ಚೀನಾದ ಕೊರೋನಾ ವೈರಸ್ ಸೋಂಕಿತರು ಚಿಕಿತ್ಸೆಗಾಗಿ ಬೆಂಗಳೂರಿಗೆ ?

Update: 2020-02-12 17:10 GMT

ಬೆಂಗಳೂರು, ಫೆ.12: ನಗರದ ಏರ್‌ಪೋರ್ಟ್ ರಸ್ತೆಯ ಬಿಎಸ್‌ಎಫ್ ಕ್ಯಾಂಪಸ್‌ಗೆ ಚೀನಾದಿಂದ 300 ಜನ ಕೊರೊನಾ ವೈರಸ್ ಸೋಂಕಿತರನ್ನು ಕರೆತರಲಾಗುತ್ತಿದೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಏರ್‌ಪೋರ್ಟ್ ಸರ್ವೀಸ್ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಬುಧವಾರ ಬಿಎಸ್‌ಎಫ್ ಗೇಟ್ ಮುಂಭಾಗದಲ್ಲಿ ಧರಣಿ ಕುಳಿತ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಕೊರೊನಾ ವೈರಸ್ ಸೋಂಕಿತರನ್ನ ಕರೆತಂದು ಇಲ್ಲಿ ಚಿಕಿತ್ಸೆ ನೀಡಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಬಿಎಸ್‌ಎಫ್ ಕ್ಯಾಂಪಸ್‌ನಲ್ಲಿ ಯಾವುದೇ ಕಾರಣಕ್ಕೂ ಸೋಂಕಿತರನ್ನ ಕರೆತಂದು ಚಿಕಿತ್ಸೆ ನೀಡಲು ಬಿಡುವುದಿಲ್ಲ. ಒಂದು ವೇಳೆ ಕರೆತಂದಿದ್ದೇ ಆದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಸುರೇಶ್, ಚೀನಾದಿಂದ ಭಾರತ ಮೂಲದ ಕೊರೊನಾ ವೈರಸ್ ಸೋಂಕಿತರನ್ನು ಕರೆತಂದು ಚಿಕಿತ್ಸೆ ನೀಡಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ಖಂಡನೀಯ. ಇಲ್ಲಿ 300 ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ರಾತ್ರಿ ಅಥವಾ ನಾಳೆಯೊಳಗೆ ಇಲ್ಲಿಗೆ ಕರೆತರುತ್ತಾರೆಂಬ ಖಚಿತ ಮಾಹಿತಿ ಬಂದಿದೆ. ಇದು ಅಧಿಕ ಜನಸಾಂದ್ರತೆ ಹೊಂದಿರುವ ಪ್ರದೇಶ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಕೈಗಾರಿಕಾ ಪ್ರದೇಶಗಳು ಇವೆ. ಇಲ್ಲಿ ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News