ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25ರಷ್ಟು ಮೀಸಲಾತಿ: ರಾಜ್ಯಪಾಲ ವಜುಭಾಯಿ ವಾಲಾ

Update: 2020-02-17 12:31 GMT

ಬೆಂಗಳೂರು, ಫೆ.17: ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಲು ನನ್ನ ಸರಕಾರ ಅನುಮೋದನೆ ನೀಡಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ವಿಧಾನಸಭೆಯ ಸಭಾಂಗಣದಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಅವರು ಭಾಷಣ ಮಾಡಿದರು. ದುಷ್ಟ ಅಪರಾಧಿಗಳು ಹಾಗೂ ಭಯೋತ್ಪಾದಕರನ್ನು ಬಂಧಿಸಿಡಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಅತಿ ಭದ್ರತಾ ಕಾರಾಗೃಹವನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ವಿಜಯಪುರ ಮತ್ತು ಬೀದರ್‌ನಲ್ಲಿಯೂ ಕೇಂದ್ರ ಕಾರಾಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ ಒಂದು ಭಯೋತ್ಪಾದಕ ನಿಗ್ರಹ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ನೆರವು ನೀಡುವುದಕ್ಕಾಗಿ ಕೇಂದ್ರ ಸರಕಾರದ ನೆರವಿನೊಂದಿಗೆ ತುರ್ತು ಸ್ಪಂದನಾ ಬೆಂಬಲ ವ್ಯವಸ್ಥೆಯನ್ನು (ಇಆರ್‌ಎಸ್‌ಎಸ್) ಸ್ಥಾಪಿಸಲಾಗಿದೆ ಎಂದು ರಾಜ್ಯಪಾಲ ತಿಳಿಸಿದರು.

ಹೆಚ್ಚುತ್ತಿರುವ ಸೈಬರ್ ಆರ್ಥಿಕ ಮತ್ತು ಮಾದಕ ವಸ್ತು ಅಪರಾಧಗಳ ಬಗ್ಗೆ ಸೂಕ್ತ ತನಿಖೆಗಾಗಿ ಬೆಂಗಳೂರಿನಲ್ಲಿ ಎಂಟು ಹೊಸ ಸೈಬರ್ ಕ್ರೈಮ್ ಆರ್ಥಿಕ ಮತ್ತು ಮಾದಕ ದ್ರವ್ಯ(ಸಿಇಎನ್) ಸಂಬಂಧಿತ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರ ಪೊಲೀಸರು ತಮ್ಮ ನಾಗರಿಕ ಸ್ನೇಹಿ ಉಪಕ್ರಮಗಳ ಭಾಗವಾಗಿ ಪಾಸ್‌ಪೋರ್ಟ್ ಪರಿಶೀಲನೆಗಾಗಿ ಮೊಬೈಲ್ ಅಪ್ಲಿಕೇಷನ್ ಬಳಸುತ್ತಿದ್ದಾರೆ. ಪರಿಶೀಲನೆಯನ್ನು ತ್ವರಿತಗೊಳಿಸಲು ಈ ಸೌಲಭ್ಯವನ್ನು ರಾಜ್ಯಾದ್ಯಂತ 812 ಪೊಲೀಸ್ ಠಾಣೆಗಳಿಗೆ ವಿಸ್ತರಿಸಲಾಗಿದೆ ಎಂದು ರಾಜ್ಯಪಾಲ ತಿಳಿಸಿದರು.

ಕಾರ್ಖಾನೆಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದೆ ಮತ್ತು ಅಂತಹ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟು ಕೊಂಡು ಕಠಿಣ ನಿಬಂಧನೆ ಹಾಗೂ ಷರತ್ತುಗಳನ್ನು ವಿಧಿಸಿದೆ ಎಂದು ಅವರು ಹೇಳಿದರು.

ಪ್ರತ್ಯೇಕವಾಗಿ ಪೋಕ್ಸೊ ಅಧಿನಿಯಮಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಧಿವಿಚಾರಣೆ ಮಾಡಲು 17 ನ್ಯಾಯಾಲಯಗಳನ್ನು ಹಾಗೂ ಅತ್ಯಾಚಾರ ಮತ್ತು ಪೋಕ್ಸೊ ಅಧಿನಿಯಮಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೆ ಮಾಡಲು 14 ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಿದೆ ಎಂದು ರಾಜ್ಯಪಾಲ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News