ಎಫ್‌ಐಆರ್ ರದ್ದು ಕೋರಿ ಎಚ್‌ಡಿಕೆ ಅರ್ಜಿ: ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

Update: 2020-02-14 17:05 GMT

ಬೆಂಗಳೂರು, ಫೆ.14: ಕಳೆದ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್, ಕಾಂಗ್ರೆಸ್ ಶಾಸಕರ ಮನೆಗಳ ಮೇಲೆ ಐಟಿ ದಾಳಿ ನಡೆದಾಗ ಐಟಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿಚಾರವಾಗಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ನೋಟಿಸ್ ಜಾರಿಗೊಳಿಸಿದೆ. 

ಈ ಕುರಿತು ಎಚ್‌ಡಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಸಂವಿಧಾನದ ಅನುಚ್ಛೇದ 19 ಹಾಗೂ ಅನುಚ್ಛೇದ 22ರಲ್ಲಿ ಪ್ರತಿಯೊಬ್ಬರಿಗೂ ಮಾತುನಾಡುವ ಹಕ್ಕು ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನೀಡಲಾಗಿದೆ. ಆದರೆ, ಪೊಲೀಸರು ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸೆಷನ್ಸ್ ಕೋರ್ಟ್‌ನಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಈ ಎಲ್ಲ ವಿಚಾರಣೆಗೂ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಅನಿತಾ ಠಾಕೂರ್ ತೀರ್ಪಿನಲ್ಲಿ ಜಮ್ಮು ಮತ್ತು ಕಾಶ್ಮೀರ್(2016)ರ 15 ಎಸ್‌ಸಿಸಿ 525. (2016) 4 ಎಸ್‌ಸಿಸಿ(ಸಿಆರ್‌ಐ) 695ರ ಅನುಚ್ಛೇದ 19ರ ಅನುಗುಣವಾಗಿ ನಾಗರಿಕರು ಒಂದು ಕಡೆ ಸೇರಿ ಶಾಂಂತಿಯುವಾಗಿ ಪ್ರತಿಭಟನೆ ಮಾಡಬಹುದೆಂದು ಆದೇಶಿಸಲಾಗಿದೆ. ಆದರೆ, ಎಚ್‌ಡಿಕೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News