×
Ad

ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಪಠ್ಯ ಪುಸ್ತಕ ಸಿಗುವಂತೆ ಕ್ರಮ: ಹೈಕೋರ್ಟ್‌ಗೆ ಹೇಳಿಕೆ

Update: 2020-02-11 22:50 IST

ಬೆಂಗಳೂರು, ಫೆ.11: ಕರ್ನಾಟಕದ ದೃಷ್ಟಿ ಮಾಂದ್ಯ ಮಕ್ಕಳಿಗೆ ಪಠ್ಯ ಪುಸ್ತಕ, ಕಲಿಕಾ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತವಾಗಿ ಬ್ರೈಲ್ ಲಿಪಿಯಲ್ಲಿ ಪೂರೈಸಬೇಕು ಹಾಗೂ ಅವುಗಳನ್ನು ಡಿಜಿಟಲ್ ರೂಪದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ಸರಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಇಪಿಯುಬಿ-3 ಮಾದರಿಯಲ್ಲಿ ಪಠ್ಯ ಪುಸ್ತಕ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ಕರ್ನಾಟಕ ಪಠ್ಯ ಪುಸ್ತಕ ಸಂಘ ಮೆಮೊ ಸಲ್ಲಿಸಿದೆ.

ಈ ಕುರಿತು ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ ಮೆಮೊ ದಾಖಲಿಸಿಕೊಂಡ ನ್ಯಾಯಪೀಠವು ಸ್ಟೇಟ್ ಸಿಲಬಸ್‌ಗೆ ಅನುಗುಣವಾಗಿ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಪಠ್ಯ ಪುಸ್ತಕ ಸೀಗುವಂತೆ ಮಾಡಬೇಕೆಂದು ನಿರ್ದೇಶಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲ ಶ್ರೀನಿಧಿ ಅವರು, ಇಪಿಯುಬಿ-3 ಮಾದರಿಯಲ್ಲಿ ಪಠ್ಯ ಪುಸ್ತಕ ಸೀಗಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಆರ್‌ಟಿಐ ಕಾಯ್ದೆ-2009, ವಿಕಲಚೇತನರ ಕಾಯ್ದೆ-1995 ಹಾಗೂ ಅಂಗವಿಕಲ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಭಾರತ ಮಾಡಿಕೊಂಡಿರುವ ಬದ್ಧತೆಯಂತೆ ದೃಷ್ಟಿ ಮಾಂದ್ಯ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಇತರ ಕಲಿಕಾ ಸಾಮಗ್ರಿಗಳು ಉಚಿತವಾಗಿ ಮತ್ತು ವ್ಯಾಪಕವಾಗಿ ಡಿಜಿಟಲ್, ಆನ್‌ಲೈನ್ ಮತ್ತು ಇಪಿಯುಬಿ-3 ಸೇರಿದಂತೆ ಇತರ ಆಧುನಿಕ ಸುಧಾರಿತ ಮಾದರಿಯಲ್ಲಿ ಲಭ್ಯಗೊಳಿಸುವುದು ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News