×
Ad

ಕೊರೋನಾ ವೈರಸ್ ಹರಡದಂತೆ ಎಚ್ಚರವಹಿಸಿ: ಬೆಂಗಳೂರು ನಗರ ಅಪರ ಜಿಲ್ಲಾಧಿಕಾರಿ ರೂಪಾ

Update: 2020-02-11 19:59 IST

ಬೆಂಗಳೂರು, ಫೆ. 11: ಕೊರೋನಾ ವೈರಸ್ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟು ಮಾಡುವುದರಿಂದ ವೈರಸ್ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಂದು ಅಪರ ಜಿಲ್ಲಾಧಿಕಾರಿ ರೂಪಾ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ಮಂಗಳವಾರ ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ನಗರ ಜಿಲ್ಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊರೋನಾ ವೈರಸ್-ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕೊರೋನಾ ವೈರಸ್ ಎಂಬುದು ಮೊದಲ ಬಾರಿಗೆ ಚೀನಾ ದೇಶದ ವುಹಾನ್‌ನಲ್ಲಿ ಪತ್ತೆಯಾಗಿದ್ದು, ದೇಶದ ಜನತೆಗೆ ಯಾವುದೇ ರೀತಿಯಾಗಿ ವೈರಸ್ ಹರಡದಂತೆ ಹಾಗೂ ಜನತೆಗೆ ತೊಂದರೆಯಾಗದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಭಿತ್ತಿ ಪತ್ರಗಳನ್ನು ಸರಕಾರಿ ಬಸ್ಸುಗಳ ಮೇಲೆ ಅಂಟಿಸುವುದು ಹಾಗೂ ಬಸ್ಸ್ ನಿಲ್ದಾಣಗಳಲ್ಲಿ ಪೋಸ್ಟರ್‌ಗಳು ಮತ್ತು ಸ್ಟಾಂಡೀಸ್‌ಗಳ ಮುಖಾಂತರ ಪ್ರದರ್ಶಿಸುವುದು, ಹೊರ ರಾಜ್ಯದಿಂದ ಬರುವ ವಿಶೇಷವಾಗಿ ಕೇರಳ ರಾಜ್ಯದಿಂದ ಬರುವ ಪ್ರವಾಸಿಗಳ ಮೇಲೆ ನಿಗಾವಹಿಸುವಂತೆ ಸಾರಿಗೆ ಇಲಾಖೆಗೆ ಸೂಚಿಸಿದರು.

ಶಾಲಾ ಮಕ್ಕಳಿಗೆ ರೋಗ ಲಕ್ಷಣಗಳ ಕುರಿತು, ಶುದ್ಧ ಕುಡಿಯುವ ನೀರು, ಶೌಚಾಲಯಗಳ ಬಳಕೆ, ಶಾಲಾ ಆವರಣದ ಶುಚಿತ್ವ ನಿರ್ವಹಣೆಗೆ ಆದ್ಯತೆ ನೀಡುವುದರ ಜೊತೆಗೆ ಕೊರೋನಾ ವೈರಸ್ ಬಗ್ಗೆ ಘೋಷಣೆ, ಕರಪತ್ರಗಳ ವಿತರಣೆ, ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕತೆಯರು ಮನೆಗಳಿಗೆ ಭೇಟಿ ನೀಡಿ ಗರ್ಭಿಣಿ ತಾಯಂದಿರು ಹಾಗೂ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮಾಹಿತಿ ನೀಡುವುದರ ಜೊತೆಗೆ ವೈರಸ್‌ನ ಲಕ್ಷಣಗಳು ಕಂಡುಬಂದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವಂತೆ ಉತ್ತೇಜಿಸಬೇಕೆಂದ ಅವರು, ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ಹಾಗೂ ದೇಶದಿಂದ ಹೊರ ಹೋಗುವ ಪ್ರವಾಸಿಗರ ಮಾಹಿತಿ ಒದಗಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದರು.

ನಗರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮನೋಹರ್ ಮಾತನಾಡಿ, ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ವರದಿಯಾಗಿದ್ದು, ಅನಾರೋಗ್ಯ ಪೀಡಿತ ವ್ಯಕ್ತಿಂದ ಕೆಮ್ಮು ಅಥವಾ ಸೀನಿನ ಮೂಲಕ ಅಥವಾ ಕಲುಷಿತ ಕೈಗಳಿಂದ ಮುಟ್ಟುವುದರಿಂದ ಕೊರೋನಾ ವೈರಸ್ ಹರಡುತ್ತದೆ. ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಭೇದಿ ಸೋಂಕಿನ ಲಕ್ಷಣಗಳಾಗಿದ್ದು, ಹೀಗಾಗಿ ವೈರಸ್‌ನ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಚೀನಾ ದೇಶದಲ್ಲಿ ಫೆಬ್ರವರಿ 10 ಕ್ಕೆ 40,171 ಕೊರೊನ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಮರಣ ಸಂಖ್ಯೆ ಸಾವಿರ ದಾಟಿದೆ. ಭಾರತದ ಕೇರಳ ರಾಜ್ಯದಲ್ಲಿ 3 ಪ್ರಕರಣಗಳು ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೋಂಕಿನ ಬಗ್ಗೆ ಪತ್ತೆಯಾದಲ್ಲಿ ಆರೋಗ್ಯ ಅಧಿಕಾರಿಗಳ ಹೆಲ್ಪ್‌ಲೈನ್ ಸಂಖ್ಯೆ: 104, ದೂರವಾಣಿ ಸಂಖ್ಯೆ-080-2222 8541/2237 4658 ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಸಂಖ್ಯೆ: 080-2951 6143ಗೆ ಸಂಪರ್ಕಿಸಬಹುದು ಎಂದು ಕೋರಲಾಗಿದೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಡಾ.ಶ್ರೀನಿವಾಸ್, ಬೆಂಗಳೂರು ದಕ್ಷಿಣ ವಿಭಾಗದ ಸಾರ್ವಜನಿಕ ಶಿಕ್ಷಣಾಧಿಕಾರಿ ವಿರೂಪಾಕ್ಷ, ಸಹಾಯಕ ಪೊಲೀಸ್ ಆಯುಕ್ತೆ ಶೋಭಾ ಎಸ್.ಕಟ್ವಾಕರ್, ಬೆಂ.ಉತ್ತರ ವಿಭಾಗದ ಸಾರ್ವಜನಿಕ ಶಿಕ್ಷಣಾಧಿಕಾರಿ ರೇಣುಕಾ, ಕೆಎಸ್ಸಾರ್ಟಿಸಿ ಆಸ್ಪತ್ರೆಯ ಬೀನಾ, ಕೃಷಿ ಇಲಾಖೆಯ ಕೆ.ಆರ್.ವೆಂಕಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News