ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮುಹಮ್ಮದ್ ನಲಪಾಡ್ ಆರೋಪಿ: ವಿಚಾರಣೆಗೆ ಹಾಜರಾಗಲು ಸೂಚನೆ

Update: 2020-02-11 12:54 GMT

ಬೆಂಗಳೂರು, ಫೆ.11: ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ವಿರುದ್ಧ ಅಪಘಾತಕ್ಕೆ ಸಂಬಂಧಿಸಿದಂತೆ ಹಿಟ್ ಅಂಡ್ ರನ್ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂಚಾರ ಪೊಲೀಸರು ನೋಟಿಸ್ ಜಾರಿಗೊಳಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ನಗರದ ಮೇಖ್ರಿ ವೃತ್ತದ ಕೆಳ ಸೇತುವೆಯಲ್ಲಿ ರವಿವಾರ(ಫೆ.9) ಮಧ್ಯಾಹ್ನ 2:30 ಗಂಟೆ ಸುಮಾರಿಗೆ ಕಾರೊಂದು ಬೈಕ್‌ಗೆ ಗುದ್ದಿ, ನಂತರ ಆಟೋಗೆ ಢಿಕ್ಕಿ ಹೊಡೆದಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡು ಸಂಚಾರ ವಿಭಾಗದ ಪೊಲೀಸರು ತನಿಖೆ ನಡೆಸಿದಾಗ ಮುಹಮ್ಮದ್ ನಲಪಾಡ್ ಕಾರು ಚಾಲನೆ ಮಾಡುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ. ಈ ಸಂಬಂಧ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಓಡಿ ಹೋದ?: ಅತಿ ವೇಗವಾಗಿ ಐಷರಾಮಿ ಕಾರು ಚಾಲನೆ ಮಾಡುತ್ತಿದ್ದ ಮುಹಮ್ಮದ್ ನಲಪಾಡ್, ಏಕಾಏಕಿ ಮೇಖ್ರಿ ವೃತ್ತದ ಕೆಳ ಸೇತುವೆಯಲ್ಲಿ ಬೈಕ್‌ಗೆ ಢಿಕ್ಕಿ ಹೊಡೆದಿದ್ದ. ಇದರ ಪರಿಣಾಮ ಆಟೋವೊಂದು ಜಖಂಗೊಂಡಿತ್ತು. ಕೃತ್ಯವನ್ನು ಸ್ಥಳೀಯ ಸವಾರರು ಪ್ರಶ್ನಿಸುತ್ತಿದ್ದಂತೆ ನಲಪಾಡ್ ಪರಾರಿಯಾದ ಎನ್ನಲಾಗಿದೆ. ಇನ್ನು, ಅವಘಡದಲ್ಲಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿ ಆಟೊ ಜಖಂಗೊಂಡಿತ್ತು. ಘಟನೆಯಿಂದಾಗಿ ಅಂದು ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

ಸಿಬ್ಬಂದಿ ಬಂದಿದ್ದ: ಅಪಘಾತ ಬೆಳಕಿಗೆ ಬಂದ ಬೆನ್ನಲ್ಲೇ ಓರ್ವ ಭದ್ರತಾ ಸಿಬ್ಬಂದಿ ತಾನೇ ಕಾರು ಚಾಲನೆ ಮಾಡಿದ್ದು ಎಂದು ಹೇಳಿಕೊಂಡು, ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದ. ಆದರೆ, ಆತನನ್ನು ವಿಚಾರಣೆಗೊಳಪಡಿಸಿದಾಗ ಮುಹಮ್ಮದ್ ನಲಪಾಡ್ ಕೃತ್ಯವೆಸಗಿರುವುದಾಗಿ ಗೊತ್ತಾಗಿದೆ.

‘ತನಿಖೆ ಕೈಗೊಳ್ಳುತ್ತೇವೆ’

ಪ್ರಾಥಮಿಕ ವಿಚಾರಣೆಯಲ್ಲಿ ಶಾಸಕನ ಪುತ್ರ ಮುಹಮ್ಮದ್ ನಲಪಾಡ್ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿ ನೋಟಿಸ್ ನೀಡಲಾಗಿದ್ದು, ತನಿಖೆ ನಡೆಸಲಾಗುವುದು.

-ಡಾ.ಬಿ.ಆರ್.ರವಿಕಾಂತೇಗೌಡ, ಸಂಚಾರ ಪೊಲೀಸ್ ಜಂಟಿ ಆಯುಕ್ತ

ಪ್ರಮುಖ ಆರೋಪಿ ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಗಂಭೀರ ಆರೋಪ ಪ್ರಕರಣದಲ್ಲಿ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಪ್ರಮುಖ ಆರೋಪಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News