ಪ್ರಜಾಪ್ರಭುತ್ವದ ನಾಶ ಪ್ರಜೆಗಳ ಸರ್ವನಾಶ

Update: 2020-02-16 18:36 GMT

ಇಂದು ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವ ಬರುವ ಮೊದಲು ಬುದ್ಧನ ಉಪದೇಶಗಳು, ಬಸವಣ್ಣನ ಅನುಭವ ಮಂಟಪ, ಕಾರ್ಲ್‌ಮಾರ್ಕ್ಸ್‌ನ ತುಳಿತಕ್ಕೊಳಕಾದ ಕಾರ್ಮಿಕರ ಪರದನಿ, ಸೂಫಿ ಸಂತರ ನುಡಿಗಟ್ಟುಗಳು, ನಾಲ್ವಡಿಯವರ ಜನಪರ ಕಾರ್ಯ ಹೀಗೆ ಮುಂದುವರಿದು ಡಾ. ಬಿ.ಆರ್. ಅಂಬೇಡ್ಕರ್ ಬರೆದುಕೊಟ್ಟಿರುವ ಸಂವಿಧಾನದ ತಳಹದಿಯಲ್ಲಿ ಪ್ರಜಾಪ್ರಭುತ್ವ ನಿಂತಿದೆ.

ಇಂದು ನಾವು ವಿಷಮ ಪರಿಸ್ಥಿತಿಯಲ್ಲಿ ವಿಹರಿಸುತ್ತಿದ್ದೇವೆ. ನಮ್ಮನ್ನಾಳುವ ಸರಕಾರಗಳು ಒಂದು ಏಕಪಕ್ಷೀಯ ವಿತಂಡವಾದದ ಆಡಳಿತಾಂಕುರದ ನಡೆಯಿಂದ ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಾವು ಎಂಬ ಭಾವನೆಯನ್ನು ಹೊರದಬ್ಬಿ ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಬೆಂಕಿಯ ಉಂಡೆಗಳನ್ನು ಎಸೆದು ಜನರಿಗೆ ಮಾತ್ರವಲ್ಲದೇ ಪ್ರಜಾಪ್ರಭುತ್ವಕ್ಕೂ ಬೆಂಕಿಯನ್ನಿಡುವ ಕಾಲಘಟ್ಟವನ್ನು ನಮ್ಮನ್ನಾಳುವ ಸರಕಾರದಿಂದ ಸಾಕ್ಷಿನೋಟವನ್ನು ಕಾಣುತ್ತಿದ್ದೇವೆ. ಅಬ್ರಹಾಂ ಲಿಂಕನ್‌ರವರು ಗೆಟಿಸ್ಟರ್ಗ್ ಭಾಷಣದಲ್ಲಿ ಪ್ರಜಾಪ್ರಭುತ್ವವನ್ನು ‘‘ಜನರ ಸರಕಾರ, ಜನರಿಂದ ಸರಕಾರ ಮತ್ತು ಜನರಿಗಾಗಿ ಸರಕಾರ’’ ಎಂದು ಹೇಳಿದ್ದಾರೆ, ಆದರೆ ಜನರಿಗೆ ಪೂರಕವಾಗಿರಬೇಕಾದ ಸರಕಾರವು ಇಂದು ಜನವಿರೋಧಿ ಧೋರಣೆ ಮತ್ತು ಜನತಂತ್ರವನ್ನು ಬುಡಮೇಲು ಮಾಡುವಂತಹ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ, ತಾವು ನಡೆಸುವ ಆಡಳಿತದಿಂದ ಬಹುದೊಡ್ಡ ಪ್ರಜಾಪ್ರಭುತ್ವ ದೇಶವನ್ನು ಅಲುಗಾಡಿಸುವ ಜೊತೆಗೆ ಪ್ರಜಾಪ್ರಭುತ್ವದ ತಳಹದಿಯನ್ನು ಸಹ ಧ್ವಂಸಗೊಳಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ ‘ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್’ ಎಂಬ ಸಂಸ್ಥೆ ನೀಡುವ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ ಭಾರತವು 41ನೇ ರ್ಯಾಂಕ್‌ನಿಂದ 51ನೇ ರ್ಯಾಂಕ್‌ಗೆ ಕುಸಿದಿರುವುದು.

ಇದಕ್ಕೆ ನೇರ ಕಾರಣ ಚುನಾವಣೆ ಪ್ರಕ್ರಿಯೆ ಮತ್ತು ಬಹುತ್ವದ ಬಗ್ಗೆ ಆತಂಕ, ರಾಜಕೀಯ ಸಂಸ್ಕೃತಿಯ ಪ್ರಜ್ಞಾಹೀತನೆ, ನಾಗರಿಕ ಹಕ್ಕುಗಳ ವಿನಾಶದಂತಹ ಪ್ರಜಾಪ್ರಭುತ್ವ ವೌಲ್ಯ ಕುಸಿಯುತ್ತಿರುವುದು ಎಂದು ವರದಿ ನೀಡಿದೆ. ಪ್ರಪಂಚದಲ್ಲಿ ಎಷ್ಟೋ ದೇಶಗಳು ಪ್ರಜಾಪ್ರಭುತ್ವ ದೇಶ. ಆದರೆ ನಮ್ಮದು ನಮ್ಮ ಸಂವಿಧಾನದ ಅಡಿಯಲ್ಲಿ ನಿರ್ಮಾಣವಾದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ತಮ್ಮದೇ ಆದ ರೀತಿಯಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವ ಜಯಪ್ರದವಾಗಿ ಕಾರ್ಯನಿರ್ವಹಿಸಲು ಐದು ನಿಯಮಗಳಲ್ಲಿ ವಿವರಿಸಿದ್ದಾರೆ. ಒಂದನೇ ನಿಯಮ ‘‘ಸಮಾಜದಲ್ಲಿ ಕಣ್ಣಿಗೆ ರಾಚುವ ಅಸಮಾನತೆ ಇರಬಾರದು. ಅಲ್ಲಿ ಒಂದು ತುಳಿಯಲ್ಪಟ್ಟ ವರ್ಗವಿರಬಾರದು. ಎಲ್ಲಾ ಸವಲತ್ತುಗಳೂ ಇರುವ ಒಂದು ವರ್ಗವಾಗಲಿ ಮತ್ತು ಎಲ್ಲಾ ಹೊರೆಗಳನ್ನು ಹೊರಬೇಕಾಗಿರುವ ಒಂದು ವರ್ಗವಾಗಲಿ ಇರಬಾರದು’’ ಎಂದು ಹೇಳಿದ್ದಾರೆ. ಆದರೆ, ಇಂದು ಶೇ.73 ರಷ್ಟು ಜನರ ಆದಾಯವು ಕೇವಲ 1 ಶೇ. ಜನರಲ್ಲಿ ಶೇಖರಣಗೊಂಡು, ಉದ್ಯೋಗವು ನಿರುದ್ಯೋಗಿಗಳಿಗೆ ಕೈಗೆಟುಕದಂತೆ ಸಾಗಿದೆ. ಬಕಾಸುರ ಬಂಡವಾಳಶಾಹಿಗಳು ಇಂದು ಎಗ್ಗಿಲ್ಲದಂತೆ ಸರಕಾರವನ್ನು ತಮ್ಮ ಕಪಿಮುಷ್ಟಿಯೊಳಗೆ ನಡೆಸುತ್ತಾ, ಅದರ ಲಾಭಾಂಶಗಳನ್ನು ಹಿಗ್ಗಿಸುವ ನಿಟ್ಟಿನಲ್ಲಿ ಸರಕಾರದ ಸಂಸ್ಥೆಗಳನ್ನು ಸರಕಾರದಿಂದಲೇ ಅಧಿಕೃತವಾಗಿ ಮುಚ್ಚಿಸುತ್ತಾ, ಆ ಸಂಸ್ಥೆಯ ಜಾಗದಲ್ಲಿ ತನ್ನ ವಿಸ್ತೀರ್ಣವನ್ನು ವಿಸ್ತರಿಸಲು ಎಗ್ಗಿಲ್ಲದೆ ತುದಿಗಾಲಲ್ಲಿ ನಿಂತಿದೆ. ಈ ಬಕಾಸುರ ಬಂಡವಾಳಶಾಹಿಗಳು ನಾಗರಿಕರಿಗೆ ದೊರಕಬೇಕಾದ ಸವಲತ್ತುಗಳನ್ನು ಸರಕಾರದ ಕೈಗಳಿಂದ ನಿಯಂತ್ರಿಸುತ್ತಾ ಅವುಗಳನ್ನು ಸಾಮಾನ್ಯರಿಗೆ ಮರೀಚಿಕೆಗೊಳಿಸಿದ್ದಾರೆ ಹಾಗೂ ಸರಕಾರದ ಬೆಳವಣಿಗೆ ಕಾಣದ ಆರ್ಥಿಕ ನೀತಿಯಿಂದಾಗಿ ಇಂದು ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ, ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಸರಕಾರಗಳು ಬಡತನ ನಿರ್ಮೂಲನೆ ಮಾಡಬೇಕಾದ ಕಾರ್ಯದಲ್ಲಿ ತೊಡಗದೇ ಬಡವರ ಆಕ್ರಂದವನ್ನು ಭಾರತಕ್ಕೆ ಬರುವ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರಿಗೆ ಕಾಣದಂತೆ ದೊಡ್ಡ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಎರಡನೇ ನಿಯಮದಲ್ಲಿ ಅವರು ‘‘ವಿರೋಧ ಪಕ್ಷದ ಅಸ್ತಿತ್ವ ಅವಶ್ಯಕವಾಗಿ ಬೇಕಾಗುತ್ತದೆ’’ ಎಂದು ಹೇಳಿದ್ದಾರೆ. ಆದರೆ, ಇಂದು ವಿರೋಧ ಪಕ್ಷವು ತನ್ನ ಧ್ವನಿಯನ್ನು ಕಳೆದುಕೊಂಡಿದ್ದು, ಬಹುಸಂಖ್ಯಾತ ಜನರೇ ವಿರೋಧಪಕ್ಷದ ಸ್ಥಾನದಲ್ಲಿ ಬೀದಿಯಲ್ಲಿ ನಿಂತು ಸರಕಾರ ಮತ್ತು ಸರಕಾರದ ನೀತಿ, ನಿಯಮಗಳ ವಿರುದ್ಧ ತಮ್ಮ ಧ್ವನಿ ಮತ್ತು ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಧ್ವನಿಯನ್ನು ಸಹಿಸದ ಕೇಂದ್ರ ಸರಕಾರ ತನ್ನ ಶಕ್ತಿಯನ್ನು ಬಳಸಿ ಪೊಲೀಸರನ್ನು ಆಯುಧ ಮಾಡಿಕೊಂಡು ಸರಕಾರದ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಅನಧಿಕೃತವಾಗಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಅಮಾಯಕರನ್ನು ಜೈಲಿಗೆ ಅಟ್ಟುತ್ತಾ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ಆಯಾಮದಲ್ಲೂ ಧ್ವನಿಯನ್ನು ನಿಗ್ರಹಿಸುವಂತೆ ಮಾಡುತ್ತಿದ್ದಾರೆ. ಮೂರನೇ ನಿಯಮದಲ್ಲಿ ಅವರು ವಿವರಿಸುತ್ತಾ ‘‘ಕಾನೂನಿನಲ್ಲಿ ಮತ್ತು ಆಡಳಿತದಲ್ಲಿ ಸಮಾನತೆ ಇರಬೇಕು’’ ಎಂದು ಹೇಳಿದ್ದಾರೆ. ಆದರೆ, ಸರಕಾರವು ಕಾನೂನನ್ನೇ ದುರುಪಯೋಗಪಡಿಸಿಕೊಂಡು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾನೂನುಗಳನ್ನು ಜಾರಿಗೆ ತರುತ್ತಿದ್ದಾರೆ. ಇವರು ರೂಪಿಸಿರುವ ಕಾನೂನಿನ ವಿರುದ್ಧ ಸಾವಿರಾರು ಪ್ರತಿಭಟನೆಗಳು ನಡೆದಿವೆ. ಇತ್ತೀಚೆಗೆ ಧರ್ಮದ ಆಧಾರದಲ್ಲಿ ವಿದೇಶಿ ವಲಸಿಗರಿಗೆ ಪೌರತ್ವ ನೀಡುವ ಕಾಯ್ದೆಯ ವಿರುದ್ಧ ಧರಣಿಗಳನ್ನು ಕಾನೂನಿಗೆ ಆಡಳಿತಕ್ಕೂ ಸಮಾನತೆಯನ್ನು ಕಾಣದಂತೆ ಸರಕಾರವು ಪೊಲೀಸ್ ಬಲ ಪ್ರಯೋಗಿಸಿತು. ಇದರಿಂದ ನಾಗರಿಕ ಹಕ್ಕುಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಾನೂನು ಮತ್ತು ಆಡಳಿತವನ್ನು ಬುಡಮೇಲು ಮಾಡುವ ಸರ್ವಾಧಿಕಾರಿಯ ವರ್ತನೆಯಾಗಿದೆ. ನಾಲ್ಕನೇ ನಿಯಮ ಅತ್ಯಂತ ಮುಖ್ಯವಾದದ್ದು. ಅದು ‘‘ಸಾಂವಿಧಾನಿಕ ನೈತಿಕತೆಯನ್ನು ಆಚರಿಸುವುದೇ ಆಗಿದೆ’’ ಎಂದು ಹೇಳಿದ್ದಾರೆ. ಇಂದು ಅಂಬೇಡ್ಕರ್ ಅವರ ಪ್ರತಿಮೆಗಳ ಮೇಲೆ ಎಷ್ಟು ಬಾರಿ ಹಲ್ಲೆಯಾಗುತ್ತಿದೆಯೋ ಅಷ್ಟೇ ಬಾರಿ ಅವರು ಬರೆದಿರುವ ಸಂವಿಧಾನದ ಮೇಲೆ ಸರಕಾರ ಹಲ್ಲೆ ಮಾಡುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ಮೇಲೆ ಹಲ್ಲೆಗಳು ನಡೆಯುತ್ತಿವೆ. ಮೊತ್ತ ಮೊದಲ ಬಾರಿಗೆ ಸಂಸದ ಅನಂತಕುಮಾರ್ ಹೆಗಡೆ ‘‘ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡುವುದಕ್ಕೆ’’ ಎಂದು ಹೇಳಿ ಸಂವಿಧಾನದ ನಾಶಕ್ಕೆ ಅಡಿಗಲ್ಲು ನೆಟ್ಟರು. ನಂತರದಲ್ಲಿ ಇದಕ್ಕೆ ಪೂರಕವೆಂಬಂತೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನದ ಪ್ರತಿ ಸುಟ್ಟ ಪ್ರಕರಣವು ನಡೆದುಹೋಯಿತು. ಮುಂದುವರಿದು ಸರಕಾರದ ವಿರುದ್ಧ ದನಿ ಎತ್ತುವವರನ್ನು ಪಾಕಿಸ್ತಾನದವರು, ಹಿಂದೂ ವಿರೋಧಿಗಳು, ನಗರ ನಕ್ಸಲರು ಎಂದು ಅವರ ಅಭಿವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡುತ್ತಿದ್ದಾರೆ. ಇದಕ್ಕೆ ನಾವೂ ಯಾಕೆ ಕೈಜೋಡಿಸಬಾರದು ಎಂಬ ರೀತಿಯಲ್ಲಿ ಪೊಲೀಸ್ ಇಲಾಖೆಯೂ ಸಹಕರಿಸುತ್ತಿದೆ. ನಾಗರಿಕರಿಗೆ ಸರಕಾರದಿಂದಾಗುವ ತೊಂದರೆಯನ್ನು ಪ್ರತಿಭಟಿಸಲು ಮುಂದಾದರೆ ಕಲಂ. 144ನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಾಗೂ ಸರಕಾರದ ಧೋರಣೆಯನ್ನು ವಿರೋಧಿಸಿದರೆ ದೇಶದ್ರೋಹದ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಮನೋಇಚ್ಛೆ ಅಮಾಯಕರ ಮೇಲೆ ಹೇರುತ್ತಿದ್ದಾರೆ. ಐದನೆಯದಾಗಿ ಮತ್ತು ಕೊನೆಯದಾಗಿ ‘‘ಅಲ್ಪಸಂಖ್ಯಾತರ ಮೇಲೆ ಬಹು ಸಂಖ್ಯಾತರ ದಬ್ಬಾಳಿಕೆ ಇರಲೇಬಾರದು’’ ಎಂದು ಹೇಳಿದ್ದಾರೆ. ದೇಶದ ಹಲವೆಡೆ ಗೋಸಂರಕ್ಷಣೆ ಹೆಸರಿನಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರನ್ನು ಹೊಡೆದು ಕೊಲ್ಲಲಾಯಿತು. ಧರ್ಮದ ಆಧಾರದಲ್ಲಿ ಇಂದು ಪೌರತ್ವನ್ನು ನೀಡುವಂತಹ ಕಾನೂನು ಜಾರಿಗೆ ತರಲಾಗಿದೆ. ಇಂದು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾವನೆಯ ಭಾಷಣಗಳು ಎಗ್ಗಿಲ್ಲದಂತೆ ಹೊರಹೊಮ್ಮುತ್ತಲೇ ಇವೆ.

ಡಾ. ಅಂಬೇಡ್ಕರ್ ನೀಡಿರುವ ಪ್ರಜಾಪ್ರಭುತ್ವ ಇಂದು ನಶಿಸಿ ಹೋಗುತ್ತಿದೆಯೋ ಎಂದು ಗಾಬರಿಯ ಜೊತೆಗೆ ಆತಂಕವೂ ಎದುರಾಗಿದೆ. ಏಕೆಂದರೆ, ಆ ನಿಯಮಗಳನುಸಾರವಾಗಿ ನಮ್ಮ ಸರಕಾರಗಳು ನಡೆಯದೇ ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಮುಚ್ಚಿಟ್ಟ ಸತ್ಯವಾಗಿ ಉಳಿದಿಲ್ಲ. ಇಂದು ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವ ಬರುವ ಮೊದಲು ಬುದ್ಧನ ಉಪದೇಶಗಳು, ಬಸವಣ್ಣನ ಅನುಭವ ಮಂಟಪ, ಕಾರ್ಲ್‌ಮಾರ್ಕ್ಸ್‌ನ ತುಳಿತಕ್ಕೊಳಕಾದ ಕಾರ್ಮಿಕರ ಪರದನಿ, ಸೂಫಿ ಸಂತರ ನುಡಿಗಟ್ಟುಗಳು, ನಾಲ್ವಡಿಯವರ ಜನಪರ ಕಾರ್ಯ ಹೀಗೆ ಮುಂದುವರಿದು ಡಾ. ಬಿ.ಆರ್. ಅಂಬೇಡ್ಕರ್ ಬರೆದುಕೊಟ್ಟಿರುವ ಸಂವಿಧಾನದ ತಳಹದಿಯಲ್ಲಿ ಪ್ರಜಾಪ್ರಭುತ್ವ ನಿಂತಿದೆ. ಇದನ್ನು ಉಳಿಸುವ ಕಾರ್ಯ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಕೂಡ. ಡಾ. ಅಂಬೇಡ್ಕರ್ ಹೇಳಿದಂತೆ ಪ್ರಜಾಪ್ರಭುತ್ವವನ್ನು ಸರಕಾರಗಳು ‘‘ರಕ್ತಪಾತವಿಲ್ಲದೆ, ಪ್ರಜೆಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರಕಾರದ ಒಂದು ಸ್ವರೂಪ ಮತ್ತು ಒಂದು ವಿಧಾನ’’ದಲ್ಲಿ ಕೊಂಡೊಯ್ಯಬೇಕಾಗಿದೆ!

Writer - ಪುನೀತ್ ಎನ್. ಮೈಸೂರು

contributor

Editor - ಪುನೀತ್ ಎನ್. ಮೈಸೂರು

contributor

Similar News