×
Ad

‘ವಾಹನದ ವಿವರಗಳ ಮಾರ್ಪಾಡು’ ಕೋರಿಕೆ ಸಲ್ಲಿಸಲು ಸೂಚನೆ

Update: 2020-02-16 23:24 IST

ಬೆಂಗಳೂರು, ಫೆ.16: ರಾಜ್ಯಾದ್ಯಂತ ನೊಂದಣಿ ಸಮಯದಲ್ಲಿ ವಿವಿಧ ವೀಲ್ಬೇಸ್ ಹೊಂದಿರುವ ವಿವಿಧ ವಾಹನಗಳಿಗೆ ಕರ್ನಾಟಕ ಮೋಟಾರು ವಾಹನ ನಿಯಮಾವಳಿ ಯಿಂದ ವಿನಾಯತಿ ನೀಡಿ 12+1 ಆಸನ ಸಾಮರ್ಥ್ಯವುಳ್ಳ ಮ್ಯಾಕ್ಸಿ ಕ್ಯಾಬ್ ಎಂದು ನೋಂದಾಯಿಸಿಕೊಂಡು ಅಂತಹ ವಾಹನಗಳಿಗೆ ಪರವಾನಗಿ ಪಡೆದು ಕಾರ್ಯಾಚರಿಸಲು ಅನುಮತಿ ನೀಡಲಾಗಿರುತ್ತದೆ.

ವಾಹನಗಳ ಮಾಲಕರು ತಮ್ಮ ವಾಹನಗಳಲ್ಲಿ ಹೆಚ್ಚುವರಿಯಾಗಿ ಆಸನಗಳನ್ನು ಅಳವಡಿಸಿಕೊಂಡು ನಿಯಮ ಬಾಹಿರವಾಗಿ ನಡೆಸುತ್ತಿರುವುದನ್ನು ಗಮನಿಸಿ ಕಳೆದ ಎರಡು ದಿನಗಳಿಂದ ಇಂತಹ ವಾಹನಗಳ ಮೇಲೆ ವಿಶೇಷ ಕಾರ್ಯಾಚರಣೆಯ ಮೂಲಕ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದರಿಂದ ಭಾದಿತರಾದ ಮಾಲಕರು ಹೆಚ್ಚುವರಿಯಾಗಿ ಅಳವಡಿಸಿಕೊಂಡಿರುವ ಆಸನಗಳ ಬಗ್ಗೆ ನೋಂದಣಿ ಪುಸ್ತಕದಲ್ಲಿ ನಮೂದಿಸಿ ಸೂಕ್ತ ರಹದಾರಿಯನ್ನು ನೀಡಿ ತಮ್ಮ ವಾಹನಗಳನ್ನು ನಿಯಮ ಬದ್ಧವಾಗಿ ಕಾರ್ಯಾಚರಿಸಲು ಅನುವು ಮಾಡಿಕೊಡಬೇಕೆಂದು ವಿನಂತಿಸಿದ್ದಾರೆ.

ಇಂತಹ ವಾಹನಗಳ ಮಾಲಕರ ವಿನಂತಿಯನ್ನು ಪರಿಗಣಿಸಿ ಹೆಚ್ಚುವರಿ ಆಸನಗಳ ನೋಂದಣಿಯ ಬಗ್ಗೆ ಸಂಬಂದಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕೋರಿಕೆಯನ್ನು ಸಲ್ಲಿಸಿದ್ದಲ್ಲಿ ಅಂತಹ ವಾಹನಗಳ ನೋಂದಣಿ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡುವಂತೆ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಆದುದರಿಂದ ಹೆಚ್ಚುವರಿ ಆಸನಗಳನ್ನು ಅಳವಡಿಸಿಕೊಂಡಿರುವ ವಾಹನಗಳ ಮಾಲಕರು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ವಾಹನ ವಿವರಗಳನ್ನು ಮಾರ್ಪಾಡು ಮಾಡುವಂತೆ ಕೂಡಲೇ ಕೋರಿಕೆ ಸಲ್ಲಿಸುವಂತೆ ಹಾಗೂ ಸೂಕ್ತ ರಹದಾರಿಯನ್ನು ರಾಜ್ಯ ಸಾರಿಗೆ ಪ್ರಾಧಿಕಾರದಿಂದ ಪಡೆದು ಅನ್ವಯಿಸುವ ತೆರಿಗೆಯನ್ನು ಪಾವತಿಸಿ ವಾಹನಗಳನ್ನು ಕಾರ್ಯಾಚರಿಸುವಂತೆ ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News