ಕನ್ನಡಕ್ಕೆ ಕುತ್ತು ಬಂದಾಗ ಚಳವಳಿಯ ಸ್ಪರೂಪ ನೀಡಿದ ವ್ಯಕ್ತಿ ಚಿ.ಮೂ: ಮುಖ್ಯಮಂತ್ರಿ ಚಂದ್ರು

Update: 2020-02-11 17:02 GMT

ಬೆಂಗಳೂರು, ಫೆ.11: ಕನ್ನಡದ ಕೆಲಸಗಳಿಗೆ ಲೋಪ ಬಂದಾಗ ಒಂದು ಚಳವಳಿಯ ಸ್ವರೂಪ ನೀಡಿದ ವ್ಯಕ್ತಿ ಚಿದಾನಂದಮೂರ್ತಿ ಎಂದು ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಕಸಾಪದಲ್ಲಿ ಕನ್ನಡ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಡಾ.ಎಂ.ಚಿದಾನಂದಮೂರ್ತಿ ಮಾಸದ ಮಾತು ಎಂಬ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಿದಾನಂದರ ದೇಹ ಇದೀಗ ಇಲ್ಲದಿದ್ದರೂ, ಅವರು ಹಾಕಿಕೊಟ್ಟ ಹಾದಿ ಇನ್ನೂ ಜೀವಂತವಿದೆ. ನನಗೆ ಕನ್ನಡದ ಪರವಾಗಿ ಕೆಲಸ ಮಾಡಲು ಅವರೇ ಸ್ಪೂರ್ತಿ ಎಂದ ಮುಖ್ಯಮಂತ್ರಿ ಚಂದ್ರು, ಸಾಹಿತ್ಯದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಅವರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕನ್ನಡದ ವಿಷಯಕ್ಕೆ ಬಂದರೆ ಚಿ.ಮೂ. ಅಪಾರವಾದ ಕೆಲಸ ಮಾಡಿದ್ದಾರೆ. ಸಂಶೋಧನೆಯಲ್ಲಿ ಸಾಕಷ್ಟು ವಿಷಯಗಳನ್ನು ಹೊರತೆಗೆದು ಸಮಾಜದ ಮುಂದಿಟ್ಟಿದ್ದಾರೆ. ಇವರ ಯಾವುದೇ ಚಳವಳಿಯೂ ವಿಜೃಂಭಣೆಯಿಂದ ಇರಲಿಲ್ಲ. ಅಲ್ಲದೆ, ಢಾಂಬಿಕತನ ಇರಲಿಲ್ಲ ಎಂದ ಅವರು, ಗೋಕಾಕ್ ಚಳವಳಿಗೆ ದೊಡ್ಡ ಸ್ವರೂಪ ನೀಡಿದವರು ಚಿ.ಮು ಎಂದು ನುಡಿದರು.

ಮಾನವತಾವಾದಿಯಾಗಿದ್ದ ಚಿದಾನಂದಮೂರ್ತಿ, ಗೋಕಾಕ್ ಚಳವಳಿಯಲ್ಲಿ ಮರಣಹೊಂದಿದ ಅರಸಪ್ಪ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅವರ ಕೆಲವು ಚಿಂತನೆಗಳನ್ನು ನಾವ್ಯಾರು ಒಪ್ಪದೇ ಇದ್ದರೂ ಅವರನ್ನು ವ್ಯಕ್ತಿಯಾಗಿ ಒಪ್ಪದೇ ಇರಲು ಸಾಧ್ಯವಿಲ್ಲ ಎಂದರು.

ಚಿ.ಮೂ.ಸಾಹಿತ್ಯ, ಪಾಂಡಿತ್ಯ ಹೊರತು ಪಡಿಸಿ ಅವರ ಮಾನವೀಯತೆಯ ಬಗ್ಗೆ ಅರಿಯದವರಿಲ್ಲ. ಹೂ ಮಾರಾಟದ ಮುದುಕಿಗೆ ಕಲ್ಮಶ ರಹಿತವಾದ ಗುಣವಿರುತ್ತದೆ. ಅದೇ ರೀತಿಯೇ ಚಿ.ಮೂ. ಸಹ ಎಂದ ಅವರು, ರಾಜ್ಯ, ಗಡಿ ವಿಚಾರದಲ್ಲೂ ತಮ್ಮನ್ನು ತಾವು ಮರೆತು ಕನ್ನಡಕ್ಕಾಗಿ ಹೋರಾಟ ನಡೆಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಮಾಸದ ಮಾತು ಕಾರ್ಯಕ್ರಮದ ಸಂಚಾಲಕ ಆರ್.ಶೇಷಶಾಸ್ತ್ರಿ ಮಾತನಾಡಿ, ಕನ್ನಡದ ಚಳವಳಿ ಚಿ.ಮೂ.ಗೆ ಮತ್ತೊಂದು ಸಂಶೋಧನೆಯಾಗಿತ್ತು. ಕನ್ನಡದ ಬಗ್ಗೆ ಅವರಿಗಿದ್ದ ಒಲವು ಇಂದಿನ ವಿದ್ಯಾರ್ಥಿಗಳಿಗೆ ಮಾದರಿ. ಸಂಶೋದನೆ ನನ್ನ ಮೊದಲ ಪ್ರೇಮ, ಚಳವಳಿ ನನ್ನ ಎರಡನೆಯ ಪ್ರೇಮ ಹಾಗೂ ಕೊನೆಯ ವ್ಯಾಮೋಹ ಎನ್ನುತ್ತಿದ್ದ ಅವರಿಗೆ ಕನ್ನಡ ಹೋರಾಟ ನಿಸ್ವಾರ್ಥ ಸೇವೆಯೇ ಚಿರಸ್ಮರಣೀಯ ಎಂದರು.

ಸಂಶೋಧನೆ ಮತ್ತು ಕನ್ನಡಪರ ಹೋರಾಟ ಎರಡರಲ್ಲೂ ಮಾಸಲಾಗದ ಹೆಜ್ಜೆ ಗುರುತುಗಳಗಳನ್ನು ಮೂಡಿಸಿದ ಮಹಾನ್ ಸಾಧಕ ಚಿ.ಮೂ. ಸಂಶೋಧನಾ ವಸ್ತುನಿಷ್ಠ, ಕನ್ನಡ ಬಾಷಾ ವಿಜ್ಞಾನವನ್ನು ಕನ್ನಡಿಗರಿಗೆ ಪರಿಚಯಿಸಿದರು. ಡಾ.ಚಿಮೂ ಕನ್ನಡ ಸಾಹಿತ್ಯ ಸಂಶೋಧನಾ ಕೃತಿಗಳು ಇಡೀ ಭಾರತೀಯ ಸಂಶೋಧನಾಕಾರರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಈ ವೇಳೆ ಸಮಾರಂಭದಲ್ಲಿ ಸಾಹಿತಿ ಡಾ.ವಿಜಯಾ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News