ವಕ್ಫ್ ಸುರಕ್ಷಾ ಯೋಜನೆ: 50 ಕೋಟಿ ರೂ. ಅನುದಾನ ಒದಗಿಸಲು ಸಿಎಂಗೆ ಮನವಿ ಸಲ್ಲಿಕೆ

Update: 2020-02-11 15:08 GMT
ಡಾ.ಮುಹಮ್ಮದ್ ಯೂಸುಫ್

ಬೆಂಗಳೂರು, ಫೆ.11: ರಾಜ್ಯದಲ್ಲಿನ ವಕ್ಫ್ ಸೊತ್ತುಗಳ ದಾಖಲೆಗಳ ಸಂಗ್ರಹ, ಡಿಜಿಟಲೀಕರಣ ಹಾಗೂ ಒತ್ತುವರಿ ತೆರವು ಮೂಲಕ ವಕ್ಫ್ ಮಂಡಳಿಗೆ ವಾಪಸ್ಸು ಪಡೆಯಲು ‘ವಕ್ಫ್ ಸುರಕ್ಷಾ ಯೋಜನೆ’ಗೆ 50 ಕೋಟಿ ರೂ. ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ಮನವಿ ಮಾಡಿದ್ದಾರೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳ ನಿಯೋಗದ ಜೊತೆಯಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಲಾಗಿದೆ.

ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್ ಮತ್ತು ಮುಅಝ್ಝಿನ್‌ಗಳಿಗೆ ಸಾಮಾನ್ಯವಾಗಿ ಯಾವುದೇ ರೀತಿಯ ಆದಾಯದ ಮೂಲ ಇರುವುದಿಲ್ಲ. ಇವರು ಜೀವನ ನಿರ್ವಹಣೆ ಹಾಗೂ ಮನೆ ಬಾಡಿಗೆ ಕಟ್ಟುವುದು ಕಷ್ಟಕರವಾಗಿದೆ. ಆದುದರಿಂದ, ಖಾಸಗಿ ಸಹಭಾಗಿತ್ವದಲ್ಲಿ ಆಶಿಯಾನಾ ಯೋಜನೆ(ಪೇಶ್ ಇಮಾಮ್ ಮತ್ತು ಮುಅಝ್ಝಿನ್‌ಗಳಿಗೆ ವಸತಿ ಗೃಹ ನಿರ್ಮಾಣ ಯೋಜನೆ) ಜಾರಿಗೆ ತರಲು 10 ಕೋಟಿ ರೂ.ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.

ವಕ್ಫ್ ತರಬೇತಿ ಯೋಜನೆ(ವಕ್ಫ್ ಸಂಸ್ಥೆಗಳ ಸಿಬ್ಬಂದಿಗಳಿಗೆ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಿಗೆ ಹಾಗೂ ಮುತವಲ್ಲಿಗಳಿಗೆ ತರಬೇತಿ ಯೋಜನೆ)ಗಾಗಿ 5 ಕೋಟಿ ರೂ. ಹಾಗೂ ‘ತ್ರಿವಳಿ ತಲಾಕ್’ ಸಂತ್ರಸ್ತೆಯರಿಗೆ ಸರಕಾರದಿಂದ ಮಾಸಿಕ 1 ಸಾವಿರ ರೂ.ಸಹಾಯಧನ ಒದಗಿಸಲು 2 ಕೋಟಿ ರೂ.ಗಳನ್ನು 2020-21ನೇ ಸಾಲಿನ ಬಜೆಟ್‌ನಲ್ಲಿ ಈ ಎಲ್ಲ ಹೊಸ ಯೋಜನೆಗಳಿಗೆ ಅನುದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.

ರಾಜ್ಯ ವಕ್ಫ್ ಮಂಡಳಿಯ ನಿರ್ವಹಣೆ ಮತ್ತು ಇತರೆ ಚಟುವಟಿಕೆಗಳಿಗಾಗಿ 23 ಕೋಟಿ ರೂ.ಗಳ ಅವಶ್ಯಕತೆಯಿದೆ. 2019-20ನೇ ಸಾಲಿನಲ್ಲಿ ಕೇವಲ 10 ಕೋಟಿ ರೂ.ಬಿಡುಗಡೆಯಾಗಿತ್ತು. 2020-21ನೇ ಸಾಲಿನಲ್ಲಿ 15 ಕೋಟಿ ರೂ.ಗಳ ಅಂದಾಜು ಆಯವ್ಯಯ ಪ್ರಸ್ತಾಪಿಸಲಾಗಿದ್ದು, ಹೆಚ್ಚುವರಿಯಾಗಿ 5 ಕೋಟಿ ರೂ.ಗಳ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.

ರಾಜ್ಯ ವಕ್ಫ್ ಮಹಿಳಾ ಅಭಿವೃದ್ಧಿ ಪ್ರತಿಷ್ಠಾನಕ್ಕೆ 2020-21ನೇ ಸಾಲಿನಲ್ಲಿ 3 ಕೋಟಿ ರೂ.ಗಳ ಅಂದಾಜು ಆಯವ್ಯಯ ಪ್ರಸ್ತಾಪಿಸಲಾಗಿದ್ದು, ಹೆಚ್ಚುವರಿಯಾಗಿ 35 ಲಕ್ಷ ರೂ.ಗಳನ್ನು ಒದಗಿಸುವಂತೆ ಹಾಗೂ ರಾಜ್ಯ ಹಜ್ ಸಮಿತಿಯ ನಿರ್ವಹಣೆಗಾಗಿ 2.75 ಕೋಟಿ ರೂ.ಅಂದಾಜು ಆಯವ್ಯಯ ಪ್ರಸ್ತಾಪಿಸಲಾಗಿದ್ದು, ಹೆಚ್ಚುವರಿಯಾಗಿ 35 ಲಕ್ಷ ರೂ.ಅನುದಾನದ ಅವಶ್ಯಕತೆಯಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಾಜ್ಯ ವಕ್ಫ್ ಕೌನ್ಸಿಲ್‌ಗೆ 3 ಕೋಟಿ ರೂ.ಗಳ ಆಯವ್ಯಯ ಪ್ರಸ್ತಾಪಿಸಲಾಗಿದ್ದು, ಹೆಚ್ಚುವರಿಯಾಗಿ 25 ಲಕ್ಷ ರೂ.ಅನುದಾನ ಒದಗಿಸುವಂತೆ ಕೋರಲಾಗಿದೆ. ಒಟ್ಟಾರೆ, 2020-21ನೇ ಸಾಲಿಗೆ 198.20 ಕೋಟಿ ರೂ.ಆಯವ್ಯಯ ಪ್ರಸ್ತಾಪಿಸಲಾಗಿದೆ.

ನಿಯೋಗದಲ್ಲಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ, ಮಾಜಿ ಸಚಿವರಾದ ನಸೀರ್ ಅಹ್ಮದ್, ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಶಾಸಕರಾದ ಕನೀಝ್ ಫಾತಿಮಾ, ರಿಝ್ವಾನ್ ಅರ್ಶದ್, ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಲೆಹರ್ ಸಿಂಗ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ವಕ್ಫ್ ಬೋರ್ಡ್ ಸದಸ್ಯ ಮೌಲಾನ ಎನ್‌ಕೆಎಂ ಶಾಫಿ ಸಅದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News