ನಿಯಮ ಬಾಹಿರ ರಿಯಾಯಿತಿ ಘೋಷಣೆ ಆರೋಪ: ಅಮೆಝಾನ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

Update: 2020-02-16 16:51 GMT

ಬೆಂಗಳೂರು, ಫೆ.16: ನಿಯಮ ಬಾಹಿರ ರಿಯಾಯಿತಿ ಘೋಷಣೆ ಮಾಡಿರುವ ಆರೋಪದಡಿ ಆನ್‌ಲೈನ್ ಮಾರಾಟ ಸಂಸ್ಥೆ ಅಮೆಝಾನ್ ವಿರುದ್ಧ ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಹೊರಡಿಸಿದ್ದ ತನಿಖಾ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಸ್ಪರ್ಧಾತ್ಮಕ ನಿಯಮಗಳಿಗೆ ವಿರುದ್ಧವಾಗಿ ವ್ಯಾಪಾರ ನಡೆಸುತ್ತಿರುವ ಆರೋಪದಡಿ ತನಿಖೆಗೆ ಆದೇಶಿಸಿದ್ದ ಸಿಸಿಐ ಕ್ರಮ ಪ್ರಶ್ನಿಸಿ, ಅಮೆಝಾನ್ ಆಡಳಿತ ಮಂಡಳಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾ. ದಿನೇಶ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಸುಧೀರ್ಘವಾದ ಪ್ರತಿವಾದ ಆಲಿಸಿದ ಪೀಠ, ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ ತನಿಖೆಗೆ ನೀಡಿದ್ದ ಆದೇಶಕ್ಕೆ ತಡೆ ನೀಡಿ ಆದೇಶಿಸಿತು.

ಅಮೆಝಾನ್, ಫ್ಲಿಪ್ ಕಾರ್ಟ್ ಆನ್‌ಲೈನ್ ಮಾರಾಟ ಸಂಸ್ಥೆಗಳು ಸ್ಪರ್ಧಾತ್ಮಕ ನಿಯಮಗಳಿಗೆ ವಿರುದ್ಧವಾಗಿ ನಿಯಮ ಬಾಹಿರ ರಿಯಾಯಿತಿ ಘೋಷಣೆ ಮಾಡುತ್ತಿರುವ ಆರೋಪ ಮಾಡಿದ್ದ ಹೊಸದಿಲ್ಲಿ ವ್ಯಾಪಾರ ಮಹಾಸಂಘ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಐಐಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಸಿಐ ಕಳೆದ ಜ.14 ರಂದು ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅಮೆಜಾನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News