ಏಶ್ಯನ್ ಚಾಂಪಿಯನ್‌ಶಿಪ್:ಚೀನಾ ಕುಸ್ತಿಪಟುಗಳಿಗೆ ಅವಕಾಶ ನಿರಾಕರಣೆ

Update: 2020-02-17 18:51 GMT

ಹೊಸದಿಲ್ಲಿ, ಫೆ.17: ಮಂಗಳವಾರ ಇಲ್ಲಿ ಪ್ರಾರಂಭವಾಗುವ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಕುಸ್ತಿಪಟುಗಳು ಭಾಗವಹಿಸುವುದಿಲ್ಲ. ಕೊರೋನ ವೈರಸ್‌ನಿಂದ ಚೀನಾ ಸಮಸ್ಯೆ ಎದುರಿಸುತ್ತಿರುವ ಕಾರಣದಿಂದಾಗಿ ಅವರಿಗೆ ಸರಕಾರ ವೀಸಾ ನೀಡಿಲ್ಲ ಎಂದು ರಾಷ್ಟ್ರೀಯ ಕುಸ್ತಿ ಒಕ್ಕೂಟದ ಉನ್ನತ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

   ಚೀನಾದ 40 ಮಂದಿ ಕುಸ್ತಿಪಟುಗಳ ತಂಡಕ್ಕೆ ಸರಕಾರ ವೀಸಾ ನಿರಾಕರಿಸಿದೆ ಎಂದು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

  ಸರಕಾರವು ಚೀನಾದ ಕುಸ್ತಿಟುಗಳಿಗೆ ವೀಸಾ ನೀಡಿಲ್ಲ ಮತ್ತು ಈ ಕಾರಣದಿಂದಾಗಿ ಅವರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿಲ್ಲ ಎಂಬ ವಿಚಾರ ನಮಗೆ ತಿಳಿದಿದೆ ಎಂದು ತೋಮರ್ ಹೇಳಿದರು.

  ಕೊರೋನ ವೈರಸ್ ಸಮಸ್ಯೆ ಜಗತ್ತಿಗೆ ಬಾಧಿಸಿದೆ. ಕ್ರೀಡಾಪಟುಗಳ ಆರೋಗ್ಯವು ಈಗ ಪ್ರಾಥಮಿಕ ಕಾಳಜಿಯಾಗಿದೆ. ಸರಕಾರವು ಅವರಿಗೆ ವೀಸಾಗಳನ್ನು ಯಾಕೆ ನೀಡಲಿಲ್ಲ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

  ಆದಾಗ್ಯೂ ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಸರಕಾರದಿಂದ ಇನ್ನಷ್ಟೇ ಅಧಿಕೃತ ಮಾಹಿತಿಯನ್ನು ಪಡೆಯಬೇಕಾಗಿದೆ ಎಂದು ಅವರು ಹೇಳಿದರು.

 ಚೀನಾದಲ್ಲಿ ಕೊರೋನ ವೈರಸ್ ಸೋಂಕಿನಿಂದ ಈವರೆಗೆ 1,500 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಭಾರತ ಸರಕಾರವು ಚೀನಾದ ಪ್ರಜೆಗಳ ಎಲ್ಲಾ ಇ-ವೀಸಾಗಳನ್ನು ರದ್ದುಗೊಳಿಸಿದೆ.

 ಕೊರೋನ ವೈರಸ್ ಸೋಂಕು ಪೀಡಿತ ಚೀನಾದ ವುಹಾನ್ ನಗರ ಜನವರಿ 23ರಿಂದ ಬಂದ್ ಆಗಿದೆ ಮತ್ತು ಹಲವು ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಮತ್ತು ಚೀನಾದ ಇತರ ಸೋಂಕು ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಿದೆ.

ಪ್ರಯಾಣ ನಿರ್ಬಂಧಗಳನ್ನು ಅನೇಕ ದೇಶಗಳು ವಿಧಿಸಿವೆ. ಚೀನಾದ ನಗರಗಳಿಗೆ ಹೊರಗಿನ ವಿಮಾನಗಳನ್ನು ಸಹ ಸ್ಥಗಿತ ಗೊಳಿಸಲಾಗಿದೆ.

ಮಹಿಳೆಯರ ಒಲಿಂಪಿಕ್ಸ್ ಫುಟ್ಬಾಲ್ ಅರ್ಹತಾ ಸ್ಪರ್ಧೆ, ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್‌ಶಿಪ್, ಶಾಂಘೈನಲ್ಲಿ ಎಫ್ ವನ್ ಗ್ರ್ಯಾಂಡ್ ಪ್ರಿ ಮತ್ತು ಏಶ್ಯ ಓಶಿಯಾನಿಯಾ ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಪಂದ್ಯಗಳು ಸೇರಿದಂತೆ ಚೀನಾದಲ್ಲಿ ಹಲವಾರು ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ. ಕೆಲವನ್ನು ಸ್ಥಳಾಂತರಿಸಲಾಗಿದೆ ಅಥವಾ ರದ್ದುಪಡಿಸಲಾಗಿದೆ.

  ಪಾಕಿಸ್ತಾನದ ಕುಸ್ತಿಪಟುಗಳಿಗೆ ಶನಿವಾರ ವೀಸಾ ನೀಡಿರುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ತೋಮರ್ ''ನಾವು ಪಾಕಿಸ್ತಾನದ ಕುಸ್ತಿಪಟುಗಳಿಗೆ ವೀಸಾ ನೀಡದೇ ಇದ್ದಲ್ಲಿ ಮುಂದೆ ಸಮಸ್ಯೆ ಎದುರಾಗಬಹುದು. ಈ ಕಾರಣದಿಂದಾಗಿ ನಾವು ವೀಸಾ ನೀಡಿದ್ದೇವೆ. ಆದರೆ ಚೀನಾದ ಕುಸ್ತಿಪಟುಗಳ ವಿಷಯದಲ್ಲಿ ಅದು ಭಾಗವಹಿಸುವ ಕ್ರೀಡಾಪಟುಗಳ ಆರೋಗ್ಯ ಮತ್ತು ಸುರಕ್ಷತೆಗಾಗಿ ವೀಸಾ ನಿರಾಕರಿಸಲಾಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News