ಬೆಂಗಳೂರು: ಫೆ.15ರಿಂದ ಎಸ್‌ಎಫ್‌ಐ 15ನೇ ರಾಜ್ಯ ಸಮ್ಮೇಳನ

Update: 2020-02-13 18:27 GMT

ಬೆಂಗಳೂರು, ಫೆ.13: ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ)ನ 15 ನೇ ರಾಜ್ಯ ಸಮ್ಮೇಳನವನ್ನು ಫೆ.15 ರಿಂದ ಮೂರು ದಿನಗಳ ಕಾಲ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್‌ಎಫ್‌ಐ ರಾಜಾಧ್ಯಕ್ಷ ವಿ.ಅಂಬರೀಶ್ ಹೇಳಿದ್ದಾರೆ.

ನಗರದ ಎಸ್‌ಎಫ್‌ಐ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.15 ರಿಂದ ಆರಂಭವಾಗಲಿರುವ ಸಮ್ಮೇಳನವನ್ನು ದಿಲ್ಲಿಯ ಜವಾಹರ್‌ಲಾಲ್ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಎಸ್‌ಎಫ್‌ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು.

ಎರಡನೇ ದಿನದಂದು ಎನ್‌ಆರ್‌ಸಿ, ಸಿಎಎ ಹಾಗೂ ವಿದ್ಯಾರ್ಥಿ ಚಳವಳಿ ಎಂಬ ವಿಚಾರ ಸಂಕಿರಣ ನಡೆಯಲಿದ್ದು, ಹಲವು ವಿದ್ಯಾರ್ಥಿ ಸಂಘಟನೆಗಳ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣವನ್ನು ಕಡೆಗಣಿಸಿ, ಬಂಡವಾಳಶಾಹಿಗಳ ಕೈಗೆ ಶಿಕ್ಷಣ ನೀಡಿವೆ. ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ವಿದ್ಯಾರ್ಥಿ ನಾಯಕರನ್ನು ಗುರಿಯಾಗಿಸಿಕೊಂಡು ಕಾನೂನು ದುರ್ಬಳಕೆ ಮಾಡಿಕೊಂಡು ದೌರ್ಜನ್ಯ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗಾಗಿ, ಶಿಕ್ಷಣದ ಖಾಸಗೀಕರಣ ವಿರೋಧಿಸಿ, ಉನ್ನತ ಶಿಕ್ಷಣದ ರಕ್ಷಣೆಗಾಗಿ ಈ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.

ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ 250 ಕ್ಕೂ ಅಧಿಕ ಆಯ್ದ ವಿದ್ಯಾರ್ಥಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂರು ದಿನಗಳ ಸಮ್ಮೇಳನದಲ್ಲಿ ರಾಜ್ಯದಲ್ಲಿ ಸ್ಥಳೀಯ ಮಟ್ಟದಲ್ಲಿನ ಶೈಕ್ಷಣಿಕ ಸಮಸ್ಯೆಗಳು ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸುದೀರ್ಘ ಚರ್ಚೆಯಾಗಲಿದೆ. ಅನಂತರ ಸಮ್ಮೇಳನ ನಿರ್ಣಯ ಘೋಷಣೆ ಮಾಡಿ, ಅದರಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News