ಮ್ಯಾಚ್ ಫಿಕ್ಸಿಂಗ್: ಸಂಜೀವ್ ಚಾವ್ಲಾನನ್ನು ತಿಹಾರ್ ಜೈಲಿಗೆ ಕಳುಹಿಸಿದ ದಿಲ್ಲಿ ಹೈಕೋರ್ಟ್

Update: 2020-02-15 14:02 GMT

ಹೊಸದಿಲ್ಲಿ, ಫೆ.14: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಭಾಗಿಯಾಗಿರುವ ಕ್ರಿಕೆಟ್‌ನ ಅತ್ಯಂತ ದೊಡ್ಡ ಮ್ಯಾಚ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿ ಸಂಜೀವ್ ಚಾವ್ಲಾಗೆ ವಿಚಾರಣಾ ನ್ಯಾಯಾಲಯವು ಕಸ್ಟಡಿ ವಿಚಾರಣೆಗೆ ಅವಕಾಶ ನೀಡಿದ ಒಂದು ದಿನದ ಬಳಿಕ ದಿಲ್ಲಿ ಹೈಕೋರ್ಟ್ ಶುಕ್ರವಾರ ಚಾವ್ಲಾನನ್ನು ಮುಂದಿನ ಆದೇಶದ ತನಕ ತಿಹಾರ್ ಜೈಲಿಗೆ ಕಳುಹಿಸಿಕೊಟ್ಟಿದೆ.

ವಿಚಾರಣಾ ನ್ಯಾಯಾಲಯ ಗುರುವಾರ ಚಾವ್ಲಾನನ್ನು 12 ದಿನಗಳ ವಿಚಾರಣೆಗೆ ದಿಲ್ಲಿ ಪೊಲೀಸರಿಗೆ ಒಪ್ಪಿಸಿತ್ತು. ದೇಶದ ವಿವಿಧ ನಗರಗಳಲ್ಲಿ ಚಾವ್ಲಾ ನೆಲೆಸಿದ್ದ ಕಾರಣ ಇನ್ನಷ್ಟು ತನಿಖೆ ನಡೆಸುವ ವಿಚಾರವನ್ನು ಉಲ್ಲೇಖಿಸಿತ್ತು.

ಇಂಗ್ಲೆಂಡ್‌ನಿಂದ ಗಡಿಪಾರಾಗಿ ಬಂದಿರುವ ಚಾವ್ಲಾ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ. ಗಡಿಪಾರಿನ ವೇಳೆ ಗೃಹ ವ್ಯವಹಾರ ಸಚಿವಾಲಯ ಮುಖಾಮುಖಿ ವಿಚಾರಣೆಗೆ ಮಾತ್ರ ತನ್ನನ್ನು ತಿಹಾರ್ ಜೈಲಿನಲ್ಲಿಡಲಾಗುತ್ತದೆ ಎಂದು ಬ್ರಿಟನ್ ಸರಕಾರಕ್ಕೆ ಭರವಸೆ ನೀಡಿತ್ತು ಎಂದು ಚಾವ್ಲಾ ವಾದಿಸಿದ್ದಾನೆ.

ತನಿಖಾಧಿಕಾರಿ ಉಪಸ್ಥಿತರಿಲ್ಲದ ಕಾರಣ ಜಸ್ಟಿಸ್ ಅನು ಮಲ್ಹೋತ್ರಾ ಅವರು ಪ್ರಕರಣಕ್ಕೆ ಸಂಬಂಧಿಸಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಕ್ರೈಮ್ ಬ್ರಾಂಚ್‌ಗೆ ನಿರ್ದೇಶನ ನೀಡಿದರು. ಮುಂದಿನ ಆದೇಶದ ತನಕ ಚಾವ್ಲಾನನ್ನು ತಿಹಾರ್ ಜೈಲಿಗೆ ಕಳುಹಿಸುವಂತೆ ಆದೇಶ ನೀಡಿದರು.

ಅರ್ಜಿಗೆ ಸಂಬಂಧಿಸಿ ನ್ಯಾಯಾಲಯವು ಗೃಹ ಹಾಗೂ ವ್ಯವಹಾರ ಸಚಿವಾಲಯಕ್ಕೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ನಿಗದಿಪಡಿಸಿದೆ.

 2002ರ ವಿಮಾನ ಅಪಘಾತಕ್ಕೆ ಬಲಿಯಾಗಿರುವ ಕ್ರೊನಿಯೆ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಒಳಗೊಂಡಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. 2000ರ ಫೆಬ್ರವರಿ-ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದ ವೇಳೆ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಚಾವ್ಲಾ ಪ್ರಧಾನ ಪಾತ್ರವಹಿಸಿದ್ದ ಎಂದು ಆರೋಪಿಸಲಾಗಿದೆ.

ಬ್ರಿಟಿಷ್ ಕೋರ್ಟ್ ದಾಖಲೆಗಳ ಪ್ರಕಾರ ಚಾವ್ಲಾ ದಿಲ್ಲಿಯ ವ್ಯಾಪಾರಸ್ಥನಾಗಿದ್ದು 1996ರಲ್ಲಿ ವ್ಯಾಪಾರದ ವೀಸಾದಲ್ಲಿ ಬ್ರಿಟನ್‌ಗೆ ತೆರಳಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News