ಸಿಎಎಯಿಂದ ನೆರೆ ರಾಷ್ಟ್ರಗಳ ಸೌಹಾರ್ದ ಹಾಳು: ಡಾ.ಎಲ್.ಹನುಮಂತಯ್ಯ

Update: 2020-02-16 16:59 GMT

ಬೆಂಗಳೂರು, ಫೆ.16: ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ ಪೌರತ್ವ(ತಿದ್ದುಪಡಿ) ಕಾಯ್ದೆಯು ನೆರೆ ರಾಷ್ಟ್ರಗಳ ಸೌಹಾರ್ದವನ್ನು ಹಾಳು ಮಾಡುತ್ತದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಲೇಖಕ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.

ರವಿವಾರ ನಗರದ ಬಸವನುಡಿಯ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್.ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಸಮುದಾಯ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಿಎಎ ಮೂಲಕ ಪಾಕಿಸ್ತಾನ, ಆಪ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಮುಂದಾಗಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ನೆರೆ ದೇಶಗಳಾದ ಶ್ರೀಲಂಕಾ, ನೇಪಾಳ, ಮಯನ್ಮಾರ್ ಸೇರಿ ಮತ್ತಿತರೆ ದೇಶಗಳಲ್ಲಿರುವ ಹಿಂದೂಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತೇವೆ ಎಂದು ಹೇಳುವ ಈ ಕಾಯ್ದೆಯು, ಪರೋಕ್ಷವಾಗಿ ಮತ್ತೊಂದು ಅಲ್ಪಸಂಖ್ಯಾತ ಸಮುದಾಯವನ್ನು ಶಿಕ್ಷಿಸಲು ಹೊರಟಿದೆ. ಆಯ್ಕೆಯಾದಾರದಲ್ಲಿ ಮೂರು ದೇಶಗಳಿಂದ ಬರುವವರಿಗೆ ಪೌರತ್ವ ನೀಡುವ ಈ ಕಾಯ್ದೆ, ಉಳಿದ ದೇಶಗಳ ಕುರಿತು ಗಮನ ನೀಡುತ್ತಿಲ್ಲ ಯಾಕೆ. ಇದು ಮುಸ್ಲಿಮ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮಾಡಿದ ಪಿತೂರಿಯಾಗಿದ್ದು, ನೆರೆ ರಾಷ್ಟ್ರಗಳೊಂದಿಗೆ ಸಂಬಂಧ ಹಾಳು ಮಾಡುತ್ತದೆ ಎಂದು ತಿಳಿಸಿದರು.

ಮುಸ್ಲಿಮ್ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುತ್ತೇವೆ ಎನ್ನುತ್ತಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ ಎಂದೂ ಹೇಳುತ್ತಾರೆ. ಆದರೆ, ಇದುವರೆಗೂ ಯಾವುದೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ ಎಂಬುದು ವರದಿಯಾಗಿಲ್ಲ ಎಂದು ಹನುಮಂತಯ್ಯ ಹೇಳಿದರು.

ಶ್ರೀಲಂಕಾದ ತಮಿಳರು ನಿರಾಶ್ರಿತರ ಶಿಬಿರಗಳಲ್ಲಿ ಇದಾರೆ. ಅವರನ್ನು ರಕ್ಷಿಸಬೇಕಾದ ಕರ್ತವ್ಯ ನಮ್ಮದು ಅಲ್ಲವೇ. ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದ ಅವರು, ಪಾಕಿಸ್ತಾನದಲ್ಲಿರುವ ದಲಿತರ ಬಗ್ಗೆ ಮಾತನಾಡುವ ಪ್ರಧಾನಿ, ಅವರದೇ ರಾಜ್ಯ ಗುಜರಾತ್‌ನಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ದಲಿತರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಎಲ್ಲಿಯೂ ಮಾತನಾಡಲ್ಲ. ಬದಲಿಗೆ, ಪಾಕಿಸ್ತಾನದ ದಲಿತರಿಗೆ ಪೌರತ್ವ ನೀಡುವುದಾದರೆ, ಭಾರತದ ದಲಿತರು ಯಾಕೆ ವಿರೋಧಿಸುತ್ತಿದ್ದಾರೆ ಎನ್ನುವ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ನಾಗಪುರದಲ್ಲಿ ಸಿಎಎ ಕಾಯ್ದೆ ತಯಾರಾಗಿದೆ: ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು, ಸಂವಿಧಾನ ತಜ್ಞರು, ಲೇಖಕರು, ಚಿಂತಕರು ಸೇರಿದಂತೆ ಇಡೀ ದೇಶವೇ ಇಂದು ಸಿಎಎ ವಿರುದ್ಧ ಮಾತನಾಡುತ್ತಿದೆ. ಆದರೆ, ಸರಕಾರದ ಯಾರೊಬ್ಬರೂ ಇದರ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ. ಬಹುಶಃ ಇದು ನಾಗಪುರದ ಆರೆಸ್ಸೆಸ್ ಕಚೇರಿಯಲ್ಲಿ ಸಿಎಎ ಕಾಯ್ದೆ ರೂಪಗೊಂಡಿದ್ದು, ಅದರ ಬಗ್ಗೆ ಇವರಿಗೂ ಮಾಹಿತಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಚಿಂತಕ ಡಾ.ಸಿ.ಎಸ್.ದ್ವಾರಕನಾಥ್ ದೂರಿದರು.

1930 ರಲ್ಲಿ ಜರ್ಮನಿಯಲ್ಲಿ ಹಿಟ್ಲರ್ ಏನು ಮಾಡಿದ್ದರೋ, ಅದೇ ಮಾದರಿಯೂ ಈಗ ಬಿಜೆಪಿ ಹಾಗೂ ಆರೆಸ್ಸೆಸ್ ಮಾಡುತ್ತಿದೆ. ಆದರೆ, ಆರೆಸ್ಸೆಸ್‌ನ ಅಜೆಂಡಾವನ್ನು ನಾವು ಸರಿಯಾಗಿ ಅರ್ಥೈಸಿಕೊಳ್ಳಲಾಗಿಲ್ಲ. ಇಂದಿನ ಫ್ಯಾಸಿಸಂ ಅಧಿಕಾರ ಹಾಗೂ ವೈಯುಕ್ತಿಕ ವಿವರ ಪಡೆಯಲು ಮುಂದಾಗಿದೆ. ಇದರ ವಿರುದ್ಧ ನಾವು ಜಾಗೃತರಾಗಬೇಕಾಗಿದೆ. ಎನ್‌ಆರ್‌ಸಿಯಿಂದ ದೇಶದ ಶೇ.60 ರಷ್ಟು ಜನರು ದಾಖಲೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗುವುದಿಲ್ಲ. ಆರೆಸ್ಸೆಸ್‌ನ ಅಜೆಂಡಾವನ್ನು ಒಳಹೋಗಿ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರ್ತಿ ಡಾ.ಎಚ್.ಬಿ.ಜಯಲಕ್ಷ್ಮಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಮುದಾಯ ಅಧ್ಯಕ್ಷ ಡಾ.ಅಗ್ರಹಾರ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಬಹುಸಂಖ್ಯಾತರನ್ನು ತನ್ನ ಪರವಾಗಿ ಸದೃಡಗೊಳಿಸಿಕೊಳ್ಳುವ ಕೆಲಸ ಸಿಎಎ ಮೂಲಕ ಮಾಡುತ್ತಿದ್ದು, ಒಂದು ಸಮುದಾಯವನ್ನು ಈ ದೇಶದಲ್ಲಿ ಎರಡನೇ ದರ್ಜೆಯ ಜನರನ್ನಾಗಿಸುವ ಹುನ್ನಾರ ಅಡಗಿದೆ. ಎನ್‌ಡಿಎ ಸಹಭಾಗಿತ್ವದಲ್ಲಿರುವ ಅನೇಕ ರಾಜ್ಯಗಳು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧವಿದೆ. ದೇಶದ ಶೇ.88 ರಷ್ಟು ವಿಶ್ವವಿದ್ಯಾಲಯಗಳು, ಕೋಟ್ಯಾಂತರ ಜನರು ಇದರ ವಿರುದ್ಧ ಬೀದಿಗಿಳಿದಿದ್ದಾರೆ. ಆದರೂ, ಪಟ್ಟು ಬಿಡದ ಬಿಜೆಪಿ, ಮುಂದಿನ ಚುನಾವಣೆಯ ಅಜೆಂಡಾವನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿದೆ.

- ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News