ಆಸ್ತಿ ತೆರಿಗೆ ಪಾವತಿಸದ ಮಾಲಕರ ಪಟ್ಟಿ ತಯಾರಿಸಿದ ಬಿಬಿಎಂಪಿ

Update: 2020-02-10 18:19 GMT

ಬೆಂಗಳೂರು, ಫೆ.10: ಬಿಬಿಎಂಪಿ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಟಾಪ್ 20 ಆಸ್ತಿ ಮಾಲಕರ ಪಟ್ಟಿಯನ್ನು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಸಿದ್ಧಪಡಿಸಿಕೊಂಡಿದ್ದಾರೆ.

ಪ್ರತಿ ವಲಯದ ಪ್ರಮುಖ 20 ಆಸ್ತಿ ಮಾಲಕರಿಂದಲೇ ಪಾಲಿಕೆಗೆ 52.20 ಕೋಟಿ ರೂ. ಮೊತ್ತ ಬಾಕಿ ಬರಬೇಕಾಗಿದೆ. ಈ ಮೊತ್ತವನ್ನು ಪಾಲಿಕೆ ವಸೂಲಿ ಮಾಡಿದರೆ ತನ್ನ ತ್ತೈಮಾಸಿಕ ಆಡಳಿತಾತ್ಮಕ ವೆಚ್ಚವನ್ನು ಸರಿದೂಗಿಸಬಹುದಾಗಿದೆ.

ಪಾಲಿಕೆ ಸಿದ್ಧಪಡಿಸಿಕೊಂಡಿರುವ ಪಟ್ಟಿಯಲ್ಲಿ ಪೊಲೀಸ್ ಕ್ವಾಟ್ರಸ್, ಕೆಎಸ್ಸಾರ್ಟಿಸಿ, ಬಿಎಂಟಿಸಿ, ಭಾರತೀಯ ಆಹಾರ ನಿಗಮ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಮಾನ್ಯತಾ ರಿಯಾಲಿಟಿ, ಜಿಲ್ಲಾ ಶಸಸ್ತ್ರ ಪೊಲೀಸ್ ಮೀಸಲು ಪಡೆ ಅಗ್ರ ಸ್ಥಾನದಲ್ಲಿದೆ. ಇವುಗಳಿಂದಲೇ ಪಾಲಿಕೆಗೆ ಕೋಟ್ಯಂತರ ರೂ. ಬಾಕಿ ಇದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳು ಸಂಬಂಧ ಪಟ್ಟ ಸಂಸ್ಥೆ ಗಳಿಗೆ ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಾರೆ.

ಪಾಲಿಕೆಗೆ ಒಟ್ಟು ಅಂದಾಜು 1,450 ಕೋಟಿ ರೂ. (ಬಡ್ಡಿ ಮತ್ತು ಅಸಲು ಸೇರಿ) ಬಾಕಿಯಿದ್ದು, ಇದರಲ್ಲಿ ಪ್ರಮುಖ 20 ಆಸ್ತಿ ತೆರಿಗೆ ಬಾಕಿ ಮೊತ್ತವನ್ನು ಆದ್ಯತೆಯ ಮೇಲೆ ವಸೂಲಿ ಮಾಡಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆಸ್ತಿ ಮಾಲಕರು ಕಳೆದ 10 ವರ್ಷಗಳಿಂದಲೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೂ ಪಾಲಿಕೆ ನೋಟಿಸ್ ನೀಡುವುದನ್ನು ಬಿಟ್ಟು ಮುಂದಕ್ಕೆ ಸಾಗುತ್ತಿಲ್ಲ.

10 ವರ್ಷಗಳಿಂದಲೂ ನೋಟಿಸ್: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕೆಲವು ಮಾಲಕರಿಗೆ ಪಾಲಿಕೆಯ ಅಧಿಕಾರಿಗಳು ಕಳೆದ 10 ವರ್ಷಗಳಿಂದಲೂ ನೋಟಿಸ್, ವಾರೆಂಟ್ ಜಾರಿ ಮಾಡುತ್ತಿದ್ದಾರೆ. ಆದರೆ, ಆಸ್ತಿ ಮಾಲಕರು ಪಾಲಿಕೆಯ ನೋಟಿಸ್‌ಗಳಿಗೆ ಕ್ಯಾರೇ ಎನ್ನುತ್ತಿಲ್ಲ ಎಂಬ ಅಪವಾದವೂ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News