'ಆಧಾರ್ ನಕಲಿಯಾಗಿರಬಹುದು': ಪೌರತ್ವ ಸಾಬೀತುಪಡಿಸಲು ಹೈದರಾಬಾದ್ ನಿವಾಸಿಗೆ ವಿಶಿಷ್ಟ ಗುರುತು ಪ್ರಾಧಿಕಾರ ನೋಟಿಸ್

Update: 2020-02-18 11:15 GMT

ಹೈದರಾಬಾದ್ : ಹೈದರಾಬಾದ್ ನಿವಾಸಿ ಸತ್ತಾರ್ ಖಾನ್ ಅವರಿಗೆ ಫೆ. 3ರಂದು ಬರೆದಿರುವ ಪತ್ರದಲ್ಲಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಅವರ ಭಾರತೀಯ ಪೌರತ್ವವನ್ನು ಶಂಕಿಸಿದೆ. ಖಾನ್ ಭಾರತೀಯ ನಾಗರಿಕನಲ್ಲ ಎಂಬ ದೂರು/ಆರೋಪ ತನಗೆ  ಬಂದಿದೆ ಎಂದು ಹೇಳಿರುವ ಪ್ರಾಧಿಕಾರ ಈ ದೂರನ್ನು ನೀಡಿದವರು ಯಾರು ಎಂಬುದನ್ನು ಬಹಿರಂಗ ಪಡಿಸಿಲ್ಲ.

ಸತ್ತಾರ್ ತನ್ನ ಆಧಾರ್ ಕಾರ್ಡನ್ನು ನಕಲಿ ದಾಖಲೆಗಳ ಆಧಾರದಲ್ಲಿ ಪಡೆದುಕೊಂಡಿದ್ದಾರೆಂದೂ ದೂರಿನಲ್ಲಿ ಹೇಳಲಾಗಿತ್ತು ಎಂದು ಪ್ರಾಧಿಕಾರ ಹೇಳಿಕೊಂಡಿದೆ.

ಫೆ. 20ರಂದು ಬೆಳಗ್ಗೆ 11 ಗಂಟೆಗೆ ರಂಗಾರೆಡ್ಡಿ ಜಿಲ್ಲೆಯ ಬಾಲಾಪುರ್ ತನಿಖಾಧಿಕಾರಿಯೆದುರು ಹಾಜರಾಗುವಂತೆಯೂ ಆತನಿಗೆ ಸೂಚಿಸಲಾಗಿದೆಯಲ್ಲದೆ ಆತ ತಾನು ಭಾರತೀಯ ನಾಗರಿಕ ಎಂಬುದಕ್ಕೆ ಸೂಕ್ತ ಮೂಲ ದಾಖಲೆಗಳನ್ನು ಪ್ರಸ್ತುತಪಡಿಸುವಂತೆಯೂ ಸೂಚಿಸಲಾಗಿದೆ.

ಒಂದು ವೇಳೆ ಆತ ಭಾರತೀಯ ನಾಗರಿಕನಲ್ಲದೇ ಇದ್ದರೆ ಕಾನೂನು ಬದ್ಧವಾಗಿ ಭಾರತ ಪ್ರವೇಶಿಸಿರುವ ಕುರಿತಂತೆ ಸಾಬೀತು ಪಡಿಸಬೇಕು ಎಂದು ಆತನಿಗೆ ಕಳುಹಿಸಲಾದ ನೋಟಿಸ್ ನಲ್ಲಿ ತಿಳಿಸಲಾಗಿದೆ. ಆತ ತನಿಖೆಗೆ ಹಾಜರಾಗದೇ ಇದ್ದಲ್ಲಿ ತಾನು ಸ್ವಯಂಪ್ರೇರಣೆಯಿಂದ ನಿರ್ಧಾರ ಕೈಗೊಳ್ಳುವುದಾಗಿಯೂ ಪ್ರಾಧಿಕಾರದ ನೋಟಿಸ್ ಎಚ್ಚರಿಸಿದೆ.

ಎಷ್ಟು ಜನರಿಗೆ ಈ ರೀತಿಯ ನೋಟಿಸನ್ನು ಪ್ರಾಧಿಕಾರ ಜಾರಿ ಮಾಡಿದೆ ಎಂದು ತಿಳಿದಿಲ್ಲವಾದರೂ ತನಿಖೆಯನ್ನು ಒಂದು ಸಭಾಂಗಣದಲ್ಲಿ ಆಯೋಜಿಸಲಾಗಿರುವುದರಿಂದ ಹಲವರು ಅಲ್ಲಿಗೆ ಆಗಮಿಸುವ ಸಾಧ್ಯತೆಯಿದೆ ಎಂದು ಸತ್ತಾರ್ ಖಾನ್ ಅವರ ವಕೀಲ ಮುಝಾಫರುಲ್ಲಾ ಖಾನ್ ಹೇಳುತ್ತಾರೆ. ಪ್ರಾಧಿಕಾರದ ನೋಟಿಸನ್ನು ತೆಲಂಗಾಣ ಹೈಕೋರ್ಟಿನಲ್ಲಿ  ಪ್ರಶ್ನಿಸುವ ಉದ್ದೇಶವೂ ಖಾನ್ ಅವರಿಗಿದೆ.

ಸತ್ತಾರ್ ಖಾನ್ 40 ವರ್ಷ ಮೇಲ್ಪಟ್ಟವರಾಗಿದ್ದು  ಹೈದರಾಬಾದ್‍ನ ಎರಡು ಪ್ರದೇಶಗಳಲ್ಲಿ ಇಲ್ಲಿಯ ತನಕ ವಾಸವಾಗಿದ್ದರು. ಅವರ ಕುಟುಂಬ, ಸೋದರರೆಲ್ಲರೂ ಹೈದರಾಬಾದ್ ನಿವಾಸಿಗಳಾಗಿದ್ದು ಎಲ್ಲರ ಬಳಿ ರೇಷನ್ ಕಾರ್ಡ್ ಹಾಗೂ ಮತದಾರರ ಗುರುತು ಪತ್ರಗಳಿವೆ. ಅವರ ತಂದೆ ಸಾರ್ವಜನಿಕ ರಂಗದ ಉದ್ದಿಮೆಯಲ್ಲಿ ಕೆಲಸ ಮಾಡಿದ್ದರೆ ತಾಯಿ ಪಿಂಚಣಿ ಪಡೆಯುತ್ತಿದ್ದಾರೆ,'' ಎಂದು ಅವರ ವಕೀಲರು ಹೇಳಿದ್ದಾರೆ.

ಆಧಾರ್ ಪೌರತ್ವದ ದಾಖಲೆಯಲ್ಲ ಎಂದು ಕಾರ್ಡ್ ನಲ್ಲಿಯೇ ಬರೆದಿರುವಾಗ ಅದನ್ನು ಪೌರತ್ವದ ಪುರಾವೆಯೆಂದು ಪ್ರಾಧಿಕಾರ ಹೇಗೆ ಪರಿಗಣಿಸಿ ಕ್ರಮ ಕೈಗೊಳ್ಳಬಹುದು ಎಂದು ಅವರು ಪ್ರಶ್ನಿಸುತ್ತಾರೆ. ಕರ್ನಾಟಕದಲ್ಲೂ ಹಲವರಿಗೆ ಇಂತಹುದೇ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಯಾವುದೇ ವ್ಯಕ್ತಿಯ ಪೌರತ್ವ ಸ್ಥಾನಮಾನ ಪ್ರಶ್ನಿಸುವ ಅಧಿಕಾರ ಪ್ರಾಧಿಕಾರಕ್ಕಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News