ಐಪಿಎಸ್ ಅಧಿಕಾರಿ ಬಗೆಗಿನ ಭಿತ್ತಿ ಪತ್ರ ಹಂಚಿಕೆ ಆರೋಪ: ರವಿಕೃಷ್ಣಾ ರೆಡ್ಡಿ ಸೇರಿ ಇಬ್ಬರ ಬಂಧನ

Update: 2020-02-11 16:40 GMT

ಬೆಂಗಳೂರು, ಫೆ.11: ಐಪಿಎಸ್ ಅಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮೇಲೆ ಗಂಭೀರ ಆರೋಪ ಇರುವ ಹಿನ್ನೆಲೆ ಅವರನ್ನು ಬೇರೆ ಸ್ಥಾನಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕರಿಗೆ ಭಿತ್ತಿ ಪತ್ರ ಹಂಚಿಕೆ ಮಾಡಿದ ಆರೋಪದಡಿ ಇಬ್ಬರನ್ನು ಇಲ್ಲಿನ ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾರೆಡ್ಡಿ, ಜಂಟಿ ಕಾರ್ಯದರ್ಶಿ ರಘು ಜಾಣಗೆರೆ ಬಂಧಿತರು ಎಂದು ಹೇಳಲಾಗುತ್ತಿದೆ.

ಮಂಗಳವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭೇಟಿಯಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಮುಖರು, ಐಪಿಎಸ್ ಅಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮೇಲೆ ಗಂಭೀರ ಆರೋಪ ಪ್ರಕರಣ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ. ಹಾಗಾಗಿ, ಅವರನ್ನು ಈಶಾನ್ಯ ವಿಭಾಗ ಡಿಸಿಪಿ ಸ್ಥಾನದಿಂದ ವರ್ಗಾಯಿಸುವಂತೆ ಒತ್ತಾಯಿಸಿದ್ದರು. ಆದರೆ, ಆಯುಕ್ತರು ಯಾವುದೇ ಭರವಸೆ ನೀಡದ ಹಿನ್ನೆಲೆ ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರ ಮತ್ತು ಕೆಲ ದಾಖಲೆಗಳನ್ನು ರವಿಕೃಷ್ಣಾ ರೆಡ್ಡಿ ಸೇರಿದಂತೆ ಪ್ರಮುಖರು ಸಾರ್ವಜನಕರಿಗೆ ಹಂಚಿಕೆ ಮಾಡಿದ್ದರು. ಹಾಗಾಗಿ, ಬಂಧಿಸಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್ ಹೇಳಿದರು.

ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕೃಷ್ಣಾ ರೆಡ್ಡಿ, ಹಿರಿಯ ಪೊಲೀಸರ ಒತ್ತಡದಿಂದ ನಮ್ಮನ್ನು ಬಂಧಿಸಲಾಗಿದೆ. ಆದರೆ, ಸತ್ಯಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ಆರೋಪಿ ಸ್ಥಾನದಲ್ಲಿರುವ ಪೊಲೀಸರು ಮನೆಗೆ ಹೋಗಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News