ಪೌರತ್ವ ಕಾಯ್ದೆ: ಎಷ್ಟೇ ಒತ್ತಡವಿದ್ದರೂ ನಮ್ಮ ನಿರ್ಧಾರಕ್ಕೆ ಬದ್ಧ; ಪ್ರಧಾನಿ ಮೋದಿ

Update: 2020-02-16 14:21 GMT

ಹೊಸದಿಲ್ಲಿ, ಫೆ.16: ಪೌರತ್ವ ಕಾಯ್ದೆ ವಿಷಯದಲ್ಲಿ ಎಷ್ಟೇ ಒತ್ತಡವಿದ್ದರೂ ತನ್ನ ಸರಕಾರ ದ ನಿಲುವು ಅಚಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹಲವು ವರ್ಷಗಳಿಂದ 370ನೇ ವಿಧಿ ರದ್ಧತಿ ಮತ್ತು ಪೌರತ್ವ ಕಾಯ್ದೆ ಜಾರಿಯಂತಹ ನಿರ್ಧಾರಗಳಿಗೆ ದೇಶ ಕಾಯುತ್ತಿದೆ. ದೇಶದ ಹಿತಾಸಕ್ತಿಯ ನಿಟ್ಟಿನಲ್ಲಿ ಈ ನಿರ್ಧಾರದ ಅಗತ್ಯವಿದೆ. ಎಲ್ಲಾ ಒತ್ತಡದ ಹೊರತಾಗಿಯೂ ನಾವು ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಮತ್ತು ಬದ್ಧರಾಗಿಯೇ ಇರುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಾರಣಾಸಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಗೆ ಒಂದು ದಿನದ ಭೇಟಿ ನೀಡಿರುವ ಮೋದಿ ಕ್ಷೇತ್ರ ವ್ಯಾಪ್ತಿಯಲ್ಲಿ 1,254 ಕೋಟಿ ರೂ. ಮೊತ್ತದ 50 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಅಲ್ಲದೆ ವೀಡಿಯೊ ಸಂಪರ್ಕದ ಮೂಲಕ ಮಹಾ ಕಾಲ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮಾರಕ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರಲ್ಲದೆ ಭಾರತೀಯ ಜನಸಂಘದ ಮುಖಂಡ, ಆರೆಸ್ಸೆಸ್ ಸಿದ್ಧಾಂತವಾದಿ ಪಂಡಿತ್ ದೀನದಯಾಳ್ ಉಪಾಧ್ಯಾಯರ 63 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಈ ತಿಂಗಳಿನ ಆರಂಭದಲ್ಲಿ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ಗೊತ್ತುವಳಿ ಚರ್ಚೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಅರಾಜಕತೆಯೆಡೆಗೆ ಸಾಗುವ ರಸ್ತೆಯಾಗಿದೆ . ಸಂಸತ್ತಿನಲ್ಲಿ ಕ್ರಮಬದ್ಧವಾಗಿ ಅಂಗೀಕಾರವಾಗಿರುವ ಮತ್ತು ಪ್ರಕಟಿಸಲಾಗಿರುವ ಕಾನೂನಿನ ವಿರುದ್ಧ ನಡೆಯುವ ಪ್ರತಿಭಟನಾ ಜಾಥಾಗಳು, ಹಿಂಸಾಚಾರ, ದೊಂಬಿಯ ಘಟನೆ ದೇಶಕ್ಕೆ ಸಮಸ್ಯೆ ಸೃಷ್ಟಿಸುತ್ತವೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News