ಮಂಗಳೂರು ಗೋಲಿಬಾರ್, ಲಾಠಿಚಾರ್ಜ್ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸಲು ಹೇಳಿದ ಹೈಕೋರ್ಟ್

Update: 2020-02-18 12:39 GMT

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ್ದ ಗೋಲಿಬಾರ್, ಲಾಠಿಚಾರ್ಜ್ ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ

ನಿನ್ನೆ ಮಂಗಳೂರು ಹಿಂಸಾಚಾರ ಪ್ರಕರಣದ 22 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅರ್ಜಿದಾರರ ಪರ ವಾದಿಸಿದ ವಕೀಲರು, "ಪೊಲೀಸರು ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ಕಕ್ಷಿದಾರರು ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷಿಗಳು ಪೊಲೀಸರ ಬಳಿ ಇಲ್ಲ. ಪೊಲೀಸರು ಗೋಲಿಬಾರ್ ನಡೆಸಿ ದೌರ್ಜನ್ಯ ನಡೆಸಿದ್ದರೂ ಅವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ" ಎಂದು ಪೀಠಕ್ಕೆ ತಿಳಿಸಿದ್ದರು. ಇದನ್ನು ನ್ಯಾಯಪೀಠವು ಗಂಭೀರವಾಗಿ ಪರಿಗಣಿಸಿ ಎಫ್ ಐಆರ್ ದಾಖಲಾಗದ ಬಗ್ಗೆ ಸರಕಾರದಿಂದ ವರದಿ ಕೇಳಿತ್ತು.

ಇಂದು ವಿಚಾರಣೆ ವೇಳೆ ಸರಕಾರದ ಪರ ವಕೀಲರು ಈ ಕುರಿತ ಎಲ್ಲಾ ಮಾಹಿತಿಯನ್ನು ಫೆ.24ರ ವಿಭಾಗೀಯ ಪೀಠ ವಿಚಾರಣೆ ನಂತರ ಹಾಜರುಪಡಿಸುತ್ತೇವೆ. ಅಷ್ಟರವರೆಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಸಂಜ್ಞೇಯ ಅಪರಾಧಗಳಲ್ಲಿ ಎಫ್ ಐಆರ್ ದಾಖಲಾಗಬೇಕು ಎಂದು ಸುಪ್ರೀಂ ಕೋರ್ಟ್ ನ ಲಲಿತಾ ಕುಮಾರಿ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ಅವರಿದ್ದ ನ್ಯಾಯಪೀಠ ಮಂಗಳೂರು ಗೋಲಿಬಾರ್, ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಎಫ್ ಐಆರ್ ದಾಖಲಾಗಲಿ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News