×
Ad

ಲ್ಯಾಪ್‌ಟಾಪ್ ವಿತರಣೆಗೆ ಆಗ್ರಹ: ಪೊಲೀಸರು ವಶಕ್ಕೆ ಪಡೆದರೂ ಪ್ರತಿಭಟನೆ ನಿಲ್ಲಿಸದ ಅಂಧ ವಿದ್ಯಾರ್ಥಿಗಳು

Update: 2020-02-11 20:08 IST

ಬೆಂಗಳೂರು, ಫೆ.11: ಉಚಿತ ಲ್ಯಾಪ್‌ಟಾಪ್ ನೀಡುವುದನ್ನು ರಾಜ್ಯ ಸರಕಾರ ನಿಲ್ಲಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ನೂರಾರು ಅಂಧ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ಮಂಗಳವಾರ ನಗರದ ವಿವಿ ಗೋಪುರದ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರ ಕಚೇರಿ ಎದುರು ರಾಷ್ಟ್ರೀಯ ಅಂಧರ ಒಕ್ಕೂಟದ ರಾಜ್ಯ ಯುವ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಅಂಧ ವಿದ್ಯಾರ್ಥಿ ಗಳು ತಮಗೆ ಉಚಿತ ಲ್ಯಾಪ್‌ಟಾಪ್ ನೀಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ತಮಗೆ ಸ್ವಾತಂತ್ರ ಉದ್ಯಾನವನ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಮಾಡದಂತೆ ಎಚ್ಚರಿಸಿ ಎಲ್ಲರನ್ನು ವಶಕ್ಕೆ ಪಡೆದು ಇಲ್ಲಿನ ಗರುಡಾ ಮಾಲ್ ವ್ಯಾಪ್ತಿಯ ಖಾಲಿ ಪ್ರದೇಶಕ್ಕೆ ಕರೆದೊಯ್ದರು. ಆದರೂ, ಪಟ್ಟುಬಿಡದ ವಿದ್ಯಾರ್ಥಿಗಳು ಅಲ್ಲಿಯೂ ಪ್ರತಿಭಟಿಸಿ ಗಮನ ಸೆಳೆದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಯುವ ಸಮಿತಿ ಅಧ್ಯಕ್ಷ ವೀರೇಶ್, ಇಲಾಖೆ 2015ರಿಂದ 2017ರವರೆಗೆ ಅಂಧ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಗಿದೆ. 2018ರಿಂದ ಇಲ್ಲಿವರೆಗೆ ಲ್ಯಾಪ್‌ಟಾಪ್ ವಿತರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ತುಂಬಾ ಮುಖ್ಯವಾಗಿದೆ. ಅವರು ಪರೀಕ್ಷೆಗೆ ತಯಾರಿ ನಡೆಸಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದಕ್ಕಾಗಿ ಸಿಡಿಗಳು, ನಮ್ಮ ಲಿಪಿಯಲ್ಲಿ ಅನೇಕ ಮಾಹಿತಿಯು ಇದ್ದು ಅದರ ಪ್ರಯೋಜನ ಪಡೆಯಲು ಲ್ಯಾಪ್‌ಟಾಪ್ ಅವಶ್ಯವಾಗಿದೆ ಎಂದು ತಿಳಿಸಿದರು.

ವಿವಿಧ ಕಾರಣಗಳಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ವಿಳಂಬ ಧೋರಣೆಯಿಂದ ಅಂಧರ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂದು ವೀರೇಶ್ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News