ಜಾನಪದ ಕಲೆಗಳ ಪುನರುಜ್ಜೀವನಕ್ಕೆ ಬದ್ಧ: ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ

Update: 2020-02-16 18:10 GMT

ಬೆಂಗಳೂರು, ಫೆ.16: ರಾಜ್ಯದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳ ಪುನರುಜ್ಜೀವನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಕನ್ನಡ ಮತ್ತಿ ಸಂಸ್ಕೃತಿ ಇಲಾಖೆ ಸಚಿವ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ರವಿವಾರ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜಾನಪದ ಲೋಕ ಬೆಳ್ಳಿಹಬ್ಬ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದ ಪೀಳಿಗೆಗೆ ಗ್ರಾಮೀಣ ಸಂಸ್ಕೃತಿಯನ್ನು ಒಂದೇ ಸೂರಿನಡಿ ಪರಿಚಯಿಸಲು ಜಾನಪದ ಲೋಕದಂತಹ ಕೇಂದ್ರದ ಅಗತ್ಯವಿತ್ತು. ಅದನ್ನು ನಾಗೇಗೌಡರು ಆ ಕಾಲದಲ್ಲಿಯೇ ಅರಿತುಕೊಂಡು ಹದಿನೈದು ಎಕರೆ ಜಾಗದಲ್ಲಿ ನಾಡಿನ ಜಾನಪದ ಲೋಕವನ್ನೆ ಕಟ್ಟಿ ನಿಲ್ಲಿಸಿದ್ದಾರೆ. ಅವರ ಆಶಯಕ್ಕೆ ಧಕ್ಕೆ ಬಾರದಂತೆ ಈ ಜಾನಪದ ಕೇಂದ್ರವನ್ನು ಮುನ್ನೆಡೆಸುತ್ತಿರುವುದು ಅಭಿನಂದನೀಯ ಎಂದರು.

ಕಸಾಪ ಮಾದರಿಯಲ್ಲೆ ಜಾನಪದ ಪರಿಷತ್ತಿನಲ್ಲಿಯೂ ರಾಜ್ಯ ಮಟ್ಟದ ಜಾನಪದ ಸಮ್ಮೇಳನ ಮತ್ತು ಜಿಲ್ಲಾ ಜಾನಪದ ಸಮ್ಮೇಳನ, ಕಾರ್ಯಾಗಾರ, ಕಮ್ಮಟ ಮತ್ತು ಜಾನಪದ ಸಂಗ್ರಹ ಮತ್ತು ಪ್ರಸರಣ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲು ಹಾಗೂ ರಾಷ್ಟ್ರ ಮಟ್ಟದಲ್ಲಿ ಜಾನಪದ ಲೋಕವನ್ನು ಅಭಿವೃದ್ಧಿ ಪಡಿಸಲು 10.33 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ನಿಗದಿಪಡಿಸಬೇಕು ಎಂದು ಸಿಎಂಗೆ ಕೋರಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಜಾನಪದ ಕಲೆಗಳು, ಹಾಡುಗಳು ಸಾಹಿತ್ಯ, ಜಾನಪದ ಸಾಹಿತ್ಯ ಇತ್ಯಾದಿಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಈ ಎಲ್ಲ ಚಟುವಟಿಕೆಗಳಿಗೆ ಜಾನಪದ ಮೂಲ ಕಲಾವಿದರನ್ನೆ ಬಳಸಿಕೊಂಡು ಬರಲಾಗುತ್ತಿದೆ.

ಈ ನಿಟ್ಟಿನಲ್ಲಿ ಸರಕಾರದಿಂದ ಇನ್ನೊಷ್ಟು ಸಂಪನ್ಮೂಲಗಳ ಅಗತ್ಯವಿದೆ. ಆದ್ದರಿಂದ ತಾಲೂಕು, ಜಿಲ್ಲಾ ಪಂಚಾಯಿತಿ ವಾರ್ಷಿಕ ಯೋಜನೆಗಳಲ್ಲಿ ಜಾನಪದ ಪರಿಷತ್ತಿನ ಈ ಕಾರ್ಯ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಈ ಎಲ್ಲ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಸಲು ಸಹಕರಿಸಬೇಕು ಎಂದರು.

ವಿದ್ವಾಂಸರಾದ ಡಾ. ಅಂಬಳಿಕೆ ಹಿರಿಯಣ್ಣ, ಡಾ.ಹ.ಕಾ.ರಾಜೇಗೌಡ, ಡಾ.ಎಂ. ಎನ್. ವಾಲಿ, ಪ್ರೊ.ಎಂ.ಎ.ಹೆಗಡೆ, ಡಿ.ಕೆ.ರಾಜೇಂದ್ರ, ಶ್ರೀನಿವಾಸ ಕಪ್ಪಣ್ಣ, ಡಾ. ಸಿ.ಕೆ.ನಾವಲಗಿ, ಡಾ. ಚಕ್ಕೆರೆ ಶಿವಶಂಕರ್, ಡಾ.ಜಗನ್ನಾಥ ಹೆಬ್ಬಾಳೆ, ಡಾ. ಶ್ರೀರಾಮ ಇಟ್ಟಣ್ಣನವರ್, ಹಂಸಲೇಖ, ಡಾ.ಬಾನಂದೂರು ಕೆಂಪಯ್ಯ, ಡಾ.ಅಪ್ಪಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ್, ರಾಣಿ ಮಾಚಯ್ಯ, ಮಾತಾ ಮಂಜಮ್ಮ ಜೋಗತಿ, ಜೋಗಿಲ ಸಿದ್ದರಾಜು, ಕಂಸಾಳೆ ಅಂಗಯ್ಯರನ್ನು ಸನ್ಮಾನಿಸಲಾಶಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News