ಮಂಗಳಮುಖಿಯರಿಗೆ ಸರಕಾರ ಉತ್ತಮ ಶಿಕ್ಷಣ ನೀಡಬೇಕು: 'ಮನೆಯಂಗಳದಲ್ಲಿ ಮಾತುಕತೆ'ಯಲ್ಲಿ ಮಾತಾ ಮಂಜಮ್ಮ

Update: 2020-02-15 18:27 GMT

ಬೆಂಗಳೂರು, ಫೆ.15: ಮಂಗಳಮುಖಿಯರಿಗೆ ಸರಿಯಾದ ಶಿಕ್ಷಣ ಇಲ್ಲದೇ ಇರುವುದರಿಂದ ಅವರೆಲ್ಲಾ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ. ಅವರಿಗೆ ಸರಕಾರ ಉತ್ತಮ ಶಿಕ್ಷಣ ನೀಡಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಜೋಗತಿ ನೃತ್ಯ ಕಲಾವಿದೆ ಮಾತಾ ಬಿ. ಮಂಜಮ್ಮ ಜೋಗತಿ ಹೇಳಿದ್ದಾರೆ.

ಶನಿವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆಯ ತಿಂಗಳ ಅತಿಥಿಯಾಗಿ ಮಾತನಾಡಿದ ಅವರು, ಮಂಗಳಮುಖಿಯರನ್ನು ಸಮಾಜದಲ್ಲಿ ಕೇವಲವಾಗಿ ಕಾಣಲಾಗುತ್ತಿದೆ. ಅವರನ್ನು ವೇಶ್ಯಾವಾಟಿಕೆ ಮಾಡುವವರು ಎಂಬಂತೆ ಬಿಂಬಿಸಲಾಗುತ್ತಿದೆ. ಅವರಿಗೂ ಸರಕಾರ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಿದರೆ ಅವರ್ಯಾಕೆ ಈ ರೀತಿಯ ಕೆಲಸ ಮಾಡುತ್ತಿದ್ದರು? ಅವರಿಗೆ ಶಿಕ್ಷಣದ ಅಗತ್ಯತೆ ಇದೆ. ಆದ್ದರಿಂದ ಸರಕಾರ ಅಂತವರಿಗೆ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.

ಮುಂದುವರೆದು ಮಾತನಾಡಿದ ಅವರು, ನಾನು ತೃತೀಯ ಲಿಂಗವಾಗಿ ರೂಪಾಂತರಗೊಳ್ಳುವ ಸಂದರ್ಭದಲ್ಲಿ ಸಮಾಜದ ಕಟ್ಟುಪಾಡುಗಳಿಗೆ ಹೆದರಿ, ಸ್ವಂತ ತಂದೆ ತಾಯಿಯರೇ ನನ್ನನ್ನು ದೂರ ಮಾಡಿದರು. ನಂತರ ನಾನು ಜೋಗತಿ ವೃತ್ತಿಯನ್ನು ಸ್ವೀಕರಿಸಿ ಅದನ್ನೇ ಬದುಕಿಗೆ ಆಧಾರ ಮಾಡಿಕೊಂಡೆ. ಹುಟ್ಟಿದ್ದು ಮಂಜುನಾಥ ಆಗಿ, ಬೆಳೆದದ್ದು ಮಂಜಮ್ಮನಾಗಿ. ಆಮೇಲೆ ಹೊಟ್ಟೆಪಾಡಿಗಾಗಿ ನನ್ನ 18ನೇ ವಯಸ್ಸಿನಿಂದ ಕಲಾಸೇವೆ ಮಾಡುತ್ತಾ, ಜನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ, ಸಂತೆ, ವೇದಿಕೆ ಮುಂತಾದ ಸ್ಥಳಗಳಲ್ಲಿ ಈವರೆಗೆ ಸಾವಿರಾರು ಪ್ರದರ್ಶನಗಳನ್ನು ಕರ್ನಾಟಕದಾದ್ಯಂತ ನೀಡಿದ್ದೇನೆ ಎಂದರು.

ತಂದೆ, ತಾಯಿಯಿಂದ ದೂರವಾದ ನಂತರ ಮಾನಸಿಕವಾಗಿ ಕುಗಿದ್ದೆ. ಒಂದು ದಿನ ವಿಷ ಸೇವಿಸಿದೆ. ನಂತರ ವಾಂತಿಯೂ ಆಯಿತು. ಮನೆಯಿಂದ ಹೊರಗೆ ಮಲಗಿದ್ದ ಕಾರಣ ಮಳೆ ನೀರನ್ನು ಕುಡಿಯುವ ಅನಿವಾರ್ಯತೆ. ನಂತರ ತಾಯಿ ನನ್ನನ್ನು ಆಸ್ಪತ್ರೆ ಸೇರಿಸಿದರು. ಯಾರೊಬ್ಬರೂ ಅಂದು ನನ್ನನ್ನು ನೋಡಲು ಬರಲಿಲ್ಲ ನಂತರ ತಾಯಿಯ ಸೀರೆಗಳನ್ನು ತೆಗೆದುಕೊಂಡು ದಾವಣಗೆರೆಯಿಂದ ಮರಿಯಮ್ಮನಹಳ್ಳಿಗೆ ಹೊರಟೆ. ಅಲ್ಲಿನ ಕೆಲವರ ನೆರವಿನೊಂದಿಗೆ ಬೆಳಗ್ಗೆ ಇಡ್ಲಿ ಮಾರಿ, ಸಂಜೆ ಶಾಲಾ ಮಕ್ಕಳಿಗೆ ಪಾಠ ಮಾಡಿ ಬಂದ ಹಣದಿಂದ ಬದುಕು ಸಾಗಿಸುತ್ತಿದೆ ಎಂದು ತಮ್ಮ ಅಂದಿನ ಜೀವನದ ಕ್ಷಣಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News