ಸಾಮಾಜಿಕ ನ್ಯಾಯದಡಿಯಲ್ಲಿ ಮೀಸಲಾತಿ ಇತಿಹಾಸ ಮತ್ತು ವರ್ತಮಾನದ ತಲ್ಲಣಗಳು

Update: 2020-02-16 18:43 GMT

ಭಾರತ ಒಂದು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತ ದೇಶಕ್ಕೆ ಸ್ವಾತಂತ್ರ ಬಂದು 72 ವರ್ಷವಾಯಿತು. ಅನೇಕ ಪಂಚವಾರ್ಷಿಕ ಯೋಜನೆಗಳು ಮುಗಿದವು. ಪ್ರತಿವರ್ಷ ಬಜೆಟ್‌ಗಳು ಮಂಡನೆಯಾದವು. ಹೊರದೇಶಗಳಿಂದ ಲಕ್ಷಾಂತರ ಕೋಟಿ ರೂ. ಸಾಲ ತಂದು ಅನೇಕ ಯೋಜನೆಗಳು ಬಂದವು. ಎಲ್ಲಾ ಪಕ್ಷಗಳು ಪ್ರಣಾಳಿಕೆ ಹೊರಡಿಸಿದವು. ಅನೇಕರು ಪ್ರಧಾನ ಮಂತ್ರಿಗಳಾದರು, ಆದರೆ ಇಂದು ದೇಶದ ಸ್ಥಿತಿಗತಿ ಹೇಗಿದೆ ಎತ್ತ ಸಾಗುತ್ತಿದೆ ಎಂದು ನೋಡಿದರೆ ನಮ್ಮಗೆ ಭಯವಾಗುತ್ತದೆ. ಇಂದು ಭಾರತದಲ್ಲಿ ಅತಿ ಹೆಚ್ಚು-ಹೆಚ್ಚು ಚರ್ಚೆಗೊಳಪಡುತ್ತಿರುವ ವಿಷಯಗಳಲ್ಲಿ ಮೀಸಲಾತಿಯು ಒಂದು. ಈ ‘ಮೀಸಲಾತಿ’ ಕನಿಷ್ಠ 80-100 ವರ್ಷಗಳಿಂದಲೂ ಹೆಚ್ಚು ಚರ್ಚೆಗೊಳಗಾಗುತ್ತಿರುವ ವಿಷಯವಾಗಿದೆ.

ಪ್ರಾಚೀನ ಭಾರತದಲ್ಲಿ ಮೀಸಲಾತಿಯ ಇತಿಹಾಸ

ಮೀಸಲಾತಿ ಜಾರಿಗೆ ಬಂದಿದ್ದು 1950-ಜನವರಿ 26 ರಿಂದ ಅಲ್ಲ, ಅದು ಪ್ರಾಚೀನ ಭಾರತದಲ್ಲಿ ನಾವು ಕಾಣಬಹುದು. ಕ್ರಿ.ಪೂ. 185 ರಲ್ಲಿ ಅಂದು ವೌರ್ಯ ದೊರೆಯಾದ ಬೃಹದ್ರಥವೌರ್ಯನನ್ನು ಮೋಸದಿಂದ ಕೊಂದ ಸುಂಗ ಸಾಮ್ರಾಜ್ಯದ ದೊರೆ ಪುಷ್ಯಮಿತ್ರ ಸುಂಗನು ವೌರ್ಯ ಸಾಮ್ರಾಜ್ಯವನ್ನು ತನ್ನ ವಶಕ್ಕೆ ಅಥವಾ ಅಧೀನಕ್ಕೆ ತೆಗೆದುಕೊಂಡ ನಂತರ ತನ್ನ ಆಡಳಿತದ ಅನುಕೂಲಕ್ಕಾಗಿ ಸುಮತೀಭಾರ್ಗವನೆಂಬ ಬ್ರಾಹ್ಮಣನಿಂದ ಸಂವಿಧಾನವೊಂದನ್ನು ಬರೆಸಿದ. ಅದೇ ‘ಮನುಸ್ಮತಿ ಅಥವಾ ಮನು ಸಂವಿಧಾನವಾಗಿದೆ’. ಇದನ್ನು ಆಧರಿಸಿ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವಿಂಗಡಿಸಿ ಬ್ರಾಹ್ಮಣರಿಗೆ ಶಿಕ್ಷಣ, ಪೌರೋಹಿತ್ಯದ ಹಕ್ಕನ್ನು, ಕ್ಷತ್ರಿಯರಿಗೆ ಖಡ್ಗ ಹಿಡಿಯುವ, ಅಧಿಕಾರವೇರುವ ಹಕ್ಕನ್ನು ಹಾಗೂ ವೈಶ್ಯರಿಗೆ ವ್ಯಾಪಾರ, ಕೃಷಿ, ಸಂಪತ್ತುಗಳನ್ನು ಹೊಂದುವ ಹಕ್ಕನ್ನೂ ನೂರಕ್ಕೆ ನೂರು ಭಾಗ ಮೀಸಲಾಗಿರಿಸಿ, ಶೂದ್ರರಿಗೆ ಈ 3 ಜನರ ಸೇವೆ ಮಾಡುವ ಅಥವಾ ಕೆಲಸ ಮಾಡುವ ಮೀಸಲು ಮಾಡಲಾಯಿತು. ಇದನ್ನು ಕಾನೂನು ಮಾಡಿದ ಮೊದಲ ಗ್ರಂಥ ಮನುಸ್ಮತಿಯೇ ಆಗಿದೆ. ಇಲ್ಲಿನ ಮೂಲನಿವಾಸಿ ಶೂದ್ರರು, ಒಕ್ಕಲಿಗ, ಲಿಂಗಾಯತ, ಕುರುಬ, ಗಾಣಿಗ, ಕುಂಬಾರ, ಕ್ಷೌರಿಕ, ರೆಡ್ಡಿ, ಕಮ್ಮಾರ, ಗೌಡ, ಅಗಸ, ಮಡಿವಾಳ ಇವರನ್ನು ವಿದ್ಯೆ, ಅಧಿಕಾರ ಮತ್ತು ಆಸ್ತಿ ಗಳಿಕೆಯ ಹಕ್ಕುಗಳಿಂದ ಸಂಪೂರ್ಣವಾಗಿ ವಂಚಿಸಿದರು. ಇದರಿಂದ ಇವರೆಲ್ಲ ವಿದ್ಯೆ ಇಲ್ಲದೇ ಅಜ್ಞಾನಿಗಳಾಗಿ, ಬಡವರಾಗಿ, ಗುಲಾಮರಾದರು ಮತ್ತು ದೈಹಿಕ ಗುಲಾಮಗಿರಿಗೆ ಒಳಪಟ್ಟರು.

ಆಧುನಿಕ ಭಾರತದಲ್ಲಿ ಮೀಸಲಾತಿಯ ಬೆಳವಣಿಗೆ

► ಆಧುನಿಕ ಭಾರತದಲ್ಲಿ ಬ್ರಾಹ್ಮಣೇತರರಿಗೆ ಪ್ರಥಮ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದವರು ಕೊಲ್ಲಾಪುರ ಸಂಸ್ಥಾನದ ಛತ್ರಪತಿ ಶಾಹುಮಹಾರಾಜರು (ಕುಣಾಬಿ ಅಥವಾ ಕುರುಬ) ತನ್ನ ಸಮುದಾಯಕ್ಕೆ ಸೇರಿದವರಿಗೆ ತಮ್ಮ ಜನ್ಮ ದಿನವಾದ 1902, ಜುಲೈ 26 ರಂದು ಬ್ರಾಹ್ಮಣೇತರರಿಗೆ ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಗಳಿಗೆ ಶೇ. 50 ಮೀಸಲಾತಿಯನ್ನು ಜಾರಿಗೆ ತಂದರು. ಆದರೆ ಬಾಲಗಂಗಾಧರ ತಿಲಕರು ಮೀಸಲಾತಿಯನ್ನು ವಿರೋಧಿಸಿದರು.

► ಪ್ರಥಮ ಬಾರಿಗೆ ನಮ್ಮ ರಾಜ್ಯದ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ 1921 ರಲ್ಲಿ ಎಲ್ಲಾ ಹಿಂದುಳಿದ ಜಾತಿಗಳಿಗೆ ಅಥವಾ ಬ್ರಾಹ್ಮಣೇತರರಿಗೆ ಶೇ. 75 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದರು. ಇದನ್ನು ಸರ್.ಎಂ. ವಿಶ್ವೇಶ್ವರಯ್ಯ ತನ್ನ ದಿವಾನ್ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ವಿರೋಧಿಸಿದರು.

► ಮದ್ರಾಸ್‌ನಲ್ಲಿ ಪ್ರಥಮ ಬಾರಿಗೆ 1921 ರಲ್ಲಿ ಕೋಮುವಾರು ಸರಕಾರಿ ಆದೇಶದ ಮೂಲಕ ಬ್ರಾಹ್ಮಣೇತರರಿಗೆ ಎಸ್ಸಿ/ಎಸ್ಟಿ/ಒಬಿಸಿಗಳಿಗೆ ಶೇ. 44, ಬ್ರಾಹ್ಮಣರಿಗೆ ಶೇ. 16, ಮುಸ್ಲಿಮರಿಗೆ ಶೇ. 16, ಆಂಗ್ಲೋ ಇಂಡಿಯನ್ನರಿಗೆ/ಕ್ರಿಶ್ಚಿಯನ್ನರಿಗೆ ಶೇ. 16 ಮತ್ತು ಎಸ್ಸಿ/ಎಸ್ಟಿಗಳಿಗೆ ಶೇ. 8 ರಷ್ಟು ಮೀಸಲಾತಿ ನೀಡಿತು.

► 1909, 1919, 1935ರ ಭಾರತ ಸರಕಾರದ ಕಾಯ್ದೆಯಡಿ ಮೀಸಲಾತಿಗೆ ಅವಕಾಶ ನೀಡಲಾಯಿತು.

► 1950, ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂತು. ಅದರಲ್ಲಿ ಎಸ್ಸಿ 15 ಶೇ., ಎಸ್ಟಿ 3ಶೇ., ಒಬಿಸಿಗಳಿಗೆ 27 ಶೇ. ಮೀಸಲಾತಿ ನೀಡಲಾಯಿತು. 15(4) 16(4) ಕ್ರಮವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯವನ್ನು ಕಲ್ಪಿಸಿತು. ಇದಕ್ಕೆ ಯಾವುದೇ ಕಾಲಮಿತಿ ವಿಧಿಸಿಲ್ಲ. ಸಂವಿಧಾನದ 330 ಮತ್ತು 332ನೇ ವಿಧಿಗಳಲ್ಲಿ ವಿಧಾನಸಭೆ ಲೋಕಸಭೆಗಳಲ್ಲಿ ರಾಜಕೀಯ ಮೀಸಲಾತಿಯನ್ನು ನೀಡಲಾಯಿತು ಮತ್ತು ಸಂವಿಧಾನದ 340 ರಡಿ ಹಿಂದುಳಿದ ವರ್ಗಗಳಿಗೆ ಆಯೋಗವನ್ನು ರಚಿಸಿ ಅವರ ಅಭಿವೃದ್ಧಿಗೆ ಅಗತ್ಯಕ್ರಮ ವಹಿಸಲು ತಿಳಿಸಲಾಗಿತ್ತು.

ಭಾರತ ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಬೆಳವಣಿಗೆ

ಈ ದೇಶದಲ್ಲಿ ಪ್ರಥಮ ಬಾರಿಗೆ ಸಂವಿಧಾನದಲ್ಲಿ 340 ರಡಿ 1953 ಜನವರಿ 29 ರಂದು ಕಾಕಾ ಕಾಲೇಲ್ಕರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೊದಲ ಆಯೋಗವನ್ನು ನೇಮಿಸಿತು. ಈ ಆಯೋಗವು 1955ರ ಮಾರ್ಚ್ 30 ರಂದು ತನ್ನ ವರದಿಯನ್ನು ಸಲ್ಲಿಸಿತು. ಈ ವರದಿಯಲ್ಲಿ 2,399 ಜಾತಿಗಳ ಪಟ್ಟಿಯನ್ನು ಸಲ್ಲಿಸಿ ಇದರಲ್ಲಿ 837 ಜಾತಿಗಳು ಅತಿ ಹಿಂದುಳಿದ ಜಾತಿಗಳೆಂದು ಹೇಳಿತು. ಈ ವರದಿಯು ಹಿಂದುಳಿದ ವರ್ಗಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ತಾಂತ್ರಿಕ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 70 ರಷ್ಟು ಮೀಸಲಾತಿ ನೀಡಬೇಕು ಮತ್ತು ಸರಕಾರಿ ನೌಕರಿಗಳಲ್ಲಿ ಸ್ಥಳೀಯರಿಗೆ ಕೆಳಕಂಡಂತೆ ಮೀಸಲಾತಿ ನೀಡತಕ್ಕದ್ದು Class-1 ಹುದ್ದೆಗಳಲ್ಲಿ ಶೇ. 25, Class-2 ಹುದ್ದೆಗಳಲ್ಲಿ ಶೇ. 33, Class-3,4 ಹುದ್ದೆಗಳಲ್ಲಿ ಶೇ. 40 ಎಂದು ಆಯೋಗ ಶಿಫಾರಸು ಮಾಡಿತ್ತು.

ಭಾರತ ದೇಶದಲ್ಲಿ 2ನೇ ಹಿಂದುಳಿದ ವರ್ಗಗಳ ಆಯೋಗವನ್ನು 1978 ರಲ್ಲಿ ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಿತು. ಈ ಆಯೋಗವು 1980ನೇ ಡಿಸೆಂಬರ್ 31 ಕ್ಕೆ ವರದಿಯನ್ನು ಸಲ್ಲಿಸಿ 3,743 ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಗುರುತಿಸಿ ದೇಶದ ಜನಸಂಖ್ಯೆಯಲ್ಲಿ 52 ಶೇ. ಇರುವ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಶಿಫಾರಸು ಮಾಡಿತು. ಉದಾ: ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ, ಕುರುಬ, ಕುಂಬಾರ, ತಿಗಳ, ವಿಶ್ವಕರ್ಮ, ಬಣಜಿಗ, ಉಪ್ಪಾರ, ಬೆಸ್ತ, ನಾಯ್ಡು, ರೆಡ್ಡಿ, ಕೆಮ್ಮಾ, ಕ್ಷತ್ರಿಯ, ಮಡಿವಾಳ, ಗೊಲ್ಲ, ಹೂಗಾರ, ಈಡಿಗ, ಸುಮಾರು 333 ಜಾತಿಗಳನ್ನು ಮಂಡಲ್ ಆಯೋಗ ತನ್ನ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿದೆ. ಇದು ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರಾಜಕೀಯದಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ಒಬಿಸಿ ಗಳಿಗೆ 27 ಶೇ.ದಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತು.

ಭಾರತ ಸಂವಿಧಾನದ 124 ನೇ ತಿದ್ದುಪಡಿ ಮಾಡಿ 2019 ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 10 ಶೇ. ಮೀಸಲಾತಿ ನೀಡಿತ್ತು. ಇದರಲ್ಲಿ ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಬಿಟ್ಟು ಆರ್ಥಿಕವಾಗಿ ಹಿಂದುಳಿದವರಿಗೆ 10 ಶೇ. ಮೀಸಲಾತಿ ನೀಡಿತ್ತು.

ಎಲ್ಲಿ ಮೀಸಲಾತಿ ಇಲ್ಲ

ISRO, IIM, IIT, IISC, AIIMS, PGI, JIPMER, NIMHANS, ರಕ್ಷಣೆ, ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿ ವ್ಯವಸ್ಥೆ ಇಲ್ಲ ಮತ್ತು ಮೀಸಲಾತಿಯ ದುರಂತ ಕಥೆ ಒಬಿಸಿ, ಎಸ್ಸಿ, ಎಸ್ಟಿಗಳಿಗೆ 1992 ರಲ್ಲಿ ಎಲ್‌ಪಿಜಿ (ಹೊಸ ಆರ್ಥಿಕ ವ್ಯವಸ್ಥೆ) ಅಂದರೆ ಸರಕಾರಿ ಕ್ಷೇತ್ರವನ್ನು ಖಾಸಗಿ ಕ್ಷೇತ್ರವನ್ನಾಗಿ ಮಾಡುವುದು. ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಯನ್ನು ಜಾರಿಗೆ ತಂದರು. ಎಲ್ಲೆಡೆ ಖಾಸಗಿ ಕ್ಷೇತ್ರವು ಬೆಳೆದು ನಿಂತಿದೆ. 1991 ರಲ್ಲಿ ಶೇ. 1.52ರಷ್ಟಿದ್ದ ಸರಕಾರಿ ಉದ್ಯೋಗದರ 2008ರ ವೇಳೆಗೆ ಶೇ 0.65 ಕ್ಕೆ ಕುಸಿದಿದೆ. ಖಾಸಗಿ ಉದ್ಯೋಗದರ ಇದೇ ಅವಧಿಯಲ್ಲಿ 0.45 ರಿಂದ ಶೇ. 1.74 ಶೇ. ಕ್ಕೆ ಹೆಚ್ಚಾಗಿದೆ ಆದ್ದರಿಂದ ಮೀಸಲಾತಿ ಕಡಿಮೆ ಆಗುತ್ತಿದೆ.

ಮೀಸಲಾತಿ ಏಕೆ ಬೇಕು

ಭಾರತ ದೇಶದಲ್ಲಿ ಜಾತಿ ದೌರ್ಜನ್ಯ, ದಬ್ಬಾಳಿಕೆಗಳು, ಸಾಮಾಜಿಕ ಅಸಮಾನತೆ, ಬಡತನ, ಅಸಮಾನತೆ, ಲಿಂಗತಾರತಮ್ಯ, ಆರ್ಥಿಕ ತಾರತಮ್ಯ ಇವು ಇರುವವರೆಗೂ ಮೀಸಲಾತಿ ಬೇಕು. ಡಾ. ಬಿ.ಆರ್. ಅಂಬೇಡ್ಕರ್ ರಾಜಕೀಯ ಮೀಸಲಾತಿ ಕೇವಲ 10 ವರ್ಷ ಸಾಕು ಎಂದು ಹೇಳಿರುತ್ತಾರೆ. ಆದರೆ ನಮ್ಮನ್ನು ಆಳುವ ಸರಕಾರಗಳು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ. ಭೂಮಿ ಮತ್ತು ಆರ್ಥಿಕ ಸಂಪತ್ತು ರಾಷ್ಟ್ರೀಕರಣವಾಗಬೇಕು ಎಂದು ಬಾಬಾ ಸಾಹೇಬರು ಬಯಸಿದ್ದರು. ಎಲ್ಲಿಯವರೆಗೆ ಸಾಮಾಜಿಕ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇರಬೇಕು ಎಂದು ಬಾಬಾ ಸಾಹೇಬರ ನಿರ್ಧಾರವಾಗಿತ್ತು. 2018ರಲ್ಲಿ ಶೇ. 1ರಷ್ಟು ಶ್ರೀಮಂತರ ಬಳಿ ದೇಶದ ಸಂಪತ್ತಿನ ಶೇ.51.5 ರಷ್ಟಿದೆ. ಶೇ. 4 ಶ್ರೀಮಂತರ ಬಳಿ ಶೇ.17.1 ರಷ್ಟಿದೆ. ಶೇ. 5 ಶ್ರೀಮಂತರ ಬಳಿ ಶೇ.8.8 ರಷ್ಟಿದೆ, ಶೇ. 10ರಷ್ಟು ಜನರ ಬಳಿ 9.2 ರಷ್ಟಿದೆ. ಶೇ. 20 ಜನ ಸಾಮಾನ್ಯರ ಬಳಿ ಕೇವಲ 8.6 ರಷ್ಟಿದೆ. ಶೇ. 68ರಷ್ಟು ಬಡಜನರ ಬಳಿ ಕೇವಲ ಶೇ.4.7 ರಷ್ಟಿದೆ. ಶೇ.54 ಹಿಂದುಳಿದವರು ಕೇವಲ 10 ಶೇ. ಜನರು ಮಾತ್ರ ಸರಕಾರಿ ಸೇವೆಯಲ್ಲಿ ಇದ್ದಾರೆ, ಎಸ್ಸಿ/ಎಸ್ಟಿ 22 ಶೇ. ಜನರಲ್ಲಿ 1.8 ಶೇ. ಮಾತ್ರ ಉನ್ನತ ಶಿಕ್ಷಣ ಪಡೆದಿದ್ದಾರೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮೀಸಲಾತಿ ಬೇಕು. ಮೀಸಲಾತಿಯು ಬಡತನ ನಿವಾರಣೆ ಕಾರ್ಯಕ್ರಮ ಅಲ್ಲ. ಜಾತಿ ದೌರ್ಜನ್ಯಗಳಿಂದ ತುಳಿತಕ್ಕೆ ಒಳಪಟ್ಟವರನ್ನು ಅದು ಸಮಾಜದ ಮುಖ್ಯವಾಹಿನಿಗೆ ತರುವ ಒಂದು ಅಸ್ತ್ರವಾಗಬೇಕು. ಈ ದೇಶದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮೀಸಲಾತಿಯ ಫಲಾನುಭವಿಗಳೇ ಆಗಿದ್ದಾರೆ. ಮೊನ್ನೆ ಸುಪ್ರೀಂಕೋರ್ಟ್ ಮೀಸಲು ಮೂಲಭೂತ ಹಕ್ಕಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರರಾವ್ ಮತ್ತು ಹೇಮಂತ್ ಗುಪ್ತಾ ಅವರ ಪೀಠವು ಹೇಳಿರುವುದು ಸಂವಿಧಾನಕ್ಕೆ ವಿರೋಧವಾಗಿದೆ. ಸರಕಾರಿ ಹುದ್ದೆಗಳಿಗೆ ನೇಮಕ ಮಾಡುವಾಗ ಮತ್ತು ಭಡ್ತಿ ನೀಡುವಾಗ ಮೀಸಲಾತಿ ಒದಗಿಸುವ ಅಗತ್ಯ ಇದೆಯೇ ಎಂಬುದನ್ನು ರಾಜ್ಯ ಸರಕಾರ ನಿರ್ಧರಿಸಬಹುದು ಎಂಬುದು 16(4) 16(4ಎ) ವಿಧಿಗಳು ರಾಜ್ಯ ಸರಕಾರಕ್ಕೆ ನೀಡುತ್ತವೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ ಇದು ತಪ್ಪು. ಉತ್ತರಾಖಂಡದ ಲೋಕೋಪಯೋಗಿ ಇಲಾಖೆಯಲ್ಲಿ ಎಸ್ಸಿ/ಎಸ್ಟಿ ಇಂಜಿನಿಯರ್‌ಗಳ ನೇಮಕ ಮಾಡಿಕೊಳ್ಳಬೇಕು ಎಂದು ಅಲ್ಲಿನ ಹೈಕೋರ್ಟ್ ಹೇಳಿತ್ತು. ಇದು ಸಮರ್ಥಿನಿಯವಲ್ಲ ಎಂದು ಸುಪ್ರೀಂಕೋರ್ಟ್ ಪೀಠ ಹೇಳಿದೆ. ಆದರೆ ಇದು ಸಮಾನತೆಯ ಹಕ್ಕು ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಒಟ್ಟಾರೆಯಾಗಿ ಮೀಸಲಾತಿಯನ್ನು ತೆಗೆಯುವ ಒಂದು ದೊಡ್ಡ ಹಿಡೆನ್ ಅಜೆಂಡಾ ಕೆಲಸ ಮಾಡುತ್ತದೆ ಎಂಬುದು ವಾಸ್ತವದ ಸಂಗತಿ ಎಂದು ಹೇಳಬಹುದು.

Writer - ರಂಗಧಾಮಯ್ಯ ಜೆ.ಸಿ.

contributor

Editor - ರಂಗಧಾಮಯ್ಯ ಜೆ.ಸಿ.

contributor

Similar News