ಭ್ರಷ್ಟರ ವಿರುದ್ಧ ಧ್ವನಿ ಎತ್ತದಿದ್ದರೆ ದೇಶಕ್ಕೆ ಅಪಾಯ: ರವಿಕೃಷ್ಣಾರೆಡ್ಡಿ

Update: 2020-02-16 16:57 GMT

ಬೆಂಗಳೂರು, ಫೆ.16: ಭ್ರಷ್ಟಚಾರದಲ್ಲಿ ಮುಳುಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಧ್ವನಿ ಎತ್ತದಿದ್ದರೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಕಿಡಿಕಾರಿದ್ದಾರೆ. 

ರವಿವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಯೋಜಿಸಿದ್ದ ‘ಗೂಂಡಾಗಳೇ ಪೊಲೀಸ್ ಇಲಾಖೆ ಬಿಟ್ಟು ತೊಲಗಿ’ ಎಂಬ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಐಪಿಎಸ್ ಅಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮೇಲೆ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಬೇರೆ ಕಡೆಗೆ ವರ್ಗಾಯಿಸಿ ಎಂದು ಆಗ್ರಹಿಸಲಾಗಿತ್ತು. ಆದರೆ, ಪೊಲೀಸರು ಯಾವುದೇ ಮಾಹಿತಿಯನ್ನು ನೀಡದೇ ನನ್ನ ಮತ್ತು ಜಂಟಿ ಕಾರ್ಯದರ್ಶಿ ರಘು ಜಾಣಗೆರೆಯನ್ನು ಏಕಾಏಕಿ ವಶಕ್ಕೆ ಪಡೆದಿರುವುದು ಖಂಡನೀಯ. ಅಲ್ಲದೆ, ಭ್ರಷ್ಟರ ವಿರುದ್ಧ ಧ್ವನಿ ಎತ್ತುವುದು ಅವಶ್ಯಕತೆ ಇದೆ ಎಂದು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ, ಭಗತ್‌ಸಿಂಗ್ ಅಂಥವರ ಆದರ್ಶಗಳ ಮೇಲೆ ನಾನು ನಂಬಿಕೆ ಇಟ್ಟವನು. ಅವರಿಗೂ ಈ ಸಮಾಜ ಅಪಮಾನವನ್ನು ಮಾಡಿದೆ. ನನಗೂ ಅಪಮಾನ ಮಾಡಿದೆ. ಆದರೆ, ಸತ್ಯ, ನ್ಯಾಯ, ಶಾಂತಿಗಾಗಿ ನಿರಂತರ ಹೋರಾಟ ನಡೆಸುತ್ತೇವೆ. ಐಪಿಎಸ್ ಅಧಿಕಾರಿ ಡಾ.ಭೀಮಾಶಂಕರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭ್ರಷ್ಟಾಚಾರಿಗಳಾಗಿದ್ದು, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಐಎಂಎ ಹಗರಣದಲ್ಲಿ ಲಂಚ ಪಡೆದ ಅಧಿಕಾರಿ ಅಜಯ್ ಹಿಲೋರಿ, ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದು, ಅವರನ್ನು ತನಿಖೆ ಮುಗಿಯುವವರೆಗೆ ಅಮಾನತ್ತಿನಲ್ಲಿ ಇರಿಸಬೇಕು. ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಮೂಲಕ ಈ ಸಮಾಜವನ್ನು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡಬೇಕೆಂದು ತಿಳಿಸಿದರು. ಕಾನೂನು ತಿಳಿಯದ ಪೊಲೀಸರು ನಮ್ಮನ್ನು ಬಂಧಿಸಿ ಕರೆದೊಯ್ಯುದಿದ್ದಕ್ಕೆ ನಮಗೆ ಯಾವುದೆ ಅಪಮಾನ ಎಂದುಕೊಂಡಿಲ್ಲ. ಆದರೆ, ಒಂದು ಬಾರಿ ನನ್ನನ್ನು ಬಂಧಿಸಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಾಲಪ್ಪ, ಸಂಪಂಗಿ ಅವರು ಇದ್ದ ಜೈಲಿನಲ್ಲಿ ಇರಿಸಿದ್ದರು. ಆದರೆ, ನ್ಯಾಯಕ್ಕಾಗಿ ಹೋರಾಡಿದ ನಮಗೆ ಯಾವುದೆ ಮುಜಗರ ಎನಿಸದೆ ಮತ್ತೆ ಬೀದಿಗಿಳಿದು ಹೋರಾಟವನ್ನು ಪ್ರಾರಂಭಿಸಿದೆವು ಎಂದು ಹೇಳಿದರು. 

‘ನಗರದಲ್ಲಿ ಸಿಎಎ ವಿರುದ್ಧ ಹೋರಾಟ ನಡೆಸುತ್ತಿದ್ದಾಗ ನಗರದಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು. ಆದರೆ, ಕರ್ನಾಟಕ ಹೈಕೋರ್ಟ್ ನಗರ ಪೊಲೀಸ್ ಆಯುಕ್ತರ ಆದೇಶ ಕಾನೂನು ಬಾಹಿರ ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿತ್ತು. ದೇಶ ವಿರೋಧಿ ಕಾನೂನುಗಳು ಬಂಧಾಗ ಪ್ರತಿಭಟನೆ ಮಾಡಬಹುದೆಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಆದೇಶಿದೆ. ಅಲ್ಲದೆ, ಸಿಎಎ ವಿರೋಧಿ ಪ್ರತಿಭಟನಾಕಾರರು ದೇಶದ್ರೋಹಿಗಳಲ್ಲ ಎಂದು ಹೇಳಿದೆ.’

-ರವಿ ಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News