ನಾಳೆಯಿಂದ ವಿಧಾನಮಂಡಲ ಜಂಟಿ ಅಧಿವೇಶನ: ಪ್ರತಿಧ್ವನಿಸಲಿರುವ ‘ದೇಶದ್ರೋಹ’ ಪ್ರಕರಣ

Update: 2020-02-16 15:40 GMT

ಬೆಂಗಳೂರು, ಫೆ. 16: ರಾಜ್ಯ ವಿಧಾನ ಮಂಡಲದ ವರ್ಷದ ಮೊದಲ ಜಂಟಿ ಅಧಿವೇಶನ ನಾಳೆ(ಫೆ.17)ಯಿಂದ ಆರಂಭಗೊಳ್ಳಲಿದ್ದು, ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಸರಕಾರದ ಮುನ್ನೋಟದ ಕುರಿತು ಭಾಷಣ ಮಾಡಲಿದ್ದಾರೆ.

ರಾಜ್ಯಪಾಲ ವಜುಭಾಯಿ ವಾಲಾರ ಸ್ವಾಗತಕ್ಕೆ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಸಜ್ಜುಗೊಂಡಿದ್ದು, ಅಧಿವೇಶನ ಕಲಾಪಕ್ಕೆ ಕ್ಷಣಗಣನೆ ಆರಂಭವಾಗಿದೆ. ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ವಿತರಣೆಯಲ್ಲಿ ಲೋಪ, ನಾಟಕದ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಹಾಗೂ ಅವರ ತಾಯಿ, ಶಿಕ್ಷಕಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಸೇರಿದಂತೆ ಸರಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ರಣತಂತ್ರ ರೂಪಿಸಿವೆ.

ಗಣಿಗಾರಿಕೆ ಅಕ್ರಮ ಆರೋಪ ಎದುರಿಸುತ್ತಿರುವ ಆನಂದ್ ಸಿಂಗ್‌ಗೆ ಅರಣ್ಯ ಖಾತೆ ನೀಡಿರುವುದು, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಮಂಗಳೂರು ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಪ್ರಕರಣವೂ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ.

ಫೆ.17ರಿಂದ 20ರ ವರೆಗೆ ನಾಲ್ಕು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಮೊದಲ ದಿನ ರಾಜ್ಯಪಾಲರು ಭಾಷಣ ಮಾಡಲಿದ್ದು, ಆ ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಅನಂತರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಬೇಕಿದೆ. ಆದರೆ, ಸಂಪುಟ ವಿಸ್ತರಣೆ ಬಳಿಕ ಆಂತರಿಕ ಕಚ್ಚಾಟ, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿದ್ದ ಅನುದಾನ ಕಡಿತ, ಮೈತ್ರಿ ಸರಕಾರ ಅನುಮೋದಿಸಿದ್ದ ಕಾಮಗಾರಿಗಳ ಅನುದಾನ ಸ್ಥಗಿತ, ಅಧಿಕಾರಿಗಳ ವರ್ಗಾವಣೆ, ಶಾಸಕರ ಅನುದಾನ ಕಡಿತ ಸೇರಿದಂತೆ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್-ಜೆಡಿಎಸ್ ತೀರ್ಮಾನಿಸಿವೆ.

ಆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿ ಸಿದ್ದತೆ ನಡೆಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಈಗಾಗಲೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದೆ. ಅಲ್ಲದೆ, ಇಲಾಖಾವಾರು ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿ ಮಾಹಿತಿ, ಅಂಕಿ-ಅಂಶಗಳನ್ನು ಸಂಗ್ರಹಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನ ರಾಜ್ಯದ ರೈತರು ಮತ್ತು ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಚರ್ಚೆಯ ಜೊತೆಗೆ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೂ ವೇದಿಕೆಯಾಗಲಿದೆ. ಹೀಗಾಗಿ ರಾಜಕೀಯ ವಲಯ ಸೇರಿದಂತೆ ಸಾರ್ವಜನಿಕ ರಲ್ಲಿಯೂ ಅಧಿವೇಶನ ಕಲಾಪ ಕುತೂಹಲ ಮೂಡಿಸಿದೆ.

ಉಪ ಚುನಾವಣೆ

ವಿಧಾನಸಭೆಯಿಂದ ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ನಾಳೆ(ಫೆ.17)ಉಪಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಅವರೊಬ್ಬರೇ ಕಣದಲ್ಲಿ ಉಳಿದಿದ್ದು, ಅವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News