ಪೊಲೀಸ್ ದೌರ್ಜನ್ಯದ ಬಳಿಕ ಚೆನ್ನೈಯಲ್ಲೊಂದು ‘ಶಾಹೀನ್‌ಬಾಗ್’

Update: 2020-02-17 13:16 GMT
file photo

ಚೆನ್ನೈ,ಫೆ.17: ಉತ್ತರ ಚೆನ್ನೈನ ವಾಷರಮನ್ ಪೇಟ್ ಪ್ರದೇಶವನ್ನು ಈಗ ಚೆನ್ನೈನ ‘ಶಾಹೀನ್‌ಬಾಗ್ ’ಎಂದೇ ಬಣ್ಣಿಸಲಾಗುತ್ತಿದೆ. ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ಕಳೆದ ಎರಡು ತಿಂಗಳುಗಳಿಂದ ಸಿಎಎ,ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ಮಹಿಳೆಯರು ನಡೆಸುತ್ತಿರುವ ಧರಣಿ ದೇಶದ ಹಲವೆಡೆ ಇಂತಹ ‘ಶಾಹೀನ್‌ ಬಾಗ್’ಗಳು ತಲೆಯೆತ್ತಲು ಸ್ಫೂರ್ತಿಯಾಗಿದೆ ಎಂದು Thewire.in ವರದಿ ಮಾಡಿದೆ

 ಕಳೆದ ಶುಕ್ರವಾರ ಸಂಜೆಯ ಪ್ರಾರ್ಥನೆಯ ಬಳಿಕ ಮಹಿಳೆಯರು ಸಿಎಎ ಅನ್ನು ವಿರೋಧಿಸಿ ವಾಷರ್‌ಮನ್ ಪೇಟ್‌ನ ರಸ್ತೆಗಳಲ್ಲಿ ಧರಣಿ ಕುಳಿತಿದ್ದಾರೆ. ಪೊಲೀಸ್ ದೌರ್ಜನ್ಯಗಳಿಗೂ ಜಗ್ಗದೆ ಈ ಮಹಿಳೆಯರು ಧರಣಿಯನ್ನು ಮುಂದುವರಿಸಿದ್ದಾರೆ. ಚೆನ್ನೈ ಪೊಲೀಸರು ಈ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ,ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೂ ಈ ಮಹಿಳೆಯರು ಸಿಎಎ ವಿರುದ್ಧ ತಮ್ಮ ಪ್ರತಿಭಟನೆಗೆ ಅಂಟಿಕೊಂಡಿದ್ದಾರೆ. ಇಲ್ಲಿ ಮಹಿಳೆಯರ ಮೇಲಿನ ಪೊಲೀಸ್ ಹಿಂಸಾಚಾರ ತಮಿಳುನಾಡಿನಾದ್ಯಂತ ದಿಢೀರ್ ಪ್ರತಿಭಟನೆಗಳಿಗೆ ಕಾರಣವಾಗಿದ್ದು, ಸರಕಾರವು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಜೋರಾಗಿದೆ. ಪ್ರತಿಪಕ್ಷ ನಾಯಕರು ಪೊಲೀಸ್ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಜಂಟಿ ಪೊಲೀಸ್ ಆಯುಕ್ತ (ಉತ್ತರ ಚೆನ್ನೈ) ಕಪಿಲಕುಮಾರ ಸರತ್ಕರ್ ಅವರ ತಪ್ಪುನಡೆ ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಆರೋಪಿಸಿರುವ ಡಿಎಂಕೆ ಸಂಸದೆ ಕನಿಮೋಳಿ,ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮೇ 2018ರಲ್ಲಿ ತೂತ್ತುಕುಡಿಯಲ್ಲಿ ಸ್ಟರ್ಲೈಟ್ ತಾಮ್ರ ಸಂಸ್ಕರಣಾ ಘಟಕದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸ್ ಗೋಲಿಬಾರ್ ನಡೆದು 13 ಜನರು ಸಾವನ್ನಪ್ಪಿದ್ದ ಸಂದರ್ಭದಲ್ಲಿ ಇದೇ ಸರತ್ಕರ್ ಅಲ್ಲಿ ಡಿಐಜಿಯಾಗಿದ್ದರು ಎನ್ನುವುದನ್ನು ಬೆಟ್ಟು ಮಾಡಿರುವ ಕನಿಮೋಳಿ,ಅವರು ಇಷ್ಟು ಅವಧಿಗೆ ಹುದ್ದೆಯಲ್ಲಿ ಮುಂದುವರಿದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಶುಕ್ರವಾರ ನಾವು ಧರಣಿ ಆರಂಭಿಸಿದಾಗ ನಮ್ಮಲ್ಲಿ ಭೀತಿಯನ್ನು ಸೃಷ್ಟಿಸಲು ಪೊಲೀಸರು ಪ್ರಯತ್ನಿಸಿದ್ದರು. ಆದರೆ ಸಿಎಎ ಮತ್ತು ಎನ್‌ಆರ್‌ಸಿ ಇಲ್ಲಿ ನಮ್ಮ ಅಸ್ತಿತ್ವಕ್ಕೇ ಹೆಚ್ಚಿನ ಬೆದರಿಕೆಯನ್ನೊಡ್ಡಿವೆ. ಎರಡು ವಾರಗಳ ಹಿಂದೆ ನಾವು ಇಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದಾಗ ಪೊಲೀಸರು ನಮಗೆ ಧರಣಿ ಪ್ರತಿಭಟನೆಗೆ ಪರ್ಯಾಯ ಸ್ಥಳವನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ. ಹೀಗಾಗಿ ನಾವು ರಸ್ತೆಯಲ್ಲಿಯೇ ಧರಣಿ ಕುಳಿತಿದ್ದೇವೆ. ನಾವು ಹಗಲು ಪ್ರತಿಭಟನೆ ನಡೆಸಿ ರಾತ್ರಿ ಮನೆಗಳಿಗೆ ತೆರಳಬೇಕು ಎಂದು ಪೊಲೀಸರು ಬಯಸಿದ್ದಾರೆ. ನಾವು ನಮ್ಮ ಬದುಕು, ಜೀವನೋಪಾಯ ಮತ್ತು ನಮ್ಮ ಘನತೆಗಾಗಿ ಪ್ರತಿಭಟಿಸುತ್ತಿದ್ದೇವೆ. ಇದನ್ನು ನಾವು ಬೆಳಿಗ್ಗೆ 9ರಿಂದ ಸಂಜೆ 5ರವರೆಗಿನ ಕಾಯಕವನ್ನಾಗಿ ಮಾಡಲು ಹೇಗೆ ಸಾಧ್ಯ’ಎಂದು ಪ್ರಶ್ನಿಸಿರುವ ವಾಷರ್‌ಮನ್ ಪೇಟ್ ಮಹಿಳೆಯರು,‘ಇಷ್ಟೊಂದು ಭೀತಿಯನ್ನು ಹಿಂದೆಂದೂ ನಾವು ಅನುಭವಿಸಿರಲಿಲ್ಲ,ನಮ್ಮ ಸ್ವಂತ ದೇಶದಲ್ಲಿಯೇ ನಮ್ಮ ಅಸ್ತಿತ್ವಕ್ಕೆ ಬೆದರಿಕೆಯುಂಟಾಗಿದೆ ’ಎಂದು ಸುದ್ದಿಗಾರರಲ್ಲಿ ಅಳಲು ತೋಡಿಕೊಂಡರು.

‘ಇದು ಕೇವಲ ನಮ್ಮ ಹೋರಾಟವಲ್ಲ ಮತ್ತು ಕೇವಲ ಮುಸ್ಲಿಮರೇ ನಡೆಸಬೇಕಾಗಿರುವ ಹೋರಾಟವೂ ಅಲ್ಲ. ಇಂದು ನಮ್ಮೊಂದಿಗೆ ಆಗಿರುವುದು ನಾಳೆ ಇತರರೊಂದಿಗೂ ಆಗುತ್ತದೆ ’ಎಂದರು.

ರಾಜ್ಯ ಸರಕಾರವು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು ಎನ್ನುವುದು ರಾಜ್ಯಾದ್ಯಂತ ಪ್ರತಿಭಟನೆಗಳ ಸಂಘಟಕರ ಆಗ್ರಹವಾಗಿದೆ.

ಈ ಪ್ರತಿಭಟನೆಗೆ ತಾರ್ಕಿಕ ಅಂತ್ಯವನ್ನು ಕಾಣಿಸಲು ಬಯಸಿದ್ದಾರೆ ಎಂದು ಬಾಕವಿ ಹೇಳಿದರು.

ತನ್ಮಧ್ಯೆ ಚೆನ್ನೈ ಪೊಲೀಸರು ಉದ್ವಿಗ್ನತೆಯನ್ನು ಶಮನಿಸುವ ಪ್ರಯತ್ನವಾಗಿ ಸಂಘಟಕರ ಮನವೊಲಿಸುವಲ್ಲಿ ತೊಡಗಿದ್ದಾರೆ. ಪೊಲೀಸ್ ಆಯಕ್ತ ಎ.ಕೆ.ವಿಶ್ವನಾಥನ್ ಅವರು ಶನಿವಾರ ಮುಸ್ಲಿಮ್ ನಾಯಕರೊಂದಿಗೆ ಸಭೆಯನ್ನೂ ನಡೆಸಿದ್ದರು.

‘ರಾಜ್ಯ ವಿಧಾನಸಭೆಯು ಸಿಎಎ,ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ನಿರ್ಣಯವನ್ನು ಅಂಗೀಕರಿಸುವವರೆಗೂ ಪ್ರತಿಭಟನೆಗಳು ಮಂದುವರಿಯಲಿವೆ ಎಂದು ನಾವು ಪೊಲೀಸರಿಗೆ ತಿಳಿಸಿದ್ದೇವೆ. ಇದು ಸರಕಾರವು ತಾನು ನಮ್ಮಂದಿಗಿದೆ ಎನ್ನುವುದನ್ನು ತೋರಿಸಲು ಮಾಡಬಹುದಾದ ಕನಿಷ್ಠ ಕರ್ತವ್ಯವಾಗಿದೆ’ಎಂದು ಸಭೆಯಲ್ಲಿ ಭಾಗವಹಿಸಿದ್ದ ಎಂಎಂಕೆ ನಾಯಕ ಎಂ.ಎಚ್.ಜವಾಹಿರುಲ್ಲಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News