ಜ.18ರಿಂದ ಹಾರ್ದಿಕ್ ಪಟೇಲ್ ಸುಳಿವಿಲ್ಲ: ಪತ್ನಿಯ ಅಳಲು

Update: 2020-02-10 16:02 GMT

ಅಹ್ಮದಾಬಾದ್,ಫೆ.10: ಗುಜರಾತಿನ ಕಾಂಗ್ರೆಸ್ ನಾಯಕ ಹಾಗೂ ಪಾಟಿದಾರ್ ಮೀಸಲಾತಿ ಆಂದೋಲನದ ನೇತಾರ ಹಾರ್ದಿಕ್ ಪಟೇಲ್ ಅವರನ್ನು 2015ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.18ರಂದು ಪೊಲೀಸರು ಬಂಧಿಸಿದ್ದು,ಆಗಿನಿಂದಲೂ ಅವರ ಸುಳಿವಿಲ್ಲ ಎಂದು ಪಟೇಲ್ ಪತ್ನಿ ಕಿಂಜಲ್ ಸೋಮವಾರ ಇಲ್ಲಿ ಅಳಲು ತೋಡಿಕೊಂಡಿದ್ದಾರೆ.

2015ರ ಪಾಟಿದಾರ್ ಮೀಸಲಾತಿ ಆಂದೋಲನಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣಗಳನ್ನು ಹಾರ್ದಿಕ್ ಎದುರಿಸುತ್ತಿದ್ದು, ವಿಚಾರಣೆಗೆ ಗೈರುಹಾಜರಾಗಿದ್ದಕ್ಕಾಗಿ ನ್ಯಾಯಾಲಯವು ಅವರ ವಿರುದ್ಧ ಜಾಮೀನುರಹಿತ ವಾರಂಟ್‌ನ್ನು ಹೊರಡಿಸಿತ್ತು.

ಬಂಧನದ ನಾಲ್ಕು ದಿನಗಳ ಬಳಿಕ ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತಾದರೂ ಪಟನ್ ಮತ್ತು ಗಾಂಧಿನಗರ ಜಿಲ್ಲೆಗಳಲ್ಲಿ ದಾಖಲಾಗಿದ್ದ ಇತರ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೆ ಬಂಧಿಸಲಾಗಿತ್ತು. ಹಾರ್ದಿಕ್ ಜ.24ರಂದು ಈ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರು.

ಆದರೆ ವಿಚಾರಣೆಗೆ ಮತ್ತೆ ಗೈರುಹಾಜರಾಗಿದ್ದರಿಂದ ವಿಚಾರಣಾ ನ್ಯಾಯಾಲಯವು ಫೆ.7ರಂದು ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ.

ಹಾರ್ದಿಕ್ ಜ.18ರಂದು ಬಂಧಿಸಲ್ಪಟ್ಟಾಗಿನಿಂದಲೂ ಅವರ ಸುಳಿವು ಸಿಕ್ಕಿಲ್ಲ. ಅವರೆಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲವಾದರೂ ಪೊಲೀಸರು ಅವರನ್ನು ಕೇಳಿಕೊಂಡು ಮನೆಗೆ ಬರುತ್ತಿರುತ್ತಾರೆ ಎಂದು ಪಾಟಿದಾರ್ ಮೀಸಲಾತಿ ಆಂದೋಲನದ ನಾಯಕರು ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಕಿಂಜಲ್ ತಿಳಿಸಿದರು.

ಗುಜರಾತಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾರ್ದಿಕ್ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News