ಸಹಕಾರ ಇಲಾಖೆ ಸುಧಾರಣೆಗೆ ಕ್ರಮ: ಸಚಿವ ಎಸ್.ಟಿ.ಸೋಮಶೇಖರ್

Update: 2020-02-13 17:38 GMT

ಬೆಂಗಳೂರು, ಫೆ. 13: ಸಹಕಾರ ಇಲಾಖೆ ಸುಧಾರಣೆ ಹಾಗೂ ಇಲಾಖೆಯಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಹಿರಿಯ ಅಧಿಕಾರಿಗಳ ಸಭೆ ಕರೆದು ಅವರಿಂದ ಸಲಹೆಗಳನ್ನು ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಕಚೇರಿಯಲ್ಲಿ ಪೂಜೆ ನೆರವೇರಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ತಮಗೆ ಇಷ್ಟದ ಸಹಕಾರ ಖಾತೆ ನೀಡಿದ್ದು, ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಹಕಾರಿಗಳಿಗೆ ಹೆಚ್ಚು ಅನುಕೂಲವಾಗಿದ್ದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ನಿಲ್ಲಿಸಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಯಶಸ್ವಿನಿ ಯೋಜನೆ ಒಳ್ಳೆಯ ಯೋಜನೆ. ಯಾವ ಕಾರಣಕ್ಕೆ ನಿಲ್ಲಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದರು.

ಸಹಕಾರ ಇಲಾಖೆ, ಸಹಕಾರಿಗಳ ಸಮಸ್ಯೆಗಳ ಬಗ್ಗೆ ನನಗೆ ಮಾಹಿತಿ ಇದ್ದು, ಸಹಕಾರಿಗಳ ಅನುಕೂಲಕ್ಕಾಗಿ ಸಾಧ್ಯವಿರುವ ಎಲ್ಲ ಬದಲಾವಣೆ ಹಾಗೂ ಸುಧಾರಣೆ ತರಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಸೋಮಶೇಖರ್ ಇದೇ ವೇಳೆ ತಿಳಿಸಿದರು.

ಬಜೆಟ್ ಪೂರ್ವಸಿದ್ದತೆ ಸಭೆ ನಡೆದಿದ್ದು, ರೈತರ ಕೃಷಿ ಸಾಲಮನ್ನಾ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅನಂತರ ತೀರ್ಮಾನ ಮಾಡಲಾಗುವುದು ಎಂದರು. ಖಾತೆ ಹಂಚಿಕೆ ಬಗ್ಗೆ ನಮ್ಮ ಸ್ನೇಹಿತರಿಗೆ ಯಾವುದೇ ರೀತಿಯಲ್ಲಿಯೂ ಅಸಮಾಧಾನ, ಅತೃಪ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News