ಭಾರತ -ಕಿವೀಸ್ ಇಲೆವೆನ್ ಅಭ್ಯಾಸ ಪಂದ್ಯ ಡ್ರಾ

Update: 2020-02-17 03:16 GMT

ಹ್ಯಾಮಿಲ್ಟನ್, ಫೆ.16: ಭಾರತ ಮತ್ತು ನ್ಯೂಝಿ ಲ್ಯಾಂಡ್ ಇಲೆವೆನ್ ತಂಡಗಳ ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯ ರವಿವಾರ ಸೆಡ್ಡನ್ ಪಾರ್ಕ್‌ನಲ್ಲಿ ಡ್ರಾದಲ್ಲಿ ಮುಕ್ತಾಯಗೊಂಡಿದೆ.

ಮಾಯಾಂಕ್ ಅಗರ್ವಾಲ್ (81 ಗಾಯಗೊಂಡು ನಿವೃತ್ತಿ) ಮತ್ತು ರಿಷಭ್ ಪಂತ್ (70) ಅವರ ಉತ್ತಮ ಕೊಡುಗೆಯ ನೆರವಿನಲ್ಲಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ಅಭ್ಯಾಸದ ಎರಡನೇ ದಿನದಂದು ಭಾರತದ ವೇಗಿಗಳು ಗಮನಾರ್ಹ ಪ್ರದರ್ಶನ ನೀಡಿದರೆ, ಮೂರನೇ ದಿನ ಬ್ಯಾಟ್ಸ್ ಮನ್‌ಗಳು ಮಿಂಚಿದರು. ಭಾರತ ಎರಡನೇ ಇನಿಂಗ್ಸ್‌ನಲ್ಲಿ 48 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 252 ರನ್ ಗಳಿಸಿತು.

ಮಾಯಾಂಕ್ ಮತ್ತು ಪಂತ್ ಮೂರನೇ ವಿಕೆಟ್‌ಗೆ 134 ರನ್‌ಗಳ ಜೊತೆಯಾಟ ನೀಡಿದರು. ಪೃಥ್ವಿ ಶಾ 31 ಎಸೆತಗಳಲ್ಲಿ 39 ರನ್ ಗಳಿಸಿದರು. ವೃದ್ಧಿಮಾನ್ ಸಹಾ ಅವರು 38 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದ್ದರಿಂದ ಅವರ ಖ್ಯಾತಿಗೆ ಯಾವುದೇ ಹಾನಿಯಾಗಲಿಲ್ಲ. ಆದರೆ ಶುಭ್‌ಮನ್‌ಗಿಲ್ ಅವರು ಕೇವಲ 8 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಭಾರತ ಎರಡನೇ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿತ್ತು. ಮಾಯಾಂಕ್ ಅಗರ್ವಾಲ್ ಔಟಾಗದೆ 23 ಮತ್ತು ಪೃಥ್ವಿ ಶಾ ಔಟಾಗದೆ 35 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇಂದು ಆಟ ಮುಂದುವರಿಸಿದ ಓಪನರ್ ಶಾ ತನ್ನ ನಿನ್ನೆಯ ಸ್ಕೋರ್‌ಗೆ ಕೇವಲ ನಾಲ್ಕು ರನ್‌ಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು. ಅವರನ್ನು ಡ್ಯಾರಿಲ್ ಮಿಚೆಲ್ ಹಿಂದಕ್ಕೆ ಕಳುಹಿಸಿದರು. ಶುಭ್‌ಮನ್ ಗಿಲ್ 8 ರನ್ ಗಳಿಸಿದ್ದಾಗ ಮಿಚೆಲ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಇವರು ನಿರ್ಗಮಿಸಿದ ಬಳಿಕ ಮಾಯಾಂಕ್ ಅಗರ್ವಾಲ್ ಮತ್ತು ರಿಷಭ್ ಪಂತ್ 3ನೇ ವಿಕೆಟ್‌ಗೆ ಜೊತೆಯಾಟದಲ್ಲಿ 134 ರನ್ ಸೇರಿಸಿದರು.

ಐಶ್ ಸೋಧಿಯ ಎಸೆತದಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಭಾರತದ ಸ್ಕೋರ್‌ನ್ನು 200ರ ಗಡಿ ದಾಟಿಸಿದರು.

ಇದಕ್ಕೂ ಮುನ್ನ ಶನಿವಾರ, ಭಾರತದ ನಾಲ್ಕು ವೇಗಿಗಳಾದ ಮುಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ, ಉಮೇಶ್ ಯಾದವ್ ಮತ್ತು ನವದೀಪ್ ಸೈನಿ ದಾಳಿಗೆ ಸಿಲುಕಿ ನ್ಯೂಝಿಲ್ಯಾಂಡ್ ಇಲೆವೆನ್ ಮೊದಲ ಇನಿಂಗ್ಸ್ ನಲ್ಲಿ 74.2 ಓವರ್‌ಗಳಲ್ಲಿ 235ಕ್ಕೆ ಆಲೌಟ್ ಆಗಿತ್ತು. ಶಮಿ 17 ಕ್ಕೆ 3 ಬುಮ್ರಾ, ಉಮೇಶ್ ಮತ್ತು ಸೈನಿ ತಲಾ ಎರಡು ವಿಕೆಟ್ ಪಡೆದರು. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಉಳಿದ ಒಂದು ವಿಕೆಟ್ ಕಬಳಿಸಿದರು.

 ನ್ಯೂಝಿಲ್ಯಾಂಡ್ ಇಲೆವೆನ್ ಪರ ಹೆನ್ರಿ ಕೂಪರ್ 40 ರನ್ ಗಳಿಸಿದರೆ, ರಾಚಿನ್ ರವೀಂದ್ರ ಮತ್ತು ನಾಯಕ ಡ್ಯಾರಿಲ್ ಮಿಚೆಲ್ ಕ್ರಮವಾಗಿ 34 ಮತ್ತು 32 ರನ್ ಗಳಿಸಿದರು.

  ಮೊದಲ ಇನಿಂಗ್ಸ್‌ನಲ್ಲಿ ಹನುಮಾ ವಿಹಾರಿ ಅವರ 101 ಮತ್ತು ಚೇತೇಶ್ವರ ಪೂಜಾರ 93 ರನ್‌ಗಳ ನೆರವಿನಲ್ಲಿ ಭಾರತ 263 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News