ಮಾಜಿ ಸಿಎಂ ಸಿದ್ದರಾಮಯ್ಯ ಕಂಡ ‘‘ಪ್ರೊ. ನಂಜುಂಡಸ್ವಾಮಿ’’

Update: 2020-02-13 06:54 GMT

ಇಂದು (ಫೆ. 13) ಪ್ರೊ.ನಂಜುಂಡಸ್ವಾಮಿ ಅವರ ಜನ್ಮದಿನವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ನಂಜುಂಡಸ್ವಾಮಿ ಜೊತೆ ಆತ್ಮೀಯ ಒಡನಾಟವನ್ನು ಹೊಂದಿದ್ದರಲ್ಲದೆ, ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯನವರೊಂದಿಗೆ ಪತ್ರಕರ್ತ ರವಿಕುಮಾರ್ ಅವರು ಸಂದರ್ಶನ ಮಾಡಿದ ಆಯ್ದ ಭಾಗ ಇಲ್ಲಿವೆ.

‘‘ಆಗ ನನ್ನ ಹತ್ತಿರ ಒಂದು ಕೋಟೂ ಇರಲಿಲ್ಲ’’

ಪ್ರಶ್ನೆ: ನೀವು ಲಾ ಮಾಡ್ತಾಯಿದ್ದ ಸಂದರ್ಭ ಹೇಗಿತ್ತು?

ಸಿದ್ದರಾಮಯ್ಯ: ಅವು ಬಹಳ ಕಷ್ಟದ ದಿನಗಳು. ನಾನು ಶಾರದಾ ವಿಲಾಸ್ ಕಾಲೇಜಿಗೆ ಸೈಕಲ್‌ನಲ್ಲಿ ಹೋಕ್ತಾಯಿದ್ದೆ. ಆ ಮೇಲೆ ನಾನು ಲಾ ಮುಗಿಸಿ ಲಾಯರ್ ಆಗೋ ಅಷ್ಟೊತ್ತಿಗೆ ನಂಜುಂಡಸ್ವಾಮಿಯವರು ಬೆಂಗಳೂರಿಗೆ ಬಂದುಬಿಟ್ಟಿದ್ದರು. ಅಲ್ಲಿ ರಾಮಕೃಷ್ಣ ಹೊಟೇಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ನಾನು ಲಾ ಪಾಸಾದ್ಮೇಲೆ ಬೆಂಗಳೂರಿನ ಬಾರ್ ಕೌನ್ಸಿಲ್‌ಗೆ ಬಂದು ರಿಜಿಸ್ಟ್ರೇಷನ್ ಮಾಡಿಸಬೇಕಾಗಿತ್ತು. ಒಂದು ದಿನ ನಂಜುಂಡಸ್ವಾಮಿಯವರಿಗೆ ಫೋನ್ ಮಾಡ್ದೆ. ಅವರು ಬಾ ಅಂತಂದ್ರು. ನಾನು ಮೈಸೂರಿನಿಂದ ಬೆಳಿಗ್ಗೇನೆ ರಾಮಕೃಷ್ಣ ಹೊಟೇಲ್‌ಗೆ ಬಂದೆ. ನಂಜುಂಡಸ್ವಾಮಿಯವರು ಇನ್ನೂ ಮಲಗಿದ್ದರು. ನಾನೇ ಅವರನ್ನ ಏಳಿಸಿ ಹೈಕೋರ್ಟ್ ಹತ್ತಿರ ಬಾರ್ ಕೌನ್ಸಿಲ್‌ಗೆ ಕರೆದುಕೊಂಡು ಹೋದೆ. ಆಗ ನನ್ನ ಹತ್ತಿರ ಒಂದು ಕೋಟೂ ಇರಲಿಲ್ಲ. ಅದ್ಯಾರ ಹತ್ತಿರನೊ ನಂಜುಂಡಸ್ವಾಮಿಯವರೇ ಒಂದು ಕೋಟು ಈಸ್ಕೊಟ್ಟ್ರು. ನಾನು ಆ ಕೋಟ್ ಹಾಕ್ಕೊಂಡು ಹೋಗಿ ಬಾರ್ ಕೌನ್ಸಿಲ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿದೆ.

‘‘ಲಾ ಓದ್ತಾಯಿದ್ದಾಗ ನಂಜುಂಡಸ್ವಾಮಿಯವರು ಪ್ರತಿಭಟನೆ ಮಾಡಿಸಿದ್ರು’’

ಪ್ರಶ್ನೆ: ರಾಜಕಾರಣ ಮತ್ತು ಚಳವಳಿಗಳ ಸಂಬಂಧ ಹೇಗಿರ ಬೇಕು ಅಂತ ನಿಮಗೆ ಅನ್ನಿಸುತ್ತೆ?

ಸಿದ್ದರಾಮಯ್ಯ: ಚಳವಳಿಗಳು ಇರಬೇಕು. ಅವು ಇಲ್ಲದೇ ಹೋದರೆ ಸರಕಾರವನ್ನು ಎಚ್ಚರಿಸುವವರು ಯಾರು? ರೈತರ ಪರವಾಗಿ, ದಲಿತರ ಪರವಾಗಿ, ಮಹಿಳೆಯರ ಪರವಾಗಿ ನಿರಂತರವಾಗಿ ಹೋರಾಡುವ ಒಂದು ಆಂದೋಲನ ಇರಬೇಕಲ್ಲ. ಸಮಾಜದ ಪರವಾಗಿರುವ ಚಳವಳಿಗಳು ಇರಬೇಕು. ಚಳವಳಿಗಳು ಪ್ರಭಲವಾದರೆ ಸರಕಾರದ ಮೇಲೆ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಆದರೆ, ಇಂದು ರೈತ ಸಂಘ ಸೇರಿದಂತೆ ಎಲ್ಲ ಸಂಘಟನೆಗಳು ವಿಭಾಗ ಆಗಿ ಹಿಂದೆ ಇದ್ದ ಆಸಕ್ತಿ ಈ ಹೊತ್ತು ಉಳಿದಿಲ್ಲ.

ರೈತ ಸಂಘ ಆಗ ಬಹಳ ದೊಡ್ಡ ಶಕ್ತಿಯಾಗಿತ್ತು. ಅದರ ಪ್ರಭಾವ ಎಷಿತ್ತೆಂದರೆ ಅಧಿಕಾರಿಗಳು ಜೀಪ್ ತೆಗೆದುಕೊಂಡು ಎಲ್ಲೂ ಹೊರಗಡೆ ತಿರುಗಾಡುತ್ತಿರಲಿಲ್ಲ. ಹೆದರುತ್ತಿದ್ದರು. ನಾವು ತಾಲೂಕು ಆಫೀಸ್‌ಗೆ ಹೋದರೆ ತಹಶೀಲ್ದಾರ್ ಹೆದರಿಕೊಂಡು ಗಡಗಡನೆ ನಡುಗುತಿದ್ದರು. ಅಧಿಕಾರಿಗಳು ತಮ್ಮ ವಾಹನವನ್ನು ಸರಕಾರಿ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಬಳಸುತ್ತಿರಲಿಲ್ಲ, ಹಾಗೇನಾದರೂ ಬಳಸಿದರೆ ಆ ಅಧಿಕಾರಿಯನ್ನು ಕಾರಿನಿಂದ ಹೊರಗಡೆಗೆ ಎಳದು ಹಾಕಿ ಎನ್ನುತ್ತಿದ್ದರು. ಚಕ್ರದ ಗಾಳಿ ಬಿಡುತ್ತಿದ್ದರು. ಸಾಲ ವಸೂಲಿ ಮಾಡೋಕೆ ಬಂದರೆ ಮರಕ್ಕೆ ಕಟ್ಟಿ ಹೊಡೆಯಿರಿ ಅನ್ನೋರು.

ಆಮೇಲೆ ಅಧಿಕಾರಿಗಳನ್ನ ಕೂಲಿಯೋರು ಅಂತಿದ್ರು. ಡಿ.ಸಿಯನ್ನ ಜಿಲ್ಲೆಯ ಮೊದಲ ಕೂಲಿ ಅಂತಲೂ ಚೀಪ್ ಸೆಕ್ರೆಟರಿಯನ್ನು ರಾಜ್ಯದ ಮೊದಲ ಕೂಲಿ ಅಂತಲೂ ಕರೀತಿದ್ರು. ಒಂದು ಸಾರಿ 1982ರಲ್ಲಿ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಭೆ ಕರೆದಿದ್ರು. ಆಗ ಅಲ್ಲಿದ್ದ ನಂಜುಂಡಸ್ವಾಮಿಯವರು ಗುಂಡೂರಾಯರೆ ‘ಆ ನಿಮ್ಮ ಮೊದಲನೇ ಕೂಲಿ ಇದ್ದಾನಲ್ಲ ಅವನನ್ನ ಹೊರಗಡೆ ಕಳಿಸಿ ಅವನ್ಗೆ ಇವೆಲ್ಲಾ ಅರ್ಥ ಆಗಲ್ಲ. ನಂಜುಂಡಸ್ವಾಮಿಯವರ ಈ ಮಾತನ್ನ ಕೇಳಿ ಮುಖ್ಯಮಂತ್ರಿನೇ ಬೆಚ್ಕೊಬಿಟ್ರು! ಹಾಗಿತ್ತು ರೈತ ಸಂಘ. ಇನ್ನೊಂದು ಸಾರಿ ನಾನು ಲಾ ಓದ್ತಾಯಿದ್ದಾಗ 1970-71ರಲ್ಲಿ ನಂಜುಂಡಸ್ವಾಮಿಯವರು ಒಂದು ಪ್ರತಿಭಟನೆ ಮಾಡಿಸಿದ್ರು, ಮೈಸೂರಿನ ರಾಮಸ್ವಾಮಿ ಸರ್ಕಲ್‌ನಿಂದ ಟೌನ್‌ಹಾಲ್ ವರೆಗೆ ಪ್ರತಿಭಟನೆ ಹೊರಟೆವು. ಟೌನ್‌ಹಾಲ್ ಹತ್ತಿರ ಪೊಲೀಸರು ಲಾಠಿಚಾರ್ಜ್ ಮಾಡಿದರು. ಆದರೂ ಬಿಡದೆ ಮೆರವಣಿಗೆ ಮಾಡಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಪ್ರತಿಕೃತಿ ಸುಟ್ಟೆವು. ಆಗ ದೇವನೂರ ಮಹಾದೇವ ಕೂಡ ಇದ್ದರು. ಅವರೂ ಕೂಡ ನಂಜುಂಡಸ್ವಾಮಿಯವರ ಗರಡಿಯವರೇ.

ಪ್ರಶ್ನೆ: ಅನೇಕ ಸಂದರ್ಭಗಳಲ್ಲಿ ನೀವು ಪ್ರೊ.ನಂಜುಂಡಸ್ವಾಮಿ ಅವರನ್ನು ನನ್ನ ರಾಜಕೀಯ ಗುರು ಎಂದು ಹೇಳಿದ್ದೀರಿ ಹೇಗೆ? ಮತ್ತು ಅವರ ಚಿಂತನೆಗಳು ನಿಮ್ಮ ರಾಜಕೀಯ ಜೀವನದಲ್ಲಿ ಹೇಗೆ ಪ್ರಭಾವಿಸಿದವು?

ಸಿದ್ದರಾಮಯ್ಯ: ನಾನು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಓದುತ್ತಿದ್ದಾಗ ನಂಜುಂಡಸ್ವಾಮಿ ಅವರು ಅಲ್ಲಿ ಅಧ್ಯಾಪಕರಾಗಿದ್ದರು. ನಮ್ಮ ಕ್ಲಾಸಿಗೆ ಪಾಠ ತೆಗೆದುಕೊಳ್ಳುತ್ತಿರಲಿಲ್ಲ, ಆದರೆ, ಅವರು ಕೆಲವರನ್ನೆಲ್ಲಾ ಸೇರಿಸಿಕೊಂಡು ಓದು, ಚರ್ಚೆ, ಸಂವಾದ ಇವನ್ನೆಲ್ಲಾ ಮಾಡುತ್ತಿದ್ದರು. ಅದರಲ್ಲಿ ನಾನೂ ಒಬ್ಬ ಇದ್ದೆ, ನಮಗೆ ಪ್ರತಿದಿನ ಸಂಜೆ 7 ರಿಂದ ರಾತ್ರಿ 10 ರವರಗೆ ಕ್ಲಾಸ್‌ಗಳು ನಡಿಯುತ್ತಿದ್ದವು. ಕ್ಲಾಸ್ ಮುಗಿದ ಮೇಲೆ ನಂಜುಂಡಸ್ವಾಮಿ ಅವರು ಚರ್ಚೆ ಮಾಡೋಕೆ ಅಂತ ಕರೆದುಕೊಂಡು ಹೋಗತಾ ಇದ್ದರು. ಅಲ್ಲೊಂದು ಚಂದ್ರ ಕೆಫೆ ಅಂತ ಇತ್ತು ಅಲ್ಲಿ ನಮ್ಮೆಲ್ಲರಿಗೂ ಟೀ ಕುಡಿಸುತ್ತಿದ್ದರು. ಒಂದು, ಒಂದೂವರೆ ಗಂಟೆವರೆಗೂ ಅಲ್ಲಿ ಬೇರೆಯದೇ ಆದ ಪಾಠ ಮಾಡ್ತಾಯಿದ್ದರು, ಆ ಪಾಠವೇ ನಮ್ಮ ನಿಜವಾಗಿ ರೂಪಿಸಿದ್ದು.

ನಂಜುಂಡಸ್ವಾಮಿಯವರು ಆಗ ಚಾರ್ಮಿನಾರ್ ಸಿಗರೇಟ್ ಸೇದುತ್ತಿದ್ದರು ಹಾಗೆ ನಮಗೂ ಒಂದೊಂದು ಕೊಡೋರು. ನಾನು ಆಗ ಸಿಗರೇಟ್ ಸೇದುತ್ತಿದ್ದೆ. ಬಹಳ ಸ್ಟ್ರಾಂಗ್ ಸಿಗರೇಟ್ ಅದು! ಹೀಗೆ ಚಾರ್ಮಿನಾರ್ ಸಿಗರೇಟ್ ಸೇದೋದು, ಒಂದು ಐದು ಸಾರಿ ಟೀ ಕುಡಿಯೋದು, ಜಗತ್ತಿನ ಪಾಲಿಟಿಕ್ಸ್‌ನೆಲ್ಲಾ ಮಾತಾಡೋದು ಮಾಡ್ತಾಯಿದ್ದೋ.

ನಂಜುಂಡಸ್ವಾಮಿಯವರು ಅಷ್ಟೊತ್ತಿಗೆ ಬಹಳ ಓದಿಕೊಂಡಿದ್ದರು. ರಾಜ್ಯದ, ರಾಷ್ಟ್ರದ ಮತ್ತು ಜಗತ್ತಿನ ಪಾಲಿಟಿಕ್ಸ್, ಜೊತೆಗೆ ಸೋಷಿಯಲಿಸಂ, ಕಮ್ಯೂನಿಸಂ ಬಗ್ಗೆ ಚರ್ಚೆ ಮಾಡ್ತಾಯಿದ್ದರು. ಹೀಗಾಗಿ ನಮಗೆ ಒಂದು ಐಡಿಯಾಲಜಿಕಲ್ ಸ್ಟ್ರೆಂಥ್ ಸಿಕ್ಕಿತ್ತು. ಅದಕ್ಕೆ ಕಾರಣ ನಂಜುಂಡಸ್ವಾಮಿಯವರು. ನನಗೆ ರಾಜಕಾರಣದಲ್ಲಿ ಆಸಕ್ತಿ ಹುಟ್ಟುವುದಕ್ಕೆ ಅವರೇ ಕಾರಣ, ಯಾಕೆಂದರೆ ನನಗೇನು ರಾಜಕಾರಣದಲ್ಲಿ ಯಾವ ಹಿನ್ನೆಲೆ ಇರಲಿಲ್ಲ. ನಮ್ಮ ಮನೆಯವರಾರೂ ರಾಜಕಾರಣದಲ್ಲಿ ಇರಲಿಲ್ಲ, ಹೀಗಾಗಿ ನನಗೆ ರಾಜಕೀಯಕ್ಕೆ ಬರಲು ಪ್ರೇರಣೆಯೆಂದರೆ ನಂಜುಡುಸ್ವಾಮಿ ಅವರೇ, ನಮಗೆ ಡೆಮಾಕ್ರಸಿ ಬಗ್ಗೆ ಕಾಂಸ್ಟಿಟ್ಯೂಷನ್ ಬಗ್ಗೆ ಬದ್ಧತೆ ಬರಬೇಕಾದರೆ ನಂಜುಂಡು ಸ್ವಾಮಿಯವರೇ ಕಾರಣ. ‘ಹೀ ಈಸ್ ರೆಸ್ಪಾನ್ಸಿಬಲ್’.

ಪ್ರಶ್ನೆ: ನೀವು ಮೂಲತ: ಕಾನೂನು ಪದವಿ ಓದಿದವರು, ಮುಂದೆ ಒಳ್ಳೆಯ ಲಾಯರ್ ಕೂಡ ಆಗಬಹುದ್ದಿತ್ತೇನೊ, ಆದರೆ ರಾಜಕೀಯಕ್ಕೆ ಬರಬೇಕಂತ ಯಾಕೆ ಅನ್ನಿಸಿತು?

ಸಿದ್ದರಾಮಯ್ಯ: ನಂಜುಂಡಸ್ವಾಮಿಯವರು ಆಗಲೇ ಸೋಷಿಯಲಿಸ್ಟ್ ಪಾರ್ಟಿಯಲ್ಲಿದ್ದರು. ನಮ್ಮನ್ನೆಲ್ಲಾ ಅವರೆ ಸಮಾಜವಾದಿ ಯುವಜನ ಸಭಾಗೆ ಮೆಂಬರ್‌ಶಿಪ್ ಮಾಡಿಸಿದ್ದರು. ಹೀಗಾಗಿ ನನ್ನನ್ನೂ ಕೂಡ ರಾಜಕಾರಣಕ್ಕೆ ಬರಬೇಕೂಂತ ಪ್ರರೇಪಿಸಿದ್ದೂ ಅವರೇ. ನನಗೆ ರಾಜಕೀಯದಲ್ಲಿ ಆಸಕ್ತಿ ಬೆಳೆಯಬೇಕಾದರೆ ಬಿಕಾಸ್ ಆಫ್ ನಂಜುಂಡು ಸ್ವಾಮಿಯವರ ಥಾಟ್ಸ್. ಅವರ ಜೊತೆ ಮೇಲಿಂದ್ಮೇಲೆ ನಡೆಸಿದ ಚರ್ಚೆಗಳು ರಾಜಕಾರಣಕ್ಕೆ ಬರಲು ಪ್ರೇರೆಪಿಸಿದವು. ಅದರ್‌ವೈಸ್ ನಾನು ರಾಜಕಾರಣಕ್ಕೆ ಬರುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ! ನಾನು ಒಳ್ಳೆಯ ಲಾಯರ್ ಆಗಬೇಕು, ಹೈಕೋರ್ಟ್ ಜಡ್ಜ್ ಆಗಬೇಕು ಅಂತ ಆಸೆ ಇಟ್ಟುಕೊಂಡವನು. ನಂಜುಂಡಸ್ವಾಮಿಯವರ ಸಹವಾಸಕ್ಕೆ ಬಿದ್ದ ಮೇಲೆ ನಮ್ಮ ಆಲೋಚನೆಗಳು ಗುರಿಗಳು ಸಂಪೂರ್ಣವಾಗಿ ಬದಲಾದವು.

ಪ್ರಶ್ನೆ: ನೀವು ರಾಜಕಾರಣಕ್ಕೆ ಹೋಗಿ ಅಂತ ಪ್ರೊಫೆಸರ್ ಏನಾದರೂ ಉದ್ದೇಶ ಪೂರ್ವಕವಾಗಿ ಹೇಳ್ತಿದ್ದಾರೆಯೇ?

ಸಿದ್ದರಾಮಯ್ಯ:  ಹಾಗೇನೂ ಹೇಳ್ತಾ ಇರಲಿಲ್ಲ. ಅವರ ಜೊತೆಗಿನ ಎಲ್ಲ ಚರ್ಚೆ, ಒಡನಾಟಗಳಿಂದ ನನಗೇನೆ ರಾಜಕೀಯಕ್ಕೆ ಬರಬೇಕೂಂತ ಅನ್ನಿಸಿತು.

ಪ್ರಶ್ನೆ: ರಾಜಕೀಯವಾಗಿ ಎಂ.ಡಿ.ಎನ್ ಮತ್ತು ನಿಮ್ಮ ಒಡನಾಟ ಹೇಗಿತ್ತು?

ಸಿದ್ದರಾಮಯ್ಯ: ಅವರು ಎಂಎಲ್‌ಎ ಆಗಿದ್ದಾಗ ನಾನು ಸೋತೋಗಿದ್ದೆ. ಆದರೆ, ಆಗಾಗ ಭೇಟಿಯಾಗ್ತಾ ಇದ್ದೆವು. ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ರೈತ ಸಂಘದ ಒಂದು ರಾಜ್ಯಮಟ್ಟದ ಕಾರ್ಯಕಾರಿ ಸಭೆ ಇತ್ತು. ಅಲ್ಲಿ ಒಂದು ಪೊಲಿಟಿಕಲ್ ಡಿಸಿಷನ್ ತಗೋಬೇಕಿತ್ತು, ಆದರೆ ನಂಜುಂಡಸ್ವಾಮಿ, ಸುಂದರೇಶ್, ಶಾಮಣ್ಣ ಇವರೆಲ್ಲಾ ರೈತ ಸಂಘ ರಾಜಕಾರಣಕ್ಕೆ ಹೋಗೊದು ಬೇಡಾಂತ. ಆದರೆ, ನಾವೆಲ್ಲ ಕೆಲವರು ರೈತರಿಗೆ ನ್ಯಾಯ ದೊರಕಿಸಿಕೊಡಲು ರೈತರದ್ದೇ ಒಂದು ರಾಜಕೀಯ ಶಕ್ತಿ ಬೇಕು. ಹೀಗಾಗಿ 1983ರ ಚುಣಾವಣೆಯಲ್ಲಿ ನಿಲ್ಲಬೇಕು ಅನ್ನುವುದು ನಮ್ಮ ತೀರ್ಮಾನ. ಆದರೆ, ನಂಜುಂಡಸ್ವಾಮಿ ಅವರು ಆಗಲ್ಲಂತ ಖಡಾಖಂಡಿತವಾಗಿ ಹೇಳಿಬಿಟ್ಟರು. ನಾವಾಗ ಸಭೆಯನ್ನು ಬಹಿಷ್ಕರಿಸಿ ಚುಣಾವಣೆಗೆ ಹೋಗಲು ತೀರ್ಮಾನಿಸಿದೆವು. ನಾನಾಗ ಮೈಸೂರು ಜಿಲ್ಲೆಯ ರೈತ ಸಂಘದಲ್ಲಿ ಜನರಲ್ ಸೆಕರೇಟರಿಯಾಗಿದ್ದೆ. ನಂಜುಂಡಸ್ವಾಮಿಯವರು ನನ್ನನ್ನ ರೈತ ಸಂಘದಿಂದ ಉಚ್ಚಾಟನೆ ಮಾಡಿಬಿಟ್ಟರು. ಅಷ್ಟ್ರಲ್ಲಿ... ಎಲೆಕ್ಷನ್ ಕೂಡ ಬಂತು ನಾನು ಎಲೆಕ್ಷನಲ್ಲಿ ಇಂಡಿಪೆಂಡೆಂಟಾಗಿ ನಿಂತು ಗೆದ್ದೆ.

ಪ್ರಶ್ನೆ: ಸಮಾಜವಾದಿ ಯುವಜನ ಸಭಾವನ್ನು ಸ್ಥಾಪಿಸಿದ ಸಂದಭರ್ದಲ್ಲಿ ಕರ್ನಾಟಕ ಮತ್ತು ಭಾರತದ ರಾಜಕೀಯ ವಾತಾವರಣ ಹೇಗಿತ್ತು? ನಿಮ್ಮ ಮೇಲೆ ಅದು ಏನಾದರೂ ಪ್ರಭಾವಿಸಿತ್ತೆ?

ಸಿದ್ದರಾಮಯ್ಯ: ಸಮಾಜವಾದಿ ಯುವಜನ ಸಭಾ ಆಗ ಬಹಳ ಆ್ಯಕ್ಟೀವಾಗಿತ್ತು. ರವಿವರ್ಮ ಕುಮಾರ್ ಕೂಡ ಅದರಲಿದ್ರು. ಲೋಹಿಯಾರವರು ‘ಮ್ಯಾನ್‌ಕೈಂಡ್ ಅಂತ ಪತ್ರಿಕೆಯನ್ನ ತರುತ್ತಿದ್ದರು. ಮೈಸೂರನಲ್ಲಿ ಅದನ್ನ ಮಾನವ ಅನ್ನೊ ಹೆಸರಲ್ಲಿ ಪ್ರಕಟ ಮಾಡ್ತಾಯಿದ್ದರು. ಅದರಲ್ಲಿ ಸೋಷಿಯಲಿಸಂ, ಕಮ್ಯೂನಿಸಂ ವಿಚಾರಗಳ ಬಗ್ಗೆ ಚರ್ಚೆ ಆಗ್ತಾಯಿತ್ತು. ನಮ್ಮ ರಾಜಶೇಖರ ಕೋಟೆ ಈ ಮಾನವ ಪತ್ರಿಕೆಯನ್ನ ಮೈಸೂರಿನ ಕೆ.ಆರ್. ಸರ್ಕಲ್‌ನಲ್ಲಿ ಮಾರುತ್ತಿದ್ದರು. ಆಗ ಪತ್ರಿಕೆ ಮಾಡೋದು ಬಹಳ ಕಷ್ಟ. ಪತ್ರಿಕೆ ಕೊಂಡು ಓದೋರು ಇರಲಿಲ್ಲ. ಆ ಸಂದಭರ್ದಲ್ಲಿ ಎಸ್.ವೈ.ಎಸ್ ಬಹಳ ಆ್ಯಕ್ಟೀವಾಗಿತ್ತು. ನಾವೆಲ್ಲಾ ಅದರಲ್ಲಿ ಬಹಳ ಸೀರಿಯಸ್ಸಾಗಿ ಪಾರ್ಟಿಸಿಪೇಟ್ ಮಾಡುತ್ತಿದ್ದೆವು.

ಪ್ರಶ್ನೆ: ನೀವು ಒಬ್ಬ ಸಮಾಜವಾದಿ ರಾಜಕಾರಣಿಯಾಗಿ ಲೋಹಿಯಾ ಮತ್ತು ಸಮಾಜವಾದಿ ಚಿಂತನೆಗಳು ನಿಮ್ಮ ರಾಜಕೀಯ ಬದುಕಿನಲ್ಲಿ ಹೇಗೆ ಒಳಗೊಂಡವು?

ಸಿದ್ದರಾಮಯ್ಯ: ನಾನು ಸಮಾಜವಾದಿ ಯುವಜನ ಸಭಾವನ್ನು ಸೇರಿದ್ದರಿಂದ ಸಂವಿಧಾನದ ಬಗ್ಗೆ, ಡೆಮಾಕ್ರಸಿ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ, ಸಮಾಜವಾದದ ಬಗ್ಗೆ ಒಂದು ರೀತಿಯ ಬದ್ಧತೆಯನ್ನು ಕಲಿತೆ. ರೈತರ ಬಗ್ಗೆ, ದಲಿತರ ಬಗ್ಗೆ ಕಾಳಜಿ ಬಂದದ್ದೇ ಅಲ್ಲಿಂದ. ನಂಜುಂಡಸ್ವಾಮಿಯವರು ಇವೆಲ್ಲವನ್ನು ನಮಗೆ ಕಲಿಸುತ್ತಿದ್ದರು.

ಪ್ರಶ್ನೆ: ನೀವು ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದ್ದೀರಿ. ಈವರೆಗಿನ ನಿಮ್ಮ ಬಜೆಟ್‌ನಲ್ಲಿ ನಂಜುಂಡಸ್ವಾಮಿಯವರ ಆಲೋಚನೆಗಳು ಯಾವ ರೀತಿ ಪ್ರತಿಫಲಿಸಿವೆ?

ಸಿದ್ದರಾಮಯ್ಯ: ರೈತರ ಸಮಸ್ಯೆಗಳು ಇಂದಿಗೂ ಅಗಾಧವಾಗಿವೆ. ನಾನು ರೈತರ ಎಲ್ಲಾ ಸಮಸ್ಯೆಗಳನ್ನು ಬಗಹರಿಸಲಿಕ್ಕೆ ಸಾಧ್ಯವಾಗಲಿಲ್ಲ. ಆದರೆ ನಂಜುಂಡಸ್ವಾಮಿಯವರು ಏನು ಹೇಳ್ತಾಯಿದ್ರು ‘‘ರೈತರೆ ತಾವು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡ್ಬೇಕಂತ ಆ ನಿಟ್ಟಿನಲ್ಲಿ ನಾನು ಸ್ವಲ್ಪ ಕೆಲಸ ಮಾಡ್ದೆ. ಕೇಂದ್ರದಲ್ಲಿ ಒಂದು ಬೆಲೆ ನಿಗದಿ ಆಯೋಗ ಇದೆ. ಅದೇ ರೀತಿ ನಾನು ಕರ್ನಾಟಕದಲ್ಲಿ ಒಂದು ಬೆಲೆ ಆಯೋಗ ಮಾಡ್ಬೇಕೂಂತ ಮಾಡಿದೆ.

ನಾವೆಲ್ಲಾ ಆಗ ಆರ್ಗ್ಯೂಮೆಂಟ್ ಮಾಡ್ತಾಯಿದಿದ್ದು ಏನು? ರೈತ ಇನ್‌ವೆಸ್ಟ್ ಮಾಡಿದ್ದೂ ವಾಪಸ್ ಬರೋದಿಲ್ಲ. ಮನೆಯವರೆಲ್ಲಾ ಸೇರಿ ಕೆಲಸ ಮಾಡ್ತಾರೆ ಅವರಿಗೆಲ್ಲಾ ನಾವು ಕೂಲಿ ಕೊಡೋದಿಲ್ಲ ಅವನೆಲ್ಲಾ ಲೆಕ್ಕಹಾಕಿ ಬೆಲೆ ನಿಗದಿ ಮಾಡಬೇಕು ಅನ್ನುವಂತಹದ್ದು ಆಗಿತ್ತು. ಆದರೆ ಅದನ್ನೆಲ್ಲಾ ಮಾಡಕ್ಕಾಗಿಲ್ಲ. ಆದರೆ ಆ ದಾರಿಯಲ್ಲಿ ರೈತ ಪರವಾದ ಬಜೆಟ್ ಮಂಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀನಿ.

ಪ್ರಶ್ನೆ: ಲಂಕೇಶರ ಪ್ರಗತಿರಂಗ ಹಾಗೂ ಎಂ.ಡಿ.ಎನ್ ರವರ ಕನ್ನಡ ದೇಶ ಪಕ್ಷಗಳಂತಹ ಪ್ರಾದೇಶಿಕ ಪರ್ಯಾಯ ರಾಜಕಾರಣದ ಅಗತ್ಯ ರಾಜ್ಯಕ್ಕೆ ಮತ್ತು ದೇಶಕ್ಕೆ ಇಂದು ಇದೆಯೇ?

ಸಿದ್ದರಾಮಯ್ಯ: ಆಗ ಇದ್ದ ರಾಜಕೀಯ ಪರಿಸ್ಥಿತಿಯೇ ಬೇರೆ! ಒಂದು ಕಡೆ ಯಮರ್ಜನ್ಸಿಯ ಪರಿಣಾಮ ಮತ್ತೊಂದು ಕಡೆ ಕಾಂಗ್ರೆಸ್‌ಗಿಂತ ಭಿನ್ನವಾದ ಪರ್ಯಾಯ ರಾಜಕಾರಣದ ಹುಡುಕಾಟ. ಇವೆಲ್ಲವೂ ಇದ್ದವು. ಇದರ ಪರಿಣಾಮವಾಗಿ ಸೋಷಿಯಲಿಸ್ಟ್ ಪಾರ್ಟಿ, ಜನ ಸಂಘ, ಚರಣ್‌ಸಿಂಗ್ ಪಾರ್ಟಿ, ಇವೆಲ್ಲಾ ಸೇರಿ ಜನತಾ ಪಾರ್ಟಿ ಆಯ್ತು. ಆಗ ನಾವೂ ಕೂಡ ಜನತಾ ಪಾರ್ಟಿಯಲ್ಲಿ ಹೆಚ್ಚು ಆಕ್ಟೀವ್ ಆಗಿದ್ದೆವು. ನಂಜುಂಡಸ್ವಾಮಿ ಮಾತ್ರ ರೈತ ಸಂಘದಲ್ಲಿ ಹೆಚ್ಚು ಆಕ್ಟೀವ್ ಆಗಿದ್ದು ಪೊಲಿಟಿಕಲ್ ಆಕ್ಟಿವಿಟಿ ಸ್ವಲ್ಪ ಕಡಿಮೆ ಮಾಡಿದ್ರು. ಆಗ ಜೆ.ಪಿ ಮೂಮೆಂಟ್ ಶುರುವಾಗಿತ್ತು. ಅವರು ‘ಸಂಪೂರ್ಣ ಕ್ರಾಂತಿಗೆ ಕರೆ ಕೊಟ್ಟಿದ್ದರು. ನಾವೆಲ್ಲಾ ಆ ಮೂಮೆಂಟ್‌ನಲ್ಲಿ ಮುಂಚೂಣಿಯಲ್ಲಿದ್ದೆವು. ಮುಂದೆ ಇದೇ ಆಶಯಗಳನ್ನ ಹೊತ್ತು ಪ್ರಗತಿರಂಗ ಕನ್ನಡ ದೇಶ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಆದರೆ ಅದ್ಯಾಕೊ ಕನ್ನಡದ ನೆಲದಲ್ಲಿ ಅವು ನೆಲೆ ನಿಲ್ಲಲಿಲ್ಲ. ಹಾಗೆ ಆಗಿದ್ದರೆ ಕರ್ನಾಟಕದ ರಾಜಕಾರಣ ಬಹುಶ: ಬೇರೆ ರೀತಿಯಲ್ಲಿ ಚಲಿಸಬಹುದಾಗಿತ್ತು.

ಪ್ರಶ್ನೆ: ದಲಿತ ಚಳವಳಿಯೊಂದಿಗೆ ನಿಮ್ಮ ಸಂಬಂಧ ಹೇಗಿತ್ತು?

ಸಿದ್ದರಾಮಯ್ಯ: ನಾನು ದಲಿತ ಚಳವಳಿಯೊಂದಿಗೆ ಬಿಗಿನಿಂಗ್‌ನಲ್ಲಿದ್ದೆ. ಆಗ ಪ್ರಾರಂಭದಲ್ಲಿ ಒಂದು ಮೀಟಿಂಗ್ ಮಾಡಿದ್ರು ಆ ಮೀಟಿಂಗೆ ನಾನು ಹೋಗಿದ್ದೆ. ಆಗ ದೇವನೂರ ಮಹಾದೇವ, ದೇವಯ್ಯ ಹರವೆ, ಗೋವಿಂದಯ್ಯ, ಹಾಸನದ ಚಂದ್ರಪ್ರಸಾದ್ ತ್ಯಾಗಿ ಇವರೆಲ್ಲಾ ಸೇರಿ ಮೈಸೂರಲ್ಲಿ ಮೀಟಿಂಗ್ ಮಾಡೋರು. ದಲಿತ ಚಳವಳಿಯೊಂದಿಗೆ ನಾನು ಹೋಗಲಿಕ್ಕೆ ಆಗಲಿಲ್ಲ. ಆದರೆ ಆ ಚಳವಳಿಗಾರರ ಜೊತೆ ನಿಕಟ ಸಂಪರ್ಕವಿತ್ತು. ಅವ್ರ ಒಂದು ಸ್ಲೋಗನ್ ಹೇಳ್ತಾಯಿದ್ರು ಸಾರಾಯಿ ಬೇಡ ಶಾಲೆ ಬೇಕು ಅಂತ ಇದು ನನ್ನ ಮನಸ್ಸಲ್ಲಿ ಉಳಿದಿತ್ತು. 1994ರಲ್ಲಿ ನಾನು ಹಣಕಾಸು ಸಚಿವ ಆಗಿದ್ದಾಗ ಫಸ್ಟ್ ಟೈಂ ಹೋಬಳಿಗೊಂದು ಮೊರಾರ್ಜಿದೇಸಾಯಿ ರೆಸಿಡೆನ್ಸಿಯಲ್ ಸ್ಕೂಲ್‌ಗಳನ್ನು ಪ್ರಾರಂಭಮಾಡಿದೆವು. ಮುಂದೆ ನಾನು ಮುಖ್ಯಮಂತ್ರಿ ಆದಾಗ ಎಲ್ಲಾ ಹೋಬಳಿಗಳಲ್ಲೂ ಕಡ್ಡಾಯವಾಗಿ ಕನಿಷ್ಠ ಒಂದೊಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಇರಲೇ ಬೇಕೆಂದು ನಾನೇ ವಿಶೇಷ ಗಮನ ಹರಿಸಿ ಅದನ್ನು ರೂಪಿಸಿದೆ.

Writer - ಸಂದರ್ಶನ: ರವಿಕುಮಾರ್

contributor

Editor - ಸಂದರ್ಶನ: ರವಿಕುಮಾರ್

contributor

Similar News