ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಕೋಟಾ ಪೂಜಾರಿ

Update: 2020-02-18 14:29 GMT

ಬೆಂಗಳೂರು, ಫೆ.18: ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲು ಸರಕಾರ ಬದ್ಧವಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳವಾರ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ನಿಯಮ 330ಎ ಅಡಿ ಸಾರ್ವಜನಿಕ ಜರೂರು ವಿಚಾರದ ಮೇಲೆ ಹುಬ್ಬಳ್ಳಿ ಪ್ರಕರಣವನ್ನು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷದ ಸದಸ್ಯರು, ಈ ಪ್ರಕರಣದ ಬಗ್ಗೆ ಮೃದು ಧೋರಣೆ ತಳೆದಿರುವ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನ್ಯಾಯಾಲಯದ ಆವರಣದಲ್ಲಿ ಗಲಾಟೆ, ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಿಡುಗಡೆ ಅನುಮಾನ ಮೂಡಿಸಿದೆ. ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ದೇಶವಿರೋಧಿ ಘೋಷಣೆ ಕೂಗಿದವರ ವಿರುದ್ಧ ಮೃದುಧೋರಣೆ ಅನುಸರಿಸಿದ್ದಾರೆ. ತಕ್ಷಣ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಹೊರಟ್ಟಿ ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಮ್ಮ ದೇಶ ಐಕ್ಯತೆ, ಭದ್ರತೆ ಸಾರ್ವಭೌಮತೆ ಹೊಂದಿರುವಂತ ದೇಶವಾಗಿದೆ. ಅಂತಹ ದೇಶದಲ್ಲಿ ಕಾಶ್ಮೀರದ ಯುವಕರು ದೇಶದ್ರೋಹದ ಘೋಷಣೆ ಕೂಗಿದ್ದಾರೆ. ಇಂತವರ ಬಗ್ಗೆ ಮೃದುಧೋರಣೆ ತೆಗೆದುಕೊಳ್ಳಲು ಪೊಲೀಸರ ಮೇಲೆ ಒತ್ತಡ ಇರಬೇಕು. ಇದು ಸಲ್ಲದು, ಕೂಡಲೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ, ಇದು ಗಂಭೀರ ಪ್ರಕರಣ ಎಂದು ಒತ್ತಾಯಿಸಿದರು.

ನಂತರ ಕಾಂಗ್ರೆಸ್ ಐವಾನ್ ಡಿಸೋಜಾ ಮಾತನಾಡಿ, ಮೃದು ಧೋರಣೆ ಅನುಸರಿಸಿದ ಹುಬ್ಬಳ್ಳಿ ಪೊಲೀಸ್ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಯುಕ್ತರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ನಿಯಮ 330ಎ ಅಡಿ ಪ್ರಸ್ತಾಪಕ್ಕೆ ಸರಕಾರದ ಪರವಾಗಿ ಪ್ರತಿಕ್ರಿಯೆ ನೀಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರಾಷ್ಟ್ರವಿರೋಧಿ ಘೋಷಣೆ ಕೂಗುವವರು, ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲು ಸರಕಾರ ಬದ್ಧವಾಗಿದೆ. ಗೃಹ ಸಚಿವರ ಮೂಲಕ ಸಮರ್ಪಕ ಉತ್ತರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಪಾಕ್ ಪರ ಘೋಷಣೆ ಕೂಗುವ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್(ವಿರೋಧ ಪಕ್ಷದವರು) ಗಲಾಟೆ ಮಾಡುವ ಮೂಲಕ ನಮಗೆ ಬೆಂಬಲ ಕೊಟ್ಟು ಸ್ಪಂದಿಸಿದ್ದಾರೆ. ಅವರಿಗೂ ಅಭಿನಂದನೆ. ಈ ವಿಚಾರಗಳನ್ನು ಗಂಭೀರವಾಗಿ ಸರಕಾರ ಪರಿಗಣಿಸಿದೆ ಎಂದು ಹೇಳಿದರು. ಈ ವಿಚಾರವಾಗಿ ಕೆಲ ಹೊತ್ತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ವಾಗ್ವಾದ ನಡೆಯಿತು. ಇದರ ನಡುವೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಸದನದ ಬಾವಿಗೆ ಇಳಿಯಲು ಮುಂದಾದಾಗ ಕಾಂಗ್ರೆಸ್ ಮುಖಂಡರು ಸನ್ನೆ ಮಾಡಿ ಹಿಂದೆ ಹೋಗುವಂತೆ ತಿಳಿಸಿದರು. ಆಗ ಅವರ ಮಾತಿಗೆ ಗೌರವ ಕೊಟ್ಟು ಹಿಂದೆ ಹೋದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News