×
Ad

ಸಿಎಎ, ಎನ್‌ಆರ್‌ಸಿ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಎಸ್‌ಎಫ್‌ಐ ನಾಯಕ ಮಯೂಕ್ ಬಿಸ್ವಾಸ್

Update: 2020-02-17 23:59 IST

ಬೆಂಗಳೂರು, ಫೆ. 17: ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಇಡೀ ದೇಶದಾದ್ಯಂತ ವಿದ್ಯಾರ್ಥಿಗಳ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಅಖಿಲ ಭಾರತ ಕಾರ್ಯದರ್ಶಿ ಮಯೂಕ್ ಬಿಸ್ವಾಸ್ ಕರೆ ನೀಡಿದ್ದಾರೆ.

ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿರುವ ಎಸ್‌ಎಫ್‌ಐ ರಾಜ್ಯ ಸಮ್ಮೇಳನದಲ್ಲಿ ಎನ್‌ಪಿಆರ್-ಎನ್‌ಆರ್‌ಸಿ- ಸಿಎಎ ಮತ್ತು ವಿದ್ಯಾರ್ಥಿ ಚಳವಳಿ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾತಂತ್ರ ಹೋರಾಟದ ಬಳಿಕ ಸಂವಿಧಾನದ ಉಳಿವಿಗಾಗಿ, ದೇಶ ಉಳಿವಿಗಾಗಿ ಎಲ್ಲ ವರ್ಗದ ಜನರು ಸಂಘಟಿತರಾಗಿ ಬೀದಿಗಿಳಿದಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನರು ಸಂಘಟಿತರಾಗಿ ಹೋರಾಟಕ್ಕಿಳಿದಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲ ವರ್ಗದ ವಿದ್ಯಾರ್ಥಿ ಸಮುದಾಯವೂ ಸಂಘಟಿತವಾಗಿ ಸಂವಿಧಾನ ವಿರೋಧಿ ಕಾನೂನು, ಕಾಯ್ದೆಗಳ ವಿರುದ್ಧ ಬೀದಿಗಿಳಿಯಬೇಕಿದೆ ಎಂದರು.

ದೇಶದಲ್ಲಿ ಪ್ರಭುತ್ವದ ವಿರುದ್ಧ, ಜನ ವಿರೋಧಿ, ಸಂವಿಧಾನ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡುವವರ ಮೇಲೆ ಆಳುವವರು ದೌರ್ಜನ್ಯ ನಡೆಸುತ್ತಿದ್ದಾರೆ. ದಿಲ್ಲಿಯ ಜೆಎನ್‌ಯು, ಜಾಮಿಯಾ ಮಿಲ್ಲಿಯಾ ವಿವಿ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದರು.

ಕಳೆದ ಒಂದೆರಡು ದಿನಗಳ ಹಿಂದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದಿಲ್ಲಿಯ ಜಾಮಿಯಾ ವಿವಿಯೊಳಗೆ ಪ್ರವೇಶಿಸಿದ ಪೊಲೀಸರು, ಗ್ರಂಥಾಲಯದೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಅಂದರೆ, ನಾವಿಂದು ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂದು ಮಯೂಕ್ ಬಿಸ್ವಾಸ್ ತಿಳಿಸಿದರು.

ಬಿಜೆಪಿ, ಆರೆಸ್ಸೆಸ್ ದಾಳಿಯ ವಿರುದ್ಧ ನಮಗೆ ನಮ್ಮ ರಾಷ್ಟ್ರಗೀತೆಯೇ ಆಯುಧವಾಗಬೇಕು. ಇದು ಬಡಜನರ ಹೋರಾಟವಾಗಿದ್ದು, ಜೈಲಿಗೆ ಹೋಗಲೂ ಸಿದ್ಧರಾಗಬೇಕು. ಆದರೆ, ಯಾವುದೇ ಕಾರಣಕ್ಕೂ ಎನ್‌ಪಿಆರ್ ವೇಳೆ ದಾಖಲೆ ನೀಡಬೇಡಿ ಎಂದು ಅವರು ನುಡಿದರು.

ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿ ಮಾಡಿದ್ದರಿಂದ ಸಾವಿರಾರು ಕೋಟಿ ಖರ್ಚು ಮಾಡಿದರು. ಆದರೆ, ಅದರಲ್ಲಿ ಬಹುತೇಕರು ಮುಸ್ಲಿಮೇತರರನ್ನು ಅನುಮಾನಿತರು ಎಂದು ಗುರುತಿಸಲಾಗಿದೆ. ಇದೇ ಮಾದರಿಯನ್ನು ಇಡೀ ದೇಶದಾದ್ಯಂತ ಜಾರಿಗೆ ಮುಂದಾಗಿದ್ದಾರೆ. ಈ ಕಾನೂನು ಕೇವಲ ಮುಸ್ಲಿಮರಿಗೆ ಅಷ್ಟೇ ತೊಂದರೆಯಲ್ಲ, ಎಲ್ಲ ಸಮುದಾಯಗಳಿಗೂ ತೊಂದರೆಯಾಗುತ್ತದೆ ಎಂದು ಹೇಳಿದರು.

ನಮಗೆ ಭಗತ್‌ ಸಿಂಗ್, ಅಂಬೇಡ್ಕರ್, ಪುಲೆ, ಗಾಂಧೀಯವರ ದೇಶ ಬೇಕಾಗಿದೆ ಹೊರತು, ಗೋಲ್ವಾಲ್ಕರ್, ಗೋಡ್ಸೆಯವರ ದೇಶವಲ್ಲ. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿ ಸಮುದಾಯ ಸಂಘಟಿತವಾಗಬೇಕು ಎಂದು ಬಿಸ್ವಾಸ್ ತಿಳಿಸಿದರು.

ಕೆವಿಎಸ್ ಸಂಚಾಲಕ ಸರೋವರ ಬೆಂಕಿಕೆರೆ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಪ್ಯಾಸಿಸ್ಟ್ ಶಕ್ತಿಗಳು ಧರ್ಮದ ಆಧಾರದ ಮೇಲೆ ದೇಶ ವಿಭಜಿಸಲು ಮುಂದಾಗುತ್ತಿದ್ದಾರೆ. ಇದರ ಅಂಗವಾಗಿ ಎನ್‌ಪಿಆರ್, ಎನ್‌ಆರ್‌ಸಿ, ಸಿಎಎ ಜಾರಿಯಾಗಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಐಡಿಎಸ್‌ಓನ ಅಜಯ್ ಕಾಮತ್, ಎನ್‌ಎಸ್‌ಯುಐನ ಎಚ್.ಎಸ್.ಮಂಜುನಾಥಗೌಡ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್, ಕಾರ್ಯದರ್ಶಿ ಗುರುರಾಜ್ ದೇಸಾಯಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News