ಕನ್ನಡದ ಬಗ್ಗೆ ಕೀಳರಿಮೆ ಬೇಡ: ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ

Update: 2020-02-16 18:16 GMT

ಕಲಬುರಗಿ, ಫೆ.16: ಭಾಷೆ ಕೇವಲ ಸಂವಹನವಲ್ಲದೆ ಮನುಷ್ಯನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಂಬಿಸುತ್ತದೆ. ಕನ್ನಡ ಭಾಷೆಯಲ್ಲಿ ಅಪಾರ ಸಂಸ್ಕೃತಿ ತುಂಬಿಕೊಂಡಿದ್ದು, ಯಾವುದೇ ಕಾರಣಕ್ಕೂ ಕನ್ನಡ ಓದುವ ಮಕ್ಕಳು ಮನಸಿನಲ್ಲಿ ಭಾಷೆ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು ಎಂದು ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಹೇಳಿದರು.   

ರವಿವಾರ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಲಾದ ಕಲಬುರಗಿ ವಿಭಾಗ ಮಟ್ಟದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಡೆ, ನುಡಿ ಬಿಟ್ಟು ಬೇರೆಯವರ ಸಂಸ್ಕೃತಿ ಅನುಕರಣೆ ಮಾಡಿದಲ್ಲಿ ನಮ್ಮ ಸ್ವಂತಿಕೆಯನ್ನು ನಾವೇ ಬಿಟ್ಟುಕೊಂಡಂತಾಗುತ್ತದೆ. ಮಾತೃಭಾಷೆಯಲ್ಲಿ ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆದು ಪಾಲಕರಿಗೆ ಹೆಮ್ಮೆಯ ಮಕ್ಕಳಾದ ನೀವು ಯಾವುದೇ ಕಾರಣಕ್ಕೂ ಇನ್ನೊಬ್ಬರ ಮುಂದೆ ತಲೆ ತಗ್ಗಿಸದಿರಿ ಎಂದು ಅವರು ಹೇಳಿದರು.

ಕನ್ನಡ ಕಲಿತವರು ತಲೆ ಎತ್ತಿ ಬದುಕಬೇಕು. ನಮ್ಮ ಮಕ್ಕಳು ಕೊಡುವ ಕೈಗಳಾಗಬೇಕೆ ಹೊರತು ಬೇಡುವ ಕೈಗಳಾಗಬಾರದು. ನೀರಿನ ಆಳಕ್ಕೆ ಇಳಿದಾಗಲೇ ಮುತ್ತು-ರತ್ನಗಳು ಸಿಗುವುದು. ಹಾಗೆಯೇ ಬದುಕಿನಲ್ಲಿ ಏನಾದರು ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಅಗತ್ಯ ಎಂದು ಬಸವರಾಜ ಪಾಟೀಲ ಸೇಡಂ ಪ್ರತಿಪಾದಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಭರಣ ಮಾತನಾಡಿ, ಇತ್ತೀಚೆಗೆ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿರುವುದರಿಂದ ತಂತ್ರಜ್ಞಾನವನ್ನೂ ಭಾಷೆಯ ಜ್ಞಾನವನ್ನಾಗಿ ಪರಿಗಣಿಸಿದ್ದಲ್ಲಿ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ. ನಾಳಿನ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಕನಸು ಕಂಡು ಅದರಂತೆ ಪರಿಶ್ರಮ ಪಟ್ಟಲ್ಲಿ ಯಶಸ್ಸು ಸಾಧ್ಯ ಎಂದರು.

ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಷಿ, ಗುಲಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್.ಟಿ.ಪೋತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಮಾತನಾಡಿದರು.

ಪ್ರಶಸ್ತಿ ಪ್ರದಾನ: 2018-19ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಒಟ್ಟು 230 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಾಲೂಕು ಮಟ್ಟದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 10 ಸಾವಿರ ರೂ, ದ್ವಿತೀಯ ಸ್ಥಾನ ಪಡೆದವರಿಗೆ 9 ಸಾವಿರ ರೂ. ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ 8 ಸಾವಿರ ರೂ.ಗಳಂತೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಡಿ.ಬಡಿಗೇರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News