ಹೃದಯದಲ್ಲಿ ರಂಧ್ರವನ್ನು ಸೂಚಿಸುವ ಲಕ್ಷಣಗಳು ನಿಮಗೆ ಗೊತ್ತೇ?

Update: 2020-02-11 16:19 GMT

ಹೃದಯದಲ್ಲಿ ರಂಧ್ರದಂತಹ ಜನ್ಮದತ್ತ ದೋಷಗಳ ಬಗ್ಗೆ ತಿಳಿದಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ನೆರವಾಗುತ್ತದೆ. ಏಟ್ರಿಯಲ್ ಸೆಪ್ಟಲ್ ಡಿಫೆಕ್ಟ್ (ಎಎಸ್‌ಡಿ) ಅನ್ನು ಕೇಳಿದ್ದೀರಾ? ಅದನ್ನು ಸರಳವಾಗಿ ಹೃದಯದ ಹೃತ್ಕರ್ಣಗಳ ನಡುವಿನ ವಿಭಾಜಕ ಭಿತ್ತಿಯಲ್ಲಿಯ ರಂಧ್ರ ಎಂದು ಬಣ್ಣಿಸಬಹುದು. ಆಘಾತಕಾರಿ ಅಂಶವೆಂದರೆ ವ್ಯಕ್ತಿಯಲ್ಲಿ ಈ ದೋಷ ಜನ್ಮದತ್ತವಾಗಿರುತ್ತದೆ. ಸಣ್ಣ ದೋಷಗಳು ಸಮಸ್ಯಾತ್ಮಕವಲ್ಲದಿರಬಹುದು ಮತ್ತು ಶೈಶವಾವಸ್ಥೆಯಲ್ಲಿ ಅಥವಾ ಬಾಲ್ಯಾವಸ್ಥೆಯಲ್ಲಿಯೇ ಮುಚ್ಚಿಕೊಳ್ಳಬಹುದು. ಹೃದಯದಲ್ಲಿಯ ರಂಧ್ರವು ಶ್ವಾಸಕೋಶಗಳ ಮೂಲಕ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ,ಅಲ್ಲದೆ ದೀರ್ಘಕಾಲಿಕ ಎಎಸ್‌ಡಿಯು ಹೃದಯ ಮತ್ತು ಶ್ವಾಸಕೋಶಗಳಿಗೆ ಹಾನಿಯನ್ನುಂಟು ಮಾಡುವ ಮೂಲಕ ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡುತ್ತದೆ. ದೋಷಗಳು ದೊಡ್ಡಪ್ರಮಾಣದ್ದಾಗಿದ್ದರೆ ಆಯಸ್ಸು ಕ್ಷೀಣಿಸುತ್ತದೆ, ಬಲಪಾರ್ಶ್ವ ಹೃದಯ ವೈಫಲ್ಯ ಮತ್ತು ಹೃದಯ ಬಡಿತ ದರದಲ್ಲಿ ಅಸಹಜತೆಗಳಿಗೆ ಕಾರಣವಾಗುತ್ತವೆ.

 ಉಸಿರಾಟದ ತೊಂದರೆ, ಬಳಲಿಕೆ, ಕಾಲುಗಳಲ್ಲಿ ಊತ, ಹೃದಯ ಬಡಿತದಲ್ಲಿ ಏರಿಳಿತ ಇವು ಎಸ್‌ಎಡಿಯ ಲಕ್ಷಣಗಳಲ್ಲಿ ಸೇರಿವೆ. ಇಂತಹ ಲಕ್ಷಣಗಳು ಕಂಡು ಬಂದಾಗ ತಕ್ಷಣ ವೈದ್ಯರನ್ನು ಭೇಟಿಯಾಗಿ ಸಕಾಲದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

   ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ (ವಿಎಸ್‌ಡಿ) ಇನ್ನೊಂದು ದೋಷವಾಗಿದ್ದು ಹೃತ್ಕುಕ್ಷಿಗಳ ನಡುವಿನ ವಿಭಾಜಕ ಭಿತ್ತಿಯಲ್ಲಿ ಜನ್ಮದಿಂದಲೇ ಇರುವ ರಂಧ್ರವಾಗಿದೆ. ವಿಎಸ್‌ಡಿಯು ಅಷ್ಟೊಂದು ಸಮಸ್ಯೆಯನ್ನುಂಟು ಮಾಡದಿರಬಹುದು ಮತ್ತು ಹಲವಾರು ಸಣ್ಣ ವಿಎಸ್‌ಡಿಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಆದರೆ ಮಧ್ಯಮ ಮತ್ತು ದೊಡ್ಡ ಗಾತ್ರದ ವಿಎಸ್‌ಡಿಗಳಿದ್ದರೆ ತೊಂದರೆಗಳಿಂದ ಪಾರಾಗಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.

 ಉಸಿರಾಡಲು ಕಷ್ಟ ಅಥವಾ ವೇಗವಾಗಿ ಉಸಿರಾಡುವಿಕೆ,ಆಯಾಸ,ಶರೀರದ ತೂಕ ಹೆಚ್ಚದಿರುವುದು ಇವು ವಿಎಸ್‌ಡಿಯ ಲಕ್ಷಣಗಳಲ್ಲಿ ಸೇರಿವೆ. ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯುವುದು ಅಗತ್ಯವಾಗುತ್ತದೆ. ರಂಧ್ರವು ತೆರೆದೇ ಇದ್ದರೆ ಆ ಸ್ಥಿತಿಯನ್ನು ಪೇಟೆಂಟ್ ಡಕ್ಟಸ್ ಆರ್ಟರಿಯೊಸಸ್ (ಪಿಡಿಎ) ಎಂದು ಕರೆಯಲಾಗುತ್ತದೆ. ಶೈಶವಾವಸ್ಥೆಯಲ್ಲಿ ಅಥವಾ ಬಾಲ್ಯಾವಸ್ಥೆಯಲ್ಲಿ ದೊಡ್ಡ ಪಿಡಿಎ ‘ಟೆಟ್ರಾಲಜಿ ಆಫ್ ಫಾಲಟ್’ ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಇದು ಜನ್ಮದಿಂದಲೇ ಬಂದಿರುವ ನಾಲ್ಕು ಹೃದಯ ದೋಷಗಳ ಸಮ್ಮಿಶ್ರ ಸ್ಥಿತಿಯಾಗಿದೆ. ಈ ದೋಷಗಳು ಹೃದಯದ ಸ್ವರೂಪದ ಮೇಲೆ ಪರಿಣಾಮವನ್ನು ಬೀರುತ್ತವೆ ಮತ್ತು ಇದರಿಂದಾಗಿ ಹೃದಯದಿಂದ ಆಮ್ಲಜನಕ ಕಡಿಮೆ ಪ್ರಮಾಣದಲ್ಲಿರುವ ರಕ್ತವು ಶರೀರದ ಇತರ ಭಾಗಗಳಿಗೆ ಪೂರೈಕೆಯಾಗುತ್ತದೆ. ಟೆಟ್ರಾಲಜಿ ಆಫ್ ಫಾಲಟ್ ದೋಷವುಳ್ಳವರಲ್ಲಿ ರಕ್ತವು ಸಾಕಷ್ಟು ಆಮ್ಲಜನಕವನ್ನು ಸಾಗಿಸುವುದಿಲ್ಲವಾದ್ದರಿಂದ ಚರ್ಮವು ನೀಲಿ ಛಾಯೆಯನ್ನು ಪ್ರದರ್ಶಿಸುತ್ತದೆ. ಈ ಲಕ್ಷಣವು ಮಗುವಿನಿಂದ ಮಗುವಿಗೆ ಭಿನ್ನವಾಗಿರಬಹುದು. ನೀಲಿ ಛಾಯೆಯ ಚರ್ಮ,ವೇಗದ ಉಸಿರಾಟ ಅಥವಾ ಕ್ಷೀಣ ಉಸಿರಾಟ,ಪ್ರಜ್ಞಾಶೂನ್ಯತೆ,ಹೃದಯದಲ್ಲಿ ವಿಲಕ್ಷಣ ಶಬ್ದ,ತುಂಬ ಹೊತ್ತಿನವರೆಗೆ ಅಳುವುದು ಮತ್ತು ಕೆರಳುವಿಕೆ ಇವು ಮಕ್ಕಳಲ್ಲಿ ಗೋಚರವಾಗುವ ಸಾಮಾನ್ಯ ಲಕ್ಷಣಗಳಾಗಿವೆ.

   ಮಕ್ಕಳಲ್ಲಿ ಮೇಲೆ ಉಲ್ಲೇಖಿಸಲಾದ ಲಕ್ಷಣಗಳಿದ್ದರೆ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆಯನ್ನು ಆರಂಭಿಸಬೇಕಾಗುತ್ತದೆ. ಹಲವಾರು ಮಕ್ಕಳು ಜನ್ಮದತ್ತ ಹೃದಯ ದೋಷಗಳನ್ನು ಹೊಂದಿರುತ್ತವೆ ಮತ್ತು ಹೆತ್ತವರಿಗೆ ಈ ಬಗ್ಗೆ ಅರಿವಿರುವುದಿಲ್ಲ,ಹೀಗಾಗಿ ಸಕಾಲಿಕ ಚಿಕಿತ್ಸೆಯಿಂದ ವಂಚಿತವಾಗುತ್ತವೆ. ಜನ್ಮದತ್ತ ಹೃದಯ ದೋಷಗಳಿರುವ ವಯಸ್ಕರು ಸಹ ವೈದ್ಯರೊಂದಿಗೆ ಸಮಾಲೋಚಿಸುವುದು ಕಡಿಮೆ. ಹೀಗಾಗಿ ಇಂತಹ ದೋಷಗಳ ಬಗ್ಗೆ ಅರಿವು ಇದ್ದರೆ ಸಕಾಲದಲ್ಲಿ ಅವುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News