ದಿಲ್ಲಿ ಗದ್ದುಗೆ: ದ್ವೇಷ ಮತ್ತು ಪ್ರಜಾತಂತ್ರದ ಸಂಘರ್ಷ

Update: 2020-02-17 18:44 GMT

ದೇಶದಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಶ್ರಮಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಮತ್ತು ಕಾರ್ಯಕರ್ತರಿಗೆ ಕೇಜ್ರಿವಾಲ್ ಮಾದರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ ಈ ಪ್ರಶ್ನೆ ನಮ್ಮ ಪರ್ಯಾಯದ ಪರಿಕಲ್ಪನೆಯನ್ನಾಧರಿಸಿರುತ್ತದೆ. ಆದರೆ ಪ್ರಜೆಗಳ ಆಯ್ಕೆಯೇ ಮಾನದಂಡವಾಗಿರುವ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರಕಾರಗಳು ತಾವು ಜನತೆಗೆ ನೀಡಿದ ಆಶ್ವಾಸನೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಜೆಗಳ ಮೂಲ ಸೌಕರ್ಯಗಳತ್ತ ಗಮನ ನೀಡಿದರೆ ಯಾವುದೇ ಭಾವನಾತ್ಮಕ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಬಹುದು ಎನ್ನುವುದನ್ನು ಕೇಜ್ರಿವಾಲ್ ನಿರೂಪಿಸಿದ್ದಾರೆ.

ದಿಲ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದು ಭಾರತದ ಪ್ರಜಾತಂತ್ರ ರಾಜಕಾರಣದಲ್ಲಿ ಕೊಂಚ ಮಟ್ಟಿನ ಆಶಾಭಾವನೆಯನ್ನು ಮೂಡಿಸಿದೆ. ದೇಶ, ದೇಶಾಭಿಮಾನ, ದೇಶದ್ರೋಹ ಮತ್ತು ಅಧಿಕಾರ ರಾಜಕಾರಣದ ಸಮಕಾಲೀನ ಅಸ್ತ್ರಗಳಾದ ಧರ್ಮ, ಜಾತಿ, ಸಮುದಾಯ ಮತ್ತು ಹಣಬಲ-ತೋಳ್ಬಲಗಳ ಚೌಕಟ್ಟಿನಿಂದಾಚೆಗೆ ಒಂದು ಸರಕಾರ ಮತ್ತೊಮ್ಮೆ ಮತದಾರರ ಅನುಮೋದನೆ ಪಡೆದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ಚುನಾಯಿತ ಸರಕಾರ ಜನಸಾಮಾನ್ಯರ ದೈನಂದಿನ ಬದುಕಿಗೆ ಅವಶ್ಯವಾದ ಸಂಗತಿಗಳನ್ನು ಗ್ರಹಿಸಿ, ಜನರ ಮೂಲ ಅಗತ್ಯತೆಗಳನ್ನು ಪ್ರಾಮಾಣಿಕವಾಗಿ ಪೂರೈಸಿದರೆ ಜನಮನ್ನಣೆ ಮಸುಕಾಗುವುದಿಲ್ಲ ಎನ್ನುವುದನ್ನು ಕೇಜ್ರಿವಾಲ್ ನಿರೂಪಿಸಿದ್ದಾರೆ. ಮತ್ತೊಂದೆಡೆ ವೈವಿಧ್ಯಮಯ ಸಾಮಾಜಿಕ ಆಯಾಮಗಳನ್ನು ಹೊಂದಿರುವ ದಿಲ್ಲಿಯಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಮಧ್ಯಮ ಮತ್ತು ಕೆಳವರ್ಗಗಳ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಒಂದು ರಾಜಕೀಯ ಪಕ್ಷ ತನ್ನದೇ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ನೆರವೇರಿಸಿದರೆ, ಮತ್ತಾವುದೇ ಭಾವನಾತ್ಮಕ ಅಂಶಗಳು ಬಾಧಿಸುವುದಿಲ್ಲ ಎನ್ನುವುದನ್ನೂ ಕೇಜ್ರಿವಾಲ್ ನಿರೂಪಿಸಿದ್ದಾರೆ.

 ಆದರೆ ದಿಲ್ಲಿ ಚುನಾವಣೆಗಳನ್ನು ಕೇವಲ ಇಷ್ಟಕ್ಕೇ ಸೀಮಿತಗೊಳಿಸಲಾಗುವುದಿಲ್ಲ. ತನ್ನ ದ್ವೇಷ ರಾಜಕಾರಣದ ಮೂಲಕ ರಾಜಧಾನಿಯಲ್ಲೂ ಕೋಮು ದ್ವೇಷದ ಬೀಜ ಬಿತ್ತಲು ಯತ್ನಿಸಿದ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಶಾಹೀನ್ ಬಾಗ್ ಪ್ರತಿಭಟನೆ ನೆರವಾಗಲಿಲ್ಲ ಎನ್ನುವುದು ಅಚ್ಚರಿ ಮೂಡಿಸಿದರೂ ಬಿಜೆಪಿ ಮತ್ತು ಸಂಘಪರಿವಾರ ತನ್ನ ಪ್ರಯತ್ನದಲ್ಲಿ ವಿಫಲವಾಗಿದೆ ಎಂದು ಹೇಳಲಾಗುವುದಿಲ್ಲ. ಹಾಗೆಂದು ಭಾವಿಸಿ ಸಂಭ್ರಮಿಸುವುದೂ ಅವಸರದ ನಡೆಯಾಗುತ್ತದೆ. ಕಳೆದ ವರ್ಷ ನಡೆದ ಮಹಾ ಚುನಾವಣೆಯಲ್ಲಿ ದಿಲ್ಲಿಯ ಎಲ್ಲ ಕ್ಷೇತ್ರಗಳಲ್ಲೂ ಜಯ ಸಾಧಿಸಿದ ಬಿಜೆಪಿಗೆ ಇದು ತಿಳಿದಿದೆ. ದಿಲ್ಲಿ ಗದ್ದುಗೆ ದೊರೆಯದಿದ್ದರೂ ತಾತ್ವಿಕವಾಗಿ ದಿಲ್ಲಿ ತಮ್ಮ ಕೈಯಲ್ಲಿದೆ ಎಂಬ ವಾಸ್ತವವನ್ನು ಬಿಜೆಪಿ ನಾಯಕತ್ವ ಅರಿತಿದೆ. ಮತೀಯವಾದದ ಲಕ್ಷಣವೂ ಹೀಗೆಯೇ ಇರುತ್ತದೆ ಎನ್ನುವುದನ್ನು ಕಳೆದ ಮೂರು ದಶಕಗಳಲ್ಲಿ ಸ್ಪಷ್ಟವಾಗಿ ಕಂಡಿದ್ದೇವೆ. ಮತಾಂಧತೆಯನ್ನೇ ಆಧರಿಸಿ ಅಧಿಕಾರ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳುವ ಮಾರ್ಗದಲ್ಲಿ ಕಳೆದುಕೊಳ್ಳುವುದನ್ನು ಲೆಕ್ಕಿಸದೆ ಗುರಿ ಮುಟ್ಟುವುದು ಫ್ಯಾಶಿಸ್ಟರ ಮೂಲ ಲಕ್ಷಣ. ಏಕೆಂದರೆ ಅವರ ಅಂತಿಮ ಗುರಿ ತಲುಪಲು ಅಗತ್ಯವಾದ ಬೀಜಗಳನ್ನು ಆಡಳಿತ ವ್ಯವಸ್ಥೆಯೊಳಗೇ ವ್ಯವಸ್ಥಿತವಾಗಿ ಬಿತ್ತಲಾಗಿರುತ್ತದೆ. ಮತ್ತೊಂದೆಡೆ ತನ್ನ ವಿಭಜಕ ನೀತಿಗಳ ಆಕರಗಳನ್ನು ನೇರವಾಗಿ ಖಂಡಿಸದ, ವಿರೋಧಿಸದ ವಿರೋಧ ಪಕ್ಷಗಳು ಬಿಜೆಪಿಯ ಜಗನ್ನಾಥ ರಥಯಾತ್ರೆಗೆ ನೆರವಾಗುತ್ತವೆ.

ಹಾಗಾಗಿ ಆಮ್ ಆದ್ಮಿ ಪಕ್ಷದ ಅಭೂತಪೂರ್ವ ವಿಜಯವನ್ನು ಸ್ವಾಗತಿಸುತ್ತಲೇ, ಪ್ರಜಾತಂತ್ರ ವ್ಯವಸ್ಥೆಯ ಮುನ್ನಡೆಗೆ ಅತ್ಯವಶ್ಯವಾದ ಕೆಲವು ಅಂಶಗಳನ್ನು ಪರಾಮರ್ಶಿಸಬೇಕಾಗುತ್ತದೆ. ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಒಂದು ನಿರ್ಣಾಯಕ ಸಂದರ್ಭದಲ್ಲಿ ಉಗಮಿಸಿದ ರಾಜಕೀಯ ಶಕ್ತಿ. ರಾಜಕೀಯ ಭ್ರಷ್ಟಾಚಾರ ಮತ್ತು ಅಪ್ರಮಾಣಿಕತೆ ಪರಾಕಾಷ್ಠೆಯಲ್ಲಿದ್ದ ಸಂದರ್ಭದಲ್ಲಿ ಅಣ್ಣಾ ಹಝಾರೆ ನೇತೃತ್ವದ ಜನಾಂದೋಲನದ ಒಂದು ತುಣುಕು ಆಮ್ ಆದ್ಮಿ ಪಕ್ಷ. ಮೂಲತಃ ಯಾವುದೇ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿದ್ದರೂ ತಮ್ಮ ಅಧಿಕಾರಶಾಹಿ ಅನುಭವದ ಹಿನ್ನೆಲೆಯಲ್ಲಿ ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸುವ ಚಾಣಾಕ್ಷತೆ ಹೊಂದಿರುವ ಕೇಜ್ರಿವಾಲ್ ಯಾವುದೇ ದೂರಗಾಮಿ ಚಿಂತನೆಗಳನ್ನು ಈವರೆಗೂ ಸ್ಪಷ್ಟಪಡಿಸಿಲ್ಲ. ದಿಲ್ಲಿ ಚುನಾವಣೆಯ ಗೆಲುವನ್ನು ಸಂಭ್ರಮಿಸಲು ಮೂಲ ಕಾರಣ ಮೋದಿ-ಶಾ ಜೋಡಿಯ ಸೋಲು ಮತ್ತು ಬಿಜೆಪಿ ಸರಕಾರದ ಸರ್ವಾಧಿಕಾರಿ ಧೋರಣೆಯ ಹಿನ್ನಡೆ. ಪಾಕಿಸ್ತಾನ, ಭಯೋತ್ಪಾದನೆ, ದೇಶದ್ರೋಹ, ನಗರ ನಕ್ಸಲ್ ಇವೆಲ್ಲ ನಾಟಕಗಳ ಹೊರತಾಗಿಯೂ ದಿಲ್ಲಿಯ ಜನತೆ ‘ಗೋಲಿ ಮಾರೋ ಸಾಲೋಂಕೋ’ ಎನ್ನುವವರನ್ನು ತಿರಸ್ಕರಿಸಿದ್ದಾರೆ. ಅಭಿವೃದ್ಧಿ ರಾಜಕಾರಣವನ್ನು ಹೇಗೆ ಜನಪರ ರಾಜಕಾರಣವನ್ನಾಗಿಸಬಹುದು ಎಂದು ಕೇಜ್ರಿವಾಲ್ ದಿಲ್ಲಿಯಲ್ಲಿ ನಿರೂಪಿಸಿದ್ದಾರೆ.

ದೇಶದಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಶ್ರಮಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಮತ್ತು ಕಾರ್ಯಕರ್ತರಿಗೆ ಕೇಜ್ರಿವಾಲ್ ಮಾದರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ ಈ ಪ್ರಶ್ನೆ ನಮ್ಮ ಪರ್ಯಾಯದ ಪರಿಕಲ್ಪನೆಯನ್ನಾಧರಿಸಿರುತ್ತದೆ. ಆದರೆ ಪ್ರಜೆಗಳ ಆಯ್ಕೆಯೇ ಮಾನದಂಡವಾಗಿರುವ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರಕಾರಗಳು ತಾವು ಜನತೆಗೆ ನೀಡಿದ ಆಶ್ವಾಸನೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಜೆಗಳ ಮೂಲ ಸೌಕರ್ಯಗಳತ್ತ ಗಮನ ನೀಡಿದರೆ ಯಾವುದೇ ಭಾವನಾತ್ಮಕ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಬಹುದು ಎನ್ನುವುದನ್ನು ಕೇಜ್ರಿವಾಲ್ ನಿರೂಪಿಸಿದ್ದಾರೆ. ಮತ್ತೊಂದೆಡೆ 25 ವರ್ಷಗಳ ಆಡಳಿತ ನಡೆಸಿ ಕಳೆದ ಬಾರಿ ಹೀನಾಯ ಸೋಲು ಕಂಡ ತ್ರಿಪುರಾದ ಎಡರಂಗ ಸರಕಾರವನ್ನು ಈ ಸಂದರ್ಭಕ್ಕೆ ಮುಖಾಮುಖಿಯಾಗಿಸುವಾಗ ಗೊಂದಲ ಮೂಡುತ್ತದೆ. ಕೇಜ್ರಿವಾಲ್ ಅವರಿಗಿಂತಲೂ ಹೆಚ್ಚು ಪ್ರಾಮಾಣಿಕ ಆಡಳಿತ ನೀಡಿದ್ದ ಮತ್ತು ಹೆಚ್ಚು ದಕ್ಷತೆಯನ್ನು ತೋರಿದ್ದ ಮಾಣಿಕ್ ಸರಕಾರ ಸೋಲಲು ಮೂಲ ಕಾರಣ ಎಡ ಮತ್ತು ಬಲಪಂಥೀಯ ರಾಜಕಾರಣದ ಸಂಘರ್ಷ. ಬಿಜೆಪಿಯ ಮೂಲ ಸೈದ್ಧಾಂತಿಕ ನೆಲೆಯನ್ನು ಮತ್ತು ಆರ್ಥಿಕ ನೀತಿಗಳನ್ನು ಪ್ರಶ್ನಿಸುವ ಎಡಪಂಥೀಯರು ಚುನಾವಣಾ ರಾಜಕಾರಣದಲ್ಲಿ ತಿರಸ್ಕೃತರಾಗುತ್ತಿರುವುದನ್ನು ಗಮನಿಸಿದಾಗ, ಕೇಜ್ರಿವಾಲ್ ಅವರ ಚಾಣಾಕ್ಷ ನಡೆಯ ಹಿಂದಿನ ಮರ್ಮ ಅರ್ಥವಾಗುತ್ತದೆ.

 ಸಮಸ್ಯೆ ಇರುವುದೂ ಇಲ್ಲಿಯೇ. ಭಾರತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಕೇವಲ ಆಡಳಿತ ಕೇಂದ್ರಿತವಲ್ಲ. ಅಧಿಕಾರ ಕೇಂದ್ರಿತವೂ ಅಲ್ಲ. ನವ ಉದಾರವಾದ, ಕೋಮುವಾದ ಮತ್ತು ಫ್ಯಾಶಿಸಂ, ಜಾತಿ ವ್ಯವಸ್ಥೆಯ ಕರಾಳ ಸ್ವರೂಪ, ಶೋಷಿತ ಮತ್ತು ಅವಕಾಶವಂಚಿತ ಜನಸಮುದಾಯಗಳ ಅಸ್ಮಿತೆಯ ಬಿಕ್ಕಟ್ಟು ಮತ್ತು ದೇಶದ ಮಧ್ಯಮ ವರ್ಗಗಳನ್ನು ಆವರಿಸಿರುವ ದೇಶ-ದೇಶಪ್ರೇಮದ ಭಾವಾವೇಶದ ಭ್ರಮೆ. ಈ ಸಮಸ್ಯೆಗಳು ದಿಲ್ಲಿ ಚುನಾವಣೆಯ ಸಂದರ್ಭದಲ್ಲಿ ಚರ್ಚೆಗೊಳಗಾಗಲಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ, ದೇಶವನ್ನು ಕಾಡುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗದ ಬವಣೆ, ನಗರ ಕೇಂದ್ರಿತ ಅಭಿವೃದ್ಧಿ ಮಾದರಿಯಿಂದ ಆಘಾತಕ್ಕೊಳಗಾಗಿರುವ ಅನೌಪಚಾರಿಕ ಕ್ಷೇತ್ರ ಮತ್ತು ವಲಸಿಗರ ಸಮಸ್ಯೆ, ಜನಸಮುದಾಯಗಳ ನಡುವೆ ನಿರಂತರವಾಗಿ ದ್ವೇಷದ ಬೀಜ ಬಿತ್ತುತ್ತಿರುವ ಭಾವೋನ್ಮಾದದ ರಾಜಕಾರಣ ಈ ಯಾವುದೇ ಸಮಸ್ಯೆಗಳು ದಿಲ್ಲಿಯಲ್ಲಿ ಪ್ರಸ್ತುತ ಎನಿಸಲಿಲ್ಲ. ಶಾಹೀನ್‌ಬಾಗ್ ಪ್ರತಿಭಟನೆಯನ್ನು ಬಳಸಿಕೊಳ್ಳಲು ಹೋಗಿ ಬಿಜೆಪಿ ಕೈಸುಟ್ಟುಕೊಂಡಿತೇ ಹೊರತು, ಶಾಹೀನ್ ಬಾಗ್ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಹಿರಂಗವಾಗಿ ಬೆಂಬಲಿಸುವ ಮೂಲಕ ಕೇಜ್ರಿವಾಲ್ ಲಾಭ ಪಡೆಯಲಿಲ್ಲ. ಅಂದರೆ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಇದು ನಿರ್ಣಾಯಕ ಎನಿಸಲಿಲ್ಲ. ಬದಲಾಗಿ ಸರಕಾರದ ಸಾಧನೆ ಮತ್ತು ಜನತೆಯ ಸಮಸ್ಯೆಗಳ ನಿವಾರಣೆ ನಿರ್ಣಾಯಕವಾಗಿತ್ತು. ಮತ್ತೊಂದೆಡೆ ಬಿಜೆಪಿಯ ಮತಧರ್ಮ ಆಧರಿತ ರಾಜಕಾರಣವನ್ನು ನಿರಾಕರಿಸದೆ ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ ಸಂಕೇತಗಳನ್ನು ಬಳಸುವ ಮೂಲಕ ಕೇಜ್ರಿವಾಲ್ ರಾಜಕೀಯ ಚಾಣಾಕ್ಷತೆ ತೋರಿದ್ದಾರೆ.

ಈ ಚಾಣಾಕ್ಷತೆಯನ್ನೇ ಮುಂದಿಟ್ಟುಕೊಂಡು ಕೇಜ್ರಿವಾಲ್ ಅವರನ್ನು ಬಿಜೆಪಿ-ಆರೆಸ್ಸೆಸ್‌ನೊಡನೆ ಸಮೀಕರಿಸಲಾಗುವುದಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷವೂ ಇದೇ ತಪ್ಪುಮಾಡಿದೆ. ಈಗಲೂ ಮಾಡುತ್ತಿದೆ. ಬಿಜೆಪಿಯ ರಾಮ ಬೇರೆ ನಮ್ಮ ರಾಮ ಬೇರೆ ಎನ್ನುವ ಕಾಂಗ್ರೆಸ್ ಧೋರಣೆ ರಾಮನನ್ನು ಅಯೋಧ್ಯೆಯಿಂದ ನಾಗಪುರಕ್ಕೆ ವರ್ಗಾಯಿಸುವುದರಲ್ಲಿ ನೆರವಾಗಿದೆ. ನವ ಉದಾರವಾದದ ಸಂದರ್ಭದಲ್ಲೂ ಕೇಜ್ರಿವಾಲ್ ಎಡಪರ ಎನ್ನಬಹುದಾದ ನಿಲುವು ಪ್ರದರ್ಶಿಸಿಲ್ಲ. ಸಮಾಜದ ಆಮೂಲಾಗ್ರ ಬದಲಾವಣೆಗೆ ಅಗತ್ಯವಾದ ಯಾವುದೇ ಕ್ರಾಂತಿಕಾರಿ ನೀತಿಗಳನ್ನು ಆಮ್ ಆದ್ಮಿ ಪಕ್ಷ ಪ್ರತಿಪಾದಿಸಿಲ್ಲ. ಹಾಗೆಯೇ ಅಸ್ಪಶ್ಯತೆ, ಜಾತಿ ದೌರ್ಜನ್ಯ, ಮಹಿಳೆಯರ ಸಮಸ್ಯೆಗಳನ್ನು ಕುರಿತು ಸ್ಪಷ್ಟ ನೀತಿಯನ್ನು ಅನುಸರಿಸುತ್ತಿಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಯ ಅಧಿಕಾರ ರಾಜಕಾರಣದಲ್ಲಿ ಒಂದು ಬೂರ್ಷ್ವಾ ಪಕ್ಷ ಅನುಸರಿಸುವ ಸಹಜ ಮಾರ್ಗ ಎನ್ನುವುದನ್ನು ಇತಿಹಾಸವೇ ನಿರೂಪಿಸಿದೆ. ಕೇಜ್ರಿವಾಲ್ ಇದೇ ಮಾರ್ಗ ಅನುಸರಿಸಿದ್ದಾರೆ.

ಈ ಅಂಶಗಳನ್ನು ಮುಂದಿಟ್ಟುಕೊಂಡು ಬಿಜೆಪಿ-ಆರೆಸ್ಸೆಸ್ ವಿರೋಧಿ ಪರ್ಯಾಯ ರಾಜಕಾರಣಕ್ಕೆ ಆಮ್ ಆದ್ಮಿ ಪಕ್ಷ ನಾಯಕತ್ವ ನೀಡಬಲ್ಲದೇ? ಕಾಂಗ್ರೆಸ್ ಪಕ್ಷವನ್ನೂ ಹೊರಗಿಟ್ಟು ಭಾರತದ ಬಹುಸಂಖ್ಯಾತ ಶೋಷಿತ ಸಮುದಾಯಗಳು, ಧಾರ್ಮಿಕ ಅಲ್ಪಸಂಖ್ಯಾತರು, ಆದಿವಾಸಿಗಳು, ಮಹಿಳೆಯರು, ರೈತ ಕಾರ್ಮಿಕರು, ದುಡಿಯುವ ವರ್ಗಗಳು ಬಯಸುವ ಸಮಾಜವಾದಿ ಸೆಕ್ಯುಲರ್ ರಾಷ್ಟ್ರದ ಸ್ಥಾಪನೆಗೆ ಆಮ್ ಆದ್ಮಿ ಪಕ್ಷ ತನ್ನದೇ ಆದ ಭೂಮಿಕೆಯನ್ನು ಸಿದ್ಧಪಡಿಸಿದೆಯೇ ? ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಸಾಮಾಜಿಕ-ಆರ್ಥಿಕ-ರಾಜಕೀಯ ಮತ್ತು ಮತಧಾರ್ಮಿಕ ಸಮಾನತೆಯನ್ನು ಸಾಧಿಸಿ, ಶೋಷಣಾಮುಕ್ತ ಸಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಆಮ್‌ಆದ್ಮಿ ಪಕ್ಷ ನೀಲನಕ್ಷೆಯನ್ನು ಸಿದ್ಧಪಡಿಸಿದೆಯೇ? ಈ ನಿರೀಕ್ಷೆಗಳು ಕೊಂಚ ಅತಿಯಾಯಿತು ಎನಿಸಿದರೂ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದಲ್ಲಿ ಈ ಸೈದ್ಧಾಂತಿಕ ಧೋರಣೆಯನ್ನು ಗುರುತಿಸುವುದು ಕಷ್ಟ. ದಿಲ್ಲಿ ಚುನಾವಣೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಪರ್ಯಾಯ ರಾಜಕಾರಣದತ್ತ ಮುನ್ನಡೆಯಬೇಕಿದೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News