ಭೂ ವಾತಾವರಣ ಮಾಯವಾದ್ರೆ ಏನಾಗ್ತಿತ್ತು!

Update: 2020-02-16 05:12 GMT

ಭೂಮಿ ಒಂದು ವಿಶಿಷ್ಟ ಗ್ರಹ, ಜೀವಿಗಳು ವಾಸಿಸಲು ಯೋಗ್ಯ ಗ್ರಹ. ಭೂ ಗ್ರಹ ವಾತಾವರಣ ಹೊಂದಿರುವುದರಿಂದ ಜೀವಿಗಳು ಜೀವ ತಳೆಯಲು ಮತ್ತು ವಿಕಾಸ ಹೊಂದಲು ಸಾಧ್ಯವಾಗಿದೆ. ಇಂತಹ ಗ್ರಹದ ವಾತಾವರಣ ಇದ್ದಕ್ಕಿದ್ದಂತೆ ಮಾಯವಾದರೆ ಏನಾಗುತ್ತಿತ್ತು! ಎಂಬ ಕಾಲ್ಪನಿಕತೆ ಮೂಡದಿರದು. ಏನಾಗ್ತಿತ್ತು ಅಂತ ತಿಳಿಯುವುದಕ್ಕಿಂತ ಮೊದಲು ವಾತಾವರಣ ಎಷ್ಟು ಮುಖ್ಯ ಎಂದು ತಿಳಿಯುವ. ಭೂಮಿಯ ವಾತಾವರಣಕ್ಕೆ ಕಾರಣವಾದ ಅನಿಲಗಳ ರಕ್ಷಣಾತ್ಮಕ ಪದರವಿಲ್ಲದೆ ಸೌರಮಂಡಲದ ಕಠಿಣ ಪರಿಸ್ಥಿತಿಗಳನ್ನು ಎದುರಿಸುವುದು ಕಷ್ಟ. ವಾತಾವರಣ ಇಲ್ಲದಿದ್ದರೆ ಭೂಮಿಯು ಬಂಜರಾಗುತ್ತಿತ್ತು ಮತ್ತು ನಿರ್ಜೀವ ಗ್ರಹ ಎನಿಸಿಕೊಳ್ಳುತ್ತಿತ್ತು. ವಾತಾವರಣವು ಅಗತ್ಯ ಉಷ್ಣತೆಯನ್ನು ಒದಗಿಸುವ ಮೂಲಕ ಹಾನಿಕಾರಕ ಸೌರ ಕಿರಣಗಳನ್ನು ಹೀರಿಕೊಂಡು ಗ್ರಹದ ನಿವಾಸಿಗಳನ್ನು ರಕ್ಷಿಸುತ್ತದೆ. ವಾತಾವರಣವು ಜೀವಿಗಳಿಗೆ ಅಗತ್ಯವಾದ ಆಮ್ಲಜನಕ ಹಾಗೂ ಇಂಗಾಲದ ಡೈ ಆಕ್ಸೈಡನ್ನು ನೀಡುವುದರ ಜೊತೆಗೆ ಸೂರ್ಯನ ಶಕ್ತಿಗೆ ಓರೆನ್ ಪದರವನ್ನು ರೂಪಿಸಿ ಬಾಹ್ಯಾಕಾಶದ ಅಪಾಯಗಳನ್ನು ನಿವಾರಿಸುತ್ತದೆ. ಇಂತಹ ಅಗಾಧ ಮಹತ್ವವುಳ್ಳ ವಾತಾವರಣ ಮಾಯವಾದರೆ ಏನಾಗ್ತಿತ್ತು ಎಂಬುದು ಇಂದಿನ ಚರ್ಚಾ ವಿಷಯ.

ಭೂ ವಾತಾವರಣ ಇಲ್ಲದಿದ್ದರೆ ಏನಾಗಬಹುದು ಎಂಬ ನಿರೀಕ್ಷೆಯ ಮೊದಲ ಉತ್ತರ, ಇಡೀ ಭೂಗ್ರಹ ನಿಶ್ಯಬ್ಧವಾಗುತ್ತಿತ್ತು. ಹೌದು ವಾತಾವರಣ ಇಲ್ಲದಿದ್ದರೆ ಯಾವುದೇ ಶಬ್ದವೂ ಕೇಳಲಾರದು. ಶಬ್ದ ಪ್ರಸಾರಕ್ಕೆ ಮಾಧ್ಯಮ ಅಗತ್ಯ. ಬಹುತೇಕವಾಗಿ ನಾವೆಲ್ಲರೂ ವಾತಾವರಣದ ಗಾಳಿಯ ಮೂಲಕ ಶಬ್ದ ಗ್ರಹಿಸುತ್ತೇವೆಯೇ ಹೊರತು ನೆಲದ ಕಂಪನಗಳಿಂದ ಅಲ್ಲ. ವಾತಾವರಣ ಇಲ್ಲದಿದ್ದರೆ ಯಾವುದೇ ಶಬ್ಧವು ನಮ್ಮ ಕಿವಿಗೆ ಕೇಳುತ್ತಲೇ ಇರಲಿಲ್ಲ. ನಾವು ಮಾತನಾಡಿದ್ದು ಇನ್ನೊಬ್ಬರಿಗೆ ತಿಳಿಯುತ್ತಿರಲಿಲ್ಲ. ಭೂ ವಾತಾವರಣ ಇಲ್ಲದಿದ್ದರೆ ಪಕ್ಷಿಗಳು ಮತ್ತು ವಿಮಾನಗಳು ಹಾರಾಟ ನಡೆಸಲಾರವು. ಇವುಗಳ ಹಾರಾಟಕ್ಕೆ ವಾತಾವರಣ ಸೂಕ್ತ ವೇದಿಕೆ ನಿರ್ಮಾಣ ಮಾಡಿದೆ. ವಾತಾವರಣ ಇರೋದ್ರಿಂದ ಭೂಮಿಯ ಆಕಾಶ ನೀಲಿಯಾಗಿ ಕಾಣುತ್ತದೆ. ವಾತಾವರಣ ಇಲ್ಲದಿದ್ದರೆ ಆಕಾಶವು ಕಪ್ಪು ಬಣ್ಣಕ್ಕೆ ತಿರುಗುತ್ತಿತ್ತು. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆಗುತ್ತಿರಲಿಲ್ಲ. ವಾತಾವರಣ ಮಾಯವಾದರೆ ಭೂ ಮೇಲ್ಮೈ ಮೇಲಿನ ಎಲ್ಲಾ ಸಸ್ಯ ಹಾಗೂ ಜೀವಿಗಳು ಸಾಯುತ್ತವೆ. ವಾತಾವರಣ ಇಲ್ಲದಿದ್ದರೆ ನಿರ್ವಾತ ಏರ್ಪಡುತ್ತದೆ. ನಿರ್ವಾತದಲ್ಲಿ ನಾವು ಬಹುಕಾಲ ಬದುಕಲು ಸಾಧ್ಯವಿಲ್ಲ. ಮಾನವರನ್ನೂ ಸೇರಿದಂತೆ ಎಲ್ಲಾ ಜೀವಿಗಳ ದೇಹದ ಉಷ್ಣತೆ ಕ್ರಮೇಣವಾಗಿ ಏರತೊಡಗುತ್ತದೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ಬಾಯಲ್ಲಿನ ಲಾಲಾರಸ ದೇಹದ ಉಷ್ಣದಿಂದ ಕುದಿಯುತ್ತದೆ. ಶ್ವಾಸಕೋಶಗಳು ಒಡೆದುಹೋಗಬಹುದು. ವಾತಾವರಣ ಇಲ್ಲದಿದ್ದರೆ ಬಾಹ್ಯಾಕಾಶದಿಂದ ಬರುವ ಸೌರ ವಿಕಿರಣ ಹಾಗೂ ಕಾಸ್ಮಿಕ್ ಕಿರಣಗಳು ನಮ್ಮ ಚರ್ಮ ಮತ್ತು ಕಣ್ಣುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಸೌರ ಫಿಲ್ಟರ್ ಎನಿಸಿದ ಓಝೋನ್ ಇಲ್ಲದೇ ಹೋದರೆ ಸೂರ್ಯನ ಸ್ನಾನ ಮಾರಕವಾಗುತ್ತದೆ. ನದಿಗಳು ಸರೋವರಗಳು, ಸಾಗರಗಳ ನೀರು ಕುದಿಯುತ್ತದೆ. ಆಗ ಜೀವಿಗಳಿಗೆ ಅಗತ್ಯವಾದ ಜೀವಜಲ ಇಲ್ಲದಂತಾಗುತ್ತದೆ. ಸಾಗರಗಳಿಂದ ಬರುವ ನೀರಿನ ಆವಿ ಹಸಿರುಮನೆ ಅನಿಲವಾಗಿ ಪರಿವರ್ತನೆ ಹೊಂದುತ್ತದೆ. ಸೌರ ವಿಕಿರಣವು ವಾತಾವರಣದಲ್ಲಿನ ಆಮ್ಲಜನಕವನ್ನು ಶಕ್ತಿಗುಂದಿಸುತ್ತದೆ. ಉಸಿರಾಡಲು ತೆಳುವಾದ ಗಾಳಿಯೂ ಕೂಡಾ ಇಲ್ಲದಂತಾಗುತ್ತದೆ. ಉಸಿರಾಡಲು ಗಾಳಿ ಇಲ್ಲದೇ ಜೀವಿಗಳು ಸಾಯುತ್ತವೆ. ಸಸ್ಯಗಳು ನಶಿಸುತ್ತವೆ. ಮೀನು ಮತ್ತು ಇನ್ನಿತರ ಜಲಚರಗಳು ಅಳಿದುಹೋಗುತ್ತವೆ. ಆದಾಗ್ಯೂ ಕೆಲವು ಬ್ಯಾಕ್ಟೀರಿಯಾಗಳು ಬದುಕಬಲ್ಲವು. ಕೀಮೋಸೈಂಥೆಟಿಕ್ ಎಂಬ ಬ್ಯಾಕ್ಟೀರಿಯಾ ವಾತಾವರಣ ಇಲ್ಲದೆಯೂ ಬದುಕಬಲ್ಲದು ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ವಾತಾವರಣ ಇಲ್ಲದಿದ್ದರೆ ಹಗಲು ಮತ್ತು ರಾತ್ರಿಗಳ ತಾಪಮಾನದಲ್ಲಿ ಏರುಪೇರುಗಳಾಗುತ್ತವೆ. ಹಗಲು ಹೆಚ್ಚು ಉಷ್ಣತೆ ಇದ್ದರೆ ರಾತ್ರಿ ಕಡಿಮೆ ಉಷ್ಣತೆ ದಾಖಲಾಗುತ್ತದೆ. ಅದು ಸರಾಸರಿ 180 ಸೆಲ್ಸಿಯಸ್‌ಗಿಂತ ಕೆಳಗಿಳಿಯುತ್ತದೆ. ವಾತಾವರಣ ಇಲ್ಲದಿದ್ದರೆ ಜ್ವಾಲಾಮುಖಿಗಳು ಸ್ಫೋಟಗೊಳ್ಳುತ್ತಲೇ ಇರುತ್ತವೆ. ಇದರಿಂದ ಭೂಮಿಗೆ ಮತ್ತಷ್ಟು ಇಂಗಾಲದ ಡೈ ಆಕ್ಸೈಡ್ ಸೇರ್ಪಡೆಯಾಗುತ್ತದೆ. ಬಾಹ್ಯಾಕಾಶದಿಂದ ಬರುವ ಕ್ಷುದ್ರಗ್ರಹಗಳು ಭೂಮಿಯ ಮೇಲೆ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತವೆ. ನಾಸಾದ ಅಧ್ಯಯನದ ಪ್ರಕಾರ ಪ್ರತಿದಿನ 100 ಟನ್‌ಗಿಂತಲೂ ಅಧಿಕ ತೂಕದ ಶಿಲಾತುಣುಕುಗಳು ಭೂಮಿಗೆ ಬಡಿಯುತ್ತವೆ. ವಾತಾವರಣ ಇರುವುದರಿಂದ ಬಹುತೇಕ ಕ್ಷುದ್ರಗ್ರಹಗಳು, ಉಲ್ಕೆಗಳು ಭೂ ವಾತಾವರಣ ತಲುಪುತ್ತಿದ್ದಂತೆ ಉರಿದು ಬೂದಿಯಾಗುತ್ತವೆ. ವಾತಾವರಣ ಇಲ್ಲದಿದ್ದರೆ ಇವು ನೇರವಾಗಿ ಭೂಮಿಯ ಮೇಲೆ ಅಪ್ಪಳಿಸಿ ದೊಡ್ಡ ದೊಡ್ಡ ಕುಳಿಗಳನ್ನು ಉಂಟು ಮಾಡಬಹುದು. ಸಮಾಧಾನಕರ ಸಂಗತಿ ಎಂದರೆ ಇನ್ನೂ ಭೂಮಿಯ ಮೇಲೆ ವಾತಾವರಣ ಇದೆ. ಹಾಗಾಗಿ ಭೂಮಿಗೆ ಹಾಗೂ ಅದರಲ್ಲಿನ ಜೀವಿಗಳಿಗೆ ಸದ್ಯ ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ಮಾನವನ ದುರಾಸೆಗೆ ಮಿತಿ ಇಲ್ಲ. ಈಗಾಗಲೇ ಬಹುತೇಕ ವಾತಾವರಣವನ್ನು ಹಾಳು ಮಾಡಿದ್ದೇವೆ ಮತ್ತು ಮಾಡುತ್ತಲೇ ಇದ್ದೇವೆ. ಇದರಿಂದ ಹವಾಮಾನದಲ್ಲಿ ವೈಪರೀತ್ಯಗಳಾಗುತ್ತಿರುವುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ. ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾತಾವರಣ ತನ್ನ ಶಕ್ತಿಯನ್ನು ಕ್ಷೀಣಿಸಿಕೊಳ್ಳುತ್ತಿದೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ಭೂ ವಾತಾವರಣ ಕಾಪಾಡಲು ಪ್ರಯತ್ನಿಸಿದರೆ ಮುಂದಿನ ನಮ್ಮ ಪೀಳಿಗೆಗೆ ಒಂಚೂರು ಉಸಿರಾಡಲು ಗಾಳಿ, ಕುಡಿಯಲು ನೀರು ಸಸ್ಯಗಳು ಬೆಳೆಯಲು ಸೂಕ್ತ ಹವಾಮಾನ ಮತ್ತು ವಾಯುಗುಣ ಉಳಿಸಬಹುದಲ್ಲವೇ?

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News