗಳೂರು: 6 ಮಂದಿ ಕಿಡ್ನಿ ಕಳ್ಳರ ಬಂಧನ

Update: 2020-02-09 23:41 IST

ಬೆಂಗಳೂರು, ಫೆ.9: ‘ಕಿಡ್ನಿ ಮಾರಾಟಕ್ಕಿದೆ, ಖರೀದಿಸುತ್ತೇವೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಟ್ಟು, ಲಕ್ಷಾಂತರ ರೂಪಾಯಿ ವಸೂಲಿ ಮಾಡಿ, ವಂಚಿಸುತ್ತಿದ್ದ ಪ್ರಕರಣ ಬೇಧಿಸಿರುವ ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು, ಮೂವರು ವಿದೇಶಿ ಪ್ರಜೆಗಳು ಸೇರಿ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೈಜೀರಿಯಾದ ಬೆನಿಮ್ ಸಿಟಿಯ ಯೆಸೆನ್ ಲವ್ಲಿ(29), ಸೂಡಾನ್ ದೇಶದ ಅಹ್ಮದ್ ಇಸ್ಮಾಯಿಲ್(28), ಮಾರ್ವನ್(27) ವಿದೇಶಿ ಪ್ರಜೆಗಳಾಗಿದ್ದು, ಇಲ್ಲಿನ ಕಮ್ಮನಹಳ್ಳಿಯಲ್ಲಿ ವಾಸವಿದ್ದರು. ತ್ರಿಪುರಾ ರಾಜ್ಯದ ಹಿರೇಂದ್ರ ತ್ರಿಪುರಾ (25), ದಲಾಯಿನ ಕೇಮಿರಂಜನ್ (21), ಜತಿನ್‌ಕುಮಾರ್(25) ನಗರದ ಬೊಮ್ಮನಹಳ್ಳಿಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ಗುರಿಯಾಗಿಸಿಕೊಂಡು ಅಮಾಯಕ ಜನರನ್ನು ಸಂಪರ್ಕಿಸುತ್ತಿದ್ದ ಬಂಧಿತ ಆರೋಪಿಗಳು, ಕಡಿಮೆ ಬೆಲೆಗೆ ಕಿಡ್ನಿ ನೀಡಲಾಗುವುದು ಎಂದು ನಂಬಿಸುತ್ತಿದ್ದರು. ಇನ್ನು ಕೆಲವರಿಗೆ ಹೆಚ್ಚಿನ ಹಣ ಕಲ್ಪಿಸಲಾಗುವುದೆಂದು ಕಿಡ್ನಿಯನ್ನು ಖರೀದಿಸುತ್ತಿದ್ದರು. ನೂರಾರು ಮಂದಿ ಈ ಜಾಲಕ್ಕೆ ಬಲಿಯಾಗಿರುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ದೂರು: ಬಾಣಸವಾಡಿಯ ಸ್ಪೆಷಲಿಸ್ಟ್ ಆಸ್ಪತ್ರೆಯ ನಿರ್ದೇಶಕ ಡಾ.ಶಫೀಕ್ ಎಂಬುವರು ತಮ್ಮ ಆಸ್ಪತ್ರೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಕಿಡ್ನಿ ವ್ಯವಹಾರ ಮಾಡುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದರು.

ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟು ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಪತ್ತೆಯಾಗಿದ್ದಾರೆ. ಬಂಧಿತರಿಂದ ಬ್ಯಾಂಕ್ ದಾಖಲೆ, ಮೊಬೈಲ್ ಹಾಗೂ ಪಾಸ್‌ಪೋರ್ಟ್‌ಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಪಿರವಿ ಪ್ರಸಾದ್ ತಿಳಿಸಿದ್ದಾರೆ.

ಬಾಕ್ಸ್..ಕಿಡ್ನಿ ಮಾರಾಟ ಮತ್ತು ಖರೀದಿ ಮಾಡುವುದಾಗಿ Dr.gokula krishnan22@gmail.com ಇಮೇಲ್ ಮೂಲಕ ಹಾಗೂ https://sellkidney.sit ವೆಬ್ಸೈಟ್ ಮೂಲಕ ಆರೋಪಿಗಳು ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದರು ಎನ್ನುವ ಮಾಹಿತಿ ತನಿಖೆಯಲ್ಲಿ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News