ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರೆಯೇ ಎನ್ನುವುದನ್ನು ಪರೀಕ್ಷಿಸಿದ್ದ ಪ್ರಕರಣ: ಮೂವರು ಕಾಲೇಜು ಸಿಬ್ಬಂದಿಯ ಅಮಾನತು

Update: 2020-02-17 15:50 GMT

ಭುಜ್(ಗುಜರಾತ),ಫೆ.17: ಪದವಿ ತರಗತಿಗಳ ವಿದ್ಯಾರ್ಥಿನಿಯರು ಮುಟ್ಟಾಗಿದ್ದಾ ರೆಯೇ ಎನ್ನುವುದನ್ನು ಪರೀಕ್ಷಿಸಲು ಅವರ ಒಳಉಡುಪುಗಳನ್ನು ಬಲವಂತದಿಂದ ಬಿಚ್ಚಿಸಿದ್ದಕ್ಕಾಗಿ ಭುಜ್‌ನ ಶ್ರೀ ಸಹಜಾನಂದ ಗರ್ಲ್ಸ್ ಇನ್‌ಸ್ಟಿಟ್ಯೂಟ್‌ನ ಮೂವರು ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲು)ದ ಏಳು ಸದಸ್ಯರ ತಂಡವೊಂದು ಕೂಡ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.

ಕೆಲವು ವಿದ್ಯಾರ್ಥಿನಿಯರು ತಮ್ಮ ಮುಟ್ಟಿನ ಅವಧಿಯಲ್ಲಿ ಧಾರ್ಮಿಕ ಕಟ್ಟುಪಾಡುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹಾಸ್ಟೆಲ್‌ನ ವಾರ್ಡನ್ ಕಾಲೇಜು ಪ್ರಾಂಶುಪಾಲರಲ್ಲಿ ದೂರಿಕೊಂಡ ಬಳಿಕ ಈ ಹೇಯ ಘಟನೆ ನಡೆದಿತ್ತು. ಸ್ವಾಮಿನಾರಾಯಣ ಮಂದಿರ ಟ್ರಸ್ಟ್ ಈ ಕಾಲೇಜನ್ನು ನಡೆಸುತ್ತಿದ್ದು,ಮುಟ್ಟಾದ ವಿದ್ಯಾರ್ಥಿನಿಯರು ಮಂದಿರ ಮತ್ತು ಹಾಸ್ಟೆಲ್‌ನ ಅಡುಗೆಕೋಣೆಯನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಬಲವಂತದಿಂದ ಒಳಉಡುಪುಗಳನ್ನು ಬಿಚ್ಚಿಸಲಾಗಿದ್ದ 68 ವಿದ್ಯಾರ್ಥಿನಿಯರ ಪೈಕಿ 44 ವಿದ್ಯಾರ್ಥಿನಿಯರನ್ನು ಎನ್‌ಸಿಡಬ್ಲು ತಂಡ ರವಿವಾರ ಮಾತನಾಡಿಸಿದೆ.

 ‘ಅಚ್ಚರಿಯೆಂಬಂತೆ,ಚಾಲ್ತಿಯಲ್ಲಿರುವ ಪದ್ಧತಿ ಬಗ್ಗೆ ವಿದ್ಯಾರ್ಥಿನಿಯರಿಗೆ ಯಾವುದೇ ಆಕ್ಷೇಪವಿಲ್ಲ ಮತ್ತು ಅವರು ಮುಟ್ಟಾಗಿದ್ದಾರೆಯೇ ಇಲ್ಲವೇ ಎಂದು ಪರೀಕ್ಷಿಸುವುದು ಏಕಮಾತ್ರ ಸಮಸ್ಯೆಯಾಗಿದೆ ಎಂದು ನಮಗೆ ಮಾಹಿತಿ ನೀಡಲಾಗಿದೆ. ಇದಕ್ಕಾಗಿ ಕಾಲೇಜಿನಲ್ಲಿ ರಿಜಿಸ್ಟರ್‌ವೊಂದನ್ನು ಕೂಡ ಇಡಲಾಗಿದೆ ಎಂದು ತಿಳಿಸಿದ ತಂಡವು, ಮುಟ್ಟಾದ ವಿದ್ಯಾರ್ಥಿನಿಯರಿಗಾಗಿ ಇಂತಹ ನಿಯಮಗಳು ಇರುವುದು ತನಗೆ ತಿಳಿದಿಲ್ಲ ಎಂದು ಕಾಲೇಜು ಆಡಳಿತವು ಹೇಳಿಕೊಂಡಿದೆ. ಮುಂದಿನ ಕ್ರಮಕ್ಕಾಗಿ ನಾವು ಎನ್‌ಸಿಡಬ್ಲುಗೆ ವರದಿ ಸಲ್ಲಿಸಲಿದ್ದೇವೆ ’ಎಂದು ಹೇಳಿದೆ.

ಕಾಲೇಜಿಗೆ ಪ್ರವೇಶ ಪಡೆಯುವಾಗ ತಾವು ಮುಟ್ಟಾದಾಗ ಡೈನಿಂಗ್ ಹಾಲ್‌ನಲ್ಲಿ ಆಹಾರವನ್ನು ಸೇವಿಸುವುದಿಲ್ಲ ಮತ್ತು ನೆಲದ ಮೇಲೆ ಮಲಗುತ್ತೇವೆ ಎಂದು ವಿದ್ಯಾರ್ಥಿನಿಯರಿಂದ ಲಿಖಿತ ಒಪ್ಪಿಗೆಯನ್ನೂ ಪಡೆಯಲಾಗುತ್ತಿದೆ ಎಂದು ತಂಡವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News