ಬೀಡಿ ಸುತ್ತಿದ ಕೈಯಲ್ಲಿ ರಾಷ್ಟ್ರಪತಿ ಪದಕ

Update: 2020-02-14 06:19 GMT

ನಾವು ಗಡಿ ಕಾಯುವ ಸೈನಿಕರನ್ನು ದೇಶ ರಕ್ಷಕರು ಎನ್ನುತ್ತೇವೆ. ಆದರೆ ದೇಶವಾಸಿಗಳು ಆಪತ್ತಿಗೊಳಗಾದಾಗೆಲ್ಲಾ ಜೀವದ ಹಂಗು ತೊರೆದು ದೇಶವಾಸಿಗಳ ಪ್ರಾಣ, ಸೊತ್ತು, ವಿತ್ತಗಳ ರಕ್ಷಣೆಗಾಗಿ ಧಾವಿಸುವ ಅಗ್ನಿ ಶಾಮಕ ದಳಕ್ಕೆ ಯಾವ ವಿಶೇಷಣಗಳನ್ನೂ ಕೊಡುವುದಿಲ್ಲ. ವಿಶೇಷಣಗಳೆಲ್ಲಾ ಬದಿಗಿರಲಿ ಅವರ ಸಾಹಸ ಕಾರ್ಯಗಳ ಬಗ್ಗೆ ನಾವ್ಯಾರೂ ಮಾತನಾಡುವುದಿಲ್ಲ.

ಅಗ್ನಿ ಶಾಮಕ ದಳಕ್ಕೆ ಹಗಲು ರಾತ್ರಿಯೆಂಬ ಬೇಧವಿರುವುದಿಲ್ಲ. ದೇಶಕ್ಕೆ ಅವರ ಸೇವೆಯ ಅಗತ್ಯ ಬಿದ್ದರೆ ಕಿಂಚಿತ್ತೂ ಹಿಂದೆ-ಮುಂದೆ ಯೋಚಿಸದೇ ಕರ್ತವ್ಯಕ್ಕೆ ಹಾಜರಾಗಬೇಕು. ಆದರೆ ಪೊಲೀಸ್, ಸೈನ್ಯ, ಅರೆಸೇನಾಪಡೆಯಂತೆಯೇ ಅಗ್ನಿ ಶಾಮಕ ದಳವೆಂಬ ಒಂದು ಪಡೆಯಿರುವ ಬಗ್ಗೆ ನಮಗೆ ನೆನಪಾಗುವುದು ಅಪಾಯ ನಮ್ಮ ಮನೆಬಾಗಿಲಿಗೆ ಬಂದಾಗ ಮಾತ್ರ.

ಮೊನ್ನೆ ನಮ್ಮ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಘೋಷಣೆಯಾಯಿತು. ಅದೇ ದಿನ ಹಾಜಬ್ಬರ ಪಕ್ಕದೂರಿನ ಮೊಯ್ದು ಕುಂಞಿ ಎಂಬ ಫೈರ್‌ಮ್ಯಾನ್ ಒಬ್ಬರಿಗೆ ರಾಷ್ಟ್ರಪತಿ ಪದಕವೂ ಘೋಷಣೆಯಾಗಿತ್ತು. ಆದರೆ ಅವರ ಕುರಿತಂತಹ ಹೆಚ್ಚಿನೆಲ್ಲಾ ಪತ್ರಿಕಾ ವರದಿಗಳು ಒಂದು ಭಾವಚಿತ್ರ ಮತ್ತು ಎರಡೇ ಎರಡು ಗೆರೆಗಷ್ಟೇ ಸೀಮಿತವಾಗಿತ್ತು. ತನ್ನ ಇಪ್ಪತ್ತು ಮೂರು ವರ್ಷಗಳ ವೃತ್ತಿ ಬದುಕಿನಲ್ಲಿ ಸ್ವತಃ ತನ್ನ ಪ್ರಾಣದ ಆಸೆ ತೊರೆದು ಸಾವಿರಾರು ದೇಶವಾಸಿಗಳ ಪ್ರಾಣ ರಕ್ಷಣೆ ಮಾಡಿದವರು ಮೊಯ್ದು ಕುಂಞಿ. ಅದು ಅವರಿಗೆ ವೃತ್ತಿಯೇ ಆದರೂ ಅವರಿಗಿರುವ ವೃತ್ತಿ ಬದ್ಧತೆ ಅವರಿಗಿಂದು ರಾಷ್ಟ್ರಪತಿ ಪದಕ ಕೊಡಿಸಿದೆ.

ಪ್ರಸ್ತುತ ಪಾಂಡೇಶ್ವರ ಅಗ್ನಿ ಶಾಮಕ ದಳದಲ್ಲಿ ಫೈರ್‌ಮ್ಯಾನ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಐವತ್ತೊಂದರ ಹರೆಯದ ಮೊಯ್ದು ಕುಂಞಿ‌ ಮೂಲತಃ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ದುಗ್ಗಜ್ಜರ ಕಟ್ಟೆಯವರು. ಇವರೂ ಹಾಜಬ್ಬರಂತೆಯೇ ಹಸಿವು, ಬಡತನವನ್ನೇ ಉಟ್ಟು ಬೆಳೆದವರು. ಇವರ ತಂದೆ ಎ.ಪಿ.ಇಬ್ರಾಹಿಂ ಚಿಕ್ಕಪುಟ್ಟ ವ್ಯಾಪಾರ ಮಾಡಿ ಕುಟುಂಬವನ್ನು ಸಾಕುತ್ತಿದ್ದರು. ಅವರ ಮೂರು ಮಂದಿ ಮಕ್ಕಳಲ್ಲಿ ಮೊಯ್ದು ಕುಂಞಿ ಮೊದಲನೇಯವರು. ಎಸ್ಸೆಸ್ಸೆಲ್ಸಿ ಮುಗಿಸಿದ ಬಳಿಕ ಮುಂದೆ ಓದಿಸುವ ಆರ್ಥಿಕ ಚೈತನ್ಯ ಅವರ ಕುಟುಂಬಕ್ಕಿರಲಿಲ್ಲವಾದ್ದರಿಂದ ಮನೆಯಲ್ಲಿ ಕೂತು ಬೀಡಿ ಸುತ್ತುವುದನ್ನೇ ಕಾಯಕವಾಗಿಸಿದರು. ಮುಂದೆ ಓದಬೇಕೆಂಬ ಅದಮ್ಯ ಆಶೆಯಿದ್ದರೂ ಬಡತನ ಮತ್ತು ಹಸಿವು ಅದಕ್ಕೆ ಅನುವು ಮಾಡಿಕೊಡಲಿಲ್ಲ. ಕೂಲಿ ಕೆಲಸಕ್ಕೆ ಹೋಗುತ್ತಿದ್ದರೂ ನಿರಂತರ ಕೆಲಸ ಸಿಗದ ಕಾರಣ ಬೀಡಿ ಸುತ್ತುವುದನ್ನೇ ಅನ್ನದ ದಾರಿಯಾಗಿಸಿದರು. ಮೊಯ್ದು ಕುಂಞಿಯವರ ಕೈಗಳು ಕಲಾತ್ಮಕವಾಗಿ ಬೀಡಿ ಸುತ್ತುತ್ತಿದ್ದರೂ ಮನಸ್ಸು ಮಾತ್ರ ಸರಕಾರಿ‌ ಉದ್ಯೋಗವನ್ನು ಕನಸುತ್ತಿತ್ತು.

1997 ರಲ್ಲಿ ಭಾರತೀಯ ಸೈನ್ಯಕ್ಕೆ ಭರ್ತಿ ಮಾಡುವ ಅರ್ಹತಾ ಪರೀಕ್ಷೆ ನಡೆಯುತ್ತಿದೆಯೆಂದರಿತ ಮೊಯ್ದು ಕುಂಞಿ ಅರ್ಹತಾ ಪರೀಕ್ಷೆಗೆ ಹಾಜರಾದರು.ಆದರೆ ಸೈನ್ಯಕ್ಕೆ ಬೇಕಾಗುವ ಮೆಡಿಕಲ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದರು. ಮತ್ತೆ ಮನೆಗೆ ಬಂದು ಅದೇ ಬೀಡಿಯ ಕಾಯಕ ಮುಂದುವರಿಸಿದರು.

1997ರಲ್ಲಿ ಅಗ್ನಿ ಶಾಮಕ ದಳಕ್ಕೆ ಮಂಗಳೂರಿನಲ್ಲಿ ನೇಮಕಾತಿ ನಡೆಯಲಿದೆಯೆಂಬ ಸುದ್ದಿ ಸಿಕ್ಕಿ ಅದಕ್ಕೆ ಅರ್ಜಿ ಹಾಕಿದರು.1998ಜೂನ್ ತಿಂಗಳಲ್ಲಿ ನೇಮಕಾತಿಯೂ ಆಯಿತು. ಸೇನೆಗೆ ಸೇರುವ ಯೋಚನೆಗೆ ದೇಶಪ್ರೇಮದ ಕೆಲಸ ಎಂಬ ಭಾವನೆ ಕಾರಣವೇ ಎಂಬ ಪ್ರಶ್ನೆಗೆ ಮೊಯ್ದು ಬಹಳ ಪ್ರಾಮಾಣಿಕವಾಗಿ ಉತ್ತರ ನೀಡಿದರು. " ದೇಶಪ್ರೇಮದ ಕೆಲಸ ಎಂಬ ಯಾವ ಪರಿಕಲ್ಪನೆಯೂ ಅಂದು ನನಗಿರಲಿಲ್ಲ. ಅಂದು ಕಿತ್ತು ತಿನ್ನುವ ಬಡತನವಿತ್ತು. ದೃಡ ಆದಾಯದ ಉದ್ಯೋಗ ಬೇಕು ಎಂಬುವುದಷ್ಟೇ ನನ್ನ ಆಸೆಯಾಗಿತ್ತು.

ಅಗ್ನಿ ಶಾಮಕ ದಳಕ್ಕೆ ಸೇರಿದ ಬಳಿಕ ದೇಶವಾಸಿಗಳ ಸೊತ್ತು, ವಿತ್ತ, ಪ್ರಾಣಕ್ಕೆ ಅಪಾಯವುಂಟಾದಾಗ ಅವರನ್ನು ರಕ್ಷಿಸುವ ಕೆಲಸವೇನು ಕಡಿಮೆ ದೇಶಪ್ರೇಮದ್ದೇ...? ದೇಶವೆಂದರೆ ಕೇವಲ ಒಂದು ಬೌಗೋಳಿಕ ಪ್ರದೇಶವಲ್ಲ. ದೇಶದ ಜನರೇ ದೇಶ. ಜನರಿಗಾಗಿ ಜೀವ ಪಣಕ್ಕಿಟ್ಟು ದುಡಿಯುವುದೂ ದೇಶಪ್ರೇಮ ಎಂಬುವುದನ್ನು ನನ್ನ ಇಲಾಖೆ ನನಗೆ ಕ್ರಮೇಣ ಕಲಿಸಿಕೊಟ್ಟಿತು.

ಹೆಣವೆತ್ತುವ ಕೆಲಸ

ಅಗ್ನಿ ಶಾಮಕ ದಳದಲ್ಲಿ ಉದ್ಯೋಗಕ್ಕೆ ಸೇರಿದಾಗ ಊರಲ್ಲೆಲ್ಲಾ "ಮೊಯ್ದುಗೆ ಹೆಣ ಎತ್ತುವ ಕೆಲಸ" ಎಂದು ಗೇಲಿ ಮಾಡಿ ನಗಲಾರಂಭಿಸಿದರು. ಅದರಿಂದ ಮೊಯ್ದು ತೀವ್ರವಾಗಿ ನೊಂದುಕೊಂಡರು. ಒಂದೆಡೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇನ್ನೊಂದೆಡೆ ಊರವರಿಂದ "ಹೆಣ ಎತ್ತುವವನೆಂಬ" ಗೇಲಿ ಮಾತು. ಆದದ್ದಾಗಲಿ ಈ ಹೆಣ ಎತ್ತುವ ಕೆಲಸವೇ ಬೇಡ , ಬೀಡಿ ಕಟ್ಟಿಯಾದರೂ ಎರಡು ಹೊತ್ತು ಉಣ್ಣುವೆ ಎಂದು ಮೊಯ್ದು ಕೆಲಸಕ್ಕೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದರು. ಆದರೆ ಅಂದು ಗೆಳೆಯರು ಮತ್ತು ಕೆಲವು ಸಹೋದ್ಯೋಗಿಗಳು ಸಾಂತ್ವನ ಹೇಳಿ ಹೇಗೂ ಮೊಯ್ದು ರಾಜೀನಾಮೆ ನೀಡುವುದನ್ನು ತಡೆದರು.

ಮೊಯ್ದು ಅದನ್ನು ಸವಾಲಾಗಿ ಸ್ವೀಕರಿಸಿದರು. ಯಾರ ಮಾತಿಗೂ ಕಿವಿಗೊಡದೇ ತನ್ನ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾ ಬಂದರು. ಈತನ್ಮಧ್ಯೆ ಮಂಗಳೂರಿನ ಸಂತ ಅಲೋಶಿಯಸ್ ಸಂಜೆ ಕಾಲೇಜಿಗೆ ಹೋಗಿ ಬಿ.ಎ.ಪದವಿಯನ್ನೂ ಪೂರ್ಣಗೊಳಿಸಿದರು.

ವೃತ್ತಿಯಲ್ಲಿ ಸಾಧನೆಯ ಮೇಲೆ ಸಾಧನೆಗಳನ್ನು ಮಾಡುತ್ತಾ ಮುಂದುವರಿದರು. ತನ್ನ ಅನುಪಮ ವೃತ್ತಿ ಜೀವನದಲ್ಲಿ ಸುಮಾರು ಮೂವತ್ತಕ್ಕೂ ಮಿಕ್ಕಿ ಪ್ರಶಂಸಾ ಪತ್ರ ಮತ್ತು ಬಹುಮಾನ ಗಳಿಸಿದರು. ಯಾವ ಜನ ಅಂದು ಹೆಣ ಎತ್ತುವ ಮೊಯ್ದು ಎಂದು ಅಪಮಾನಿಸಿದರೋ ಇಂದು ಅದೇ ಜನ ಮೊಯ್ದುವಿಗೆ ಸಿಕ್ಕ ರಾಷ್ಟ್ರಪತಿ ಪದಕ ನೋಡಿ ಸಿಕ್ಕಾಗ ಮೂಗಿನ ಮೇಲೆ ಬೆರಳಿಡುವಂತಾಯಿತು.

ಅಗ್ನಿ ಶಾಮಕ ದಳದ ಕೆಲಸವೆಂದರೆ ಅದಕ್ಕೆ ಬಹಳಷ್ಟು ತಾಂತ್ರಿಕ ಪರಿಣತಿಯೂ ಬೇಕೆನ್ನುವುದು ನನಗೆ ನನ್ನ ವೃತ್ತಿ ಬದುಕಿನಲ್ಲಿ ಅನುಭವಕ್ಕೆ ಬಂತು. ದೊಡ್ಡ ಗ್ಯಾಸ್ ಪ್ಲಾಂಟ್‌ಗಳಲ್ಲಿ ಅನಿಲ ಸೋರಿಕೆಯಾದಾಗ, ಶಾರ್ಟ್ ಸರ್ಕ್ಯೂಟ್ ಆದಾಗ, ವಿದ್ಯುತಾಘಾತವಾದಾಗ ಅದನ್ನು ನಿಭಾಯಿಸಲು ಬಹಳಷ್ಟು ತಾಂತ್ರಿಕ ಪರಿಣತಿಯೂ ಬೇಕಾಗುತ್ತದೆ.‌ ಅದೆಲ್ಲವನ್ನೂ ನಮ್ಮ ಇಲಾಖೆ ಅಧಿಕೃತವಾಗಿ ಕೆಲಸ ಪ್ರಾರಂಭಿಸುವುದಕ್ಕಿಂತ ಮುಂಚೆ ನೀಡಲಾಗುವ ಆರು ತಿಂಗಳ ತರಬೇತಿಯಲ್ಲಿ‌ ಕಲಿಸಿತು ಎಂದೆನ್ನುತ್ತಾರೆ ಮೊಯ್ದು.

ಅಗ್ನಿ ಶಾಮಕ ದಳವೆಂದರೆ ನಮ್ಮಲ್ಲನೇಕರಲ್ಲಿ ಇನ್ನೂ ಒಂದು ತಪ್ಪು ಕಲ್ಪನೆಯಿದೆ. ಅದೇನೆಂದರೆ ಅದರದ್ದು ಬರೀ ಬೆಂಕಿ ನಂದಿಸುವ ಕೆಲಸ... ಅದಕ್ಕೆ ಕಾರಣ ಅಗ್ನಿ‌ಶಾಮಕ ಎಂಬ ಹೆಸರು. ಆದರೆ ಅಗ್ನಿ ಶಾಮಕ ದಳದ ಕೆಲಸದ ವ್ಯಾಪ್ತಿ ಬಹಳ ವಿಶಾಲವಾದುದು. ಯಾವುದೇ ಪ್ರಕೃತಿ ವಿಕೋಪಗಳಾದಾಗ ಅಲ್ಲಿ ಜನರ ಪ್ರಾಣ, ಸೊತ್ತು, ವಿತ್ತಗಳ ರಕ್ಷಣೆ, ಪರಿಹಾರ ಕಾರ್ಯಕ್ಕಾಗಿ ಮೊದಲು ಧಾವಿಸುವ ಸರಕಾರಿ ಪಡೆ ಅಗ್ನಿ ಶಾಮಕ ದಳ. ವಿಷಾನಿಲ ಸೋರಿಕೆಯಾದರೂ,  ವಿದ್ಯುತಾಪಘಾತವಾದರೂ, ಯಾರಾದರೂ ಬಾವಿಗೆ ಬಿದ್ದರೂ... ಕೊನೆಗೆ ಪ್ರಾಣಿಗಳು ಬಾವಿಗೆ ಬಿದ್ದರೂ ಅಗ್ನಿಶಾಮಕ ದಳಕ್ಕೆ ನಾವು ಕರೆ ಮಾಡುತ್ತೇವೆ.‌ ಆದರೆ ಅವರ ಕೆಲಸಗಳು ಸರಕಾರದ ವತಿಯಲ್ಲಿ ಗುರುತಿಸಲ್ಪಡುತ್ತದೆಯೇ ಹೊರತು ಸಾರ್ವಜನಿಕರು ಅಷ್ಟಾಗಿ ಅಗ್ನಿ ಶಾಮಕ ದಳದ ಕೆಲಸಕ್ಕೆ ಮಾನ್ಯತೆ ಕೊಡುವುದಿಲ್ಲ.

ರಾಷ್ಟ್ರಪತಿ ಪದಕ ವಿಜೇತ ಫೈರ್‌ಮ್ಯಾನ್ ಮೊಯ್ದು ಕುಂಞಿ ತನ್ನ ಇಪ್ಪತ್ತಮೂರು ವರ್ಷಗಳ ಸೇವೆಯಲ್ಲಿ ವೈಯಕ್ತಿಕವಾಗಿ ಮತ್ತು ತಂಡದ ಸದಸ್ಯನಾಗಿ ರಕ್ಷಿಸಿದ ಪ್ರಾಣಗಳ ಸಂಖ್ಯೆ ಸಾವಿರಾರು.

ಸಾಮಾನ್ಯವಾಗಿ ವಿಷಾನಿಲ ಸೋರಿಕೆಯಾದಾಗ ಅದರಿಂದ ಆ ಕ್ಷಣಕ್ಕೆ ಜೀವಹಾನಿ ಸಂಭವಿಸುತ್ತದೆಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವ ಬೇರೆಯೇ ಇದೆ. ವಿಷಾನಿಲ ಸೋರಿಕೆಯಿಂದ ಆ ಕ್ಷಣಕ್ಕೆ ಸ್ಥಳದಲ್ಲಿ ಉಸಿರುಕಟ್ಟಿ ಸಾಯಬಹುದಾದವರ ಸಂಖ್ಯೆಗಿಂತ ಅದು ಗಾಳಿಯಲ್ಲಿ ಹರಡಿ ಶ್ವಾಸಕೋಶದ ಖಾಯಿಲೆ ಮತ್ತು ಇತರ ಖಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ದೊಡ್ಡದು.ಎಷ್ಟರ ಮಟ್ಟಿಗೆಂದರೆ ಅಂತಹ ಅಪಾಯಕಾರಿ ವಿಷಾನಿಲ ಸೋರಿಕೆಗಳು ತಲೆಮಾರುಗಳನ್ನೇ ಬಾಧಿಸುತ್ತವೆ. ನಮ್ಮ ಭೋಪಾಲದ ಅನಿಲ ದುರಂತವನ್ನೇ ತೆಗೆದುಕೊಳ್ಳಿ. ಅದಾಗಿ ಮೂರು ದಶಕಗಳೇ ಸಂದರೂ ಅಂದಿನ ಆ ದುರಂತದ ಪರಿಣಾಮ ಇಂದಿಗೂ ಅಲ್ಲಿ ಜನಿಸುವ ಮಕ್ಕಳಲ್ಲಿ ಕಾಣ ಸಿಗುತ್ತದೆ.‌ 

ಮೊಯ್ದು ಅವರಲ್ಲಿ ಅವರ ವೃತ್ತಿ ಬದುಕಿನ ಅವಿಸ್ಮರಣೀಯ ಘಟನೆಗಳ ಬಗ್ಗೆ ಕೇಳಿದಾಗ ಅವರು ಕೆಲವೊಂದು ಮಹತ್ವದ ತುರ್ತು  ಕಾರ್ಯಾಚರಣೆಯಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಿದ ಕುರಿತು ಹೇಳಿದ್ದಾರೆ.

-2000ದ ಜನವರಿ ತಿಂಗಳಲ್ಲಿ ನವ ಮಂಗಳೂರಿನ ಬಂದರು ಟ್ರಸ್ಟ್‌ನಲ್ಲಿ ಅಮೋನಿಯಾ ಎಂಬ ವಿಷಾನಿಲ ಸೋರಿಕೆಯಾದಾಗ ಸತತ ಹತ್ತು ಗಂಟೆಗಳ ಕಾಲ ಕಾರ್ಯಾಚರಿಸಿ ನೂರಾರು‌ ಜೀವ ಹಾನಿಯನ್ನು ತಪ್ಪಿಸಿದ ತಂಡದಲ್ಲಿ ಮೊಯ್ದು ಪ್ರಮುಖ ಪಾತ್ರ ವಹಿಸಿದ್ದರು.

-2008ರಲ್ಲಿ ಉಪ್ಪಿನಂಗಡಿ ಬಳಿಯ ಪೆರಿಯ ಶಾಂತಿ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದು ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಅಗ್ನಿ ಶಾಮಕ ದಳ ಸ್ಥಳಕ್ಕೆ ತಲುಪದಿದ್ದರೆ ಅದೆಷ್ಟೋ ಪ್ರಾಣಗಳು ಬಲಿಯಾಗುತ್ತಿತ್ತು. ಊರಿಗೆ ಊರೇ ಹೊತ್ತಿ ಉರಿಯುತ್ತಿತ್ತು. ಅದು ಅರಣ್ಯ ಪ್ರದೇಶ ಬೇರೆ ಆ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ ನಡೆಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿದ ತಂಡದ ಪ್ರಮುಖರಲ್ಲಿ ಮೊಯ್ದು ಕುಂಞಿ ಕೂಡಾ ಒಬ್ಬರಾಗಿದ್ದರು.

-2010ರಲ್ಲಿ  ಮಂಗಳೂರು ವಿಮಾನಾಪಘಾತ ಸಂಭವಿಸಿದಾಗ ತುರ್ತು ಕಾರ್ಯಾಚರಣೆ, ಜೀವನ್ಮರಣದಲ್ಲಿ ನರಳುತ್ತಿದ್ದವರ ರಕ್ಷಣೆ ಮುಂತಾದ ಕೆಲಸಗಳಲ್ಲಿ ಸತತ ಹನ್ನೊಂದು ಗಂಟೆಗಳು ಮೊಯ್ದು ತನ್ನ ತಂಡದೊಂದಿಗೆ ಕಾರ್ಯಾಚರಿಸಿದ್ದರು.

- 2010ರಲ್ಲಿ ಪುತ್ತೂರು ತಾಲೂಕಿನ ಇಡ್ಕಿದು ಎಂಬಲ್ಲಿನ ಪೆಟ್ರೋ ಕೆಮಿಕ್ಸ್ ಮಳಿಗೆಯೊಂದರಲ್ಲಿ ತೈಲ ಸೋರಿಕೆಯಾಗಿತ್ತು. ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳ ತಲುಪದಿದ್ದಲ್ಲಿ ಇಡೀ ಕಟ್ಟಡವೇ ಹೊತ್ತಿ ಉರಿದು ಭಸ್ಮವಾಗಿ ಬಹು ಕೋಟಿ ನಷ್ಟ ಮತ್ತು ಹಲವು ಪ್ರಾಣಹಾನಿ ಸಂಭವಿಸುತ್ತಿತ್ತು. ಆ ಸಂದರ್ಭ ನಡೆಸಲಾದ ತುರ್ತು ಕಾರ್ಯಾಚರಣೆಯ ತಂಡದಲ್ಲೂ ಮೊಯ್ದುರದ್ದು ಪ್ರಧಾನ ಪಾತ್ರ.

-2002 ರಲ್ಲಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿಯ ಮಾರ್ನಮಿಕಟ್ಟೆ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಬಿತ್ತು. ಅದರಡಿಯಲ್ಲಿ ನಾಲ್ವರು ಕಾರ್ಮಿಕರು ಸಾವನ್ನು ಎದುರು ನೋಡುತ್ತಿದ್ದಾಗ ಅವರನ್ನು ಸಿನಿಮೀಯವಾಗಿ ರಕ್ಷಿಸಿದ ತಂಡದಲ್ಲಿ ಮೊಯ್ದುರವರದ್ದು ಪ್ರಧಾನ ಪಾತ್ರವಾಗಿತ್ತು. ಹೀಗೆ ಮೊಯ್ದು ಮಾಡಿದ ಪ್ರಾಣ ರಕ್ಷಣೆ ಮತ್ತು ಸೊತ್ತು ವಿತ್ತಗಳ ರಕ್ಷಣೆಯ ಪಟ್ಟಿ ಬಹಳ ದೊಡ್ಡದಿದೆ.

ಹೀಗೆ ಒಂದು ಕಾಲಕ್ಕೆ ರಾಜೀನಾಮೆ ಕೊಡುವೆನೆಂದು ಹೊರಟಿದ್ದ ಮೊಯ್ದು ಇಂದು ಸಾವಿರಾರು ಪ್ರಾಣಗಳನ್ನು ರಕ್ಷಿಸಿದ ಸಂತೃಪ್ತಿ ಹೊಂದಿದ್ದಾರೆ. ಅವರ ಈ ಪುಣ್ಯ ಕಾಯಕಕ್ಕೆ ರಾಷ್ಟ್ರಪತಿ ಪದಕವೇ ಒಲಿದು ಬಂದಿದೆ. ಅಗ್ನಿ ಶಾಮಕ ದಳವೆಂದರೆ ಕೇವಲ ಹೆಣವೆತ್ತುವುದು ಮಾತ್ರವಲ್ಲ. ಹೆಣವಾಗಲಿದ್ದವರಿಗೆ ಜೀವದಾನ ಮಾಡುವ ಕೆಲಸವೂ ಹೌದು. ಮೊಯ್ದು ಕುಂಞಿ ಸ್ವಭಾವತಃ ಅತ್ಯಂತ ಸೌಮ್ಯ. ತನ್ನ ಇಪ್ಪತ್ತಮೂರು ವರ್ಷಗಳ ವೃತ್ತಿ ಬದುಕಿನಲ್ಲಿ ಒಂದೇ ಒಂದು ಅವಿದೇಯತೆಯ ಷರಾ ಇಲ್ಲದೇ ಅವರು ಮಾಡಿದ ಕೆಲಸಕ್ಕೆ ಇಂದು ಬಹುದೊಡ್ಡ ಗೌರವ ದೊರಕಿದೆ.‌ ಅವರಿಗೆ ಇನ್ನೂ ಒಂಬತ್ತು ವರ್ಷಗಳ ಸೇವಾವಧಿಯಿದೆ. ಜನರ ಪ್ರಾಣರಕ್ಷಣೆಯ ಪುಣ್ಯ ಕೈಂಕರ್ಯ ಇನ್ನೂ ಮುಂದುವರಿಯಲಿದೆ. ಅವರು ಇನ್ನಷ್ಟು ಸಾಧನೆಯ ಮೆಟ್ಟಿಲುಗಳನ್ನೇರಲಿ ಎಂದು ಹಾರೈಸೋಣ..

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News