15 ದಿನಗಳಲ್ಲಿ ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ: ಡಿಸಿಎಂ ಅಶ್ವಥ್ ನಾರಾಯಣ

Update: 2020-02-18 15:47 GMT

ಬೆಂಗಳೂರು, ಫೆ.18: ಸರಕಾರಿ ಪಾಲಿಟೆಕ್ನಿಕ್ ಮತ್ತು ಚಿತ್ರಕಲಾ ವಿದ್ಯಾಲಯಗಳ ಅತಿಥಿ ಉಪನ್ಯಾಸಕರ ಬಾಕಿ ವೇತನವನ್ನು 15 ದಿನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸದನಕ್ಕೆ ಭರವಸೆ ನೀಡಿದರು.

ಮಂಗಳವಾರ ಪರಿಷತ್‌ನ 2ನೇ ದಿನ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಎಸ್.ವಿ ಸಂಕನೂರು, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಯಾಗದೆ ತೊಂದರೆಯಾಗಿದೆ. ತಕ್ಷಣ ವೇತನ ಬಿಡುಗಡೆ ಮಾಡಬೇಕು. ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಡಿ ದರ್ಜೆ ನೌಕರರ ಸ್ಥಿತಿ ಕೂಡ ಇದೇ ಆಗಿದೆ. ಚಿತ್ರಕಲಾ ಮಹಾವಿದ್ಯಾಲಯದ ಉಪನ್ಯಾಸಕರ ವೇತನ ಕೂಡ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಸರಕಾರಿ ಡಿಪ್ಲೊಮಾ ಕಾಲೇಜು, ಚಿತ್ರಕಲಾ ವಿದ್ಯಾಲಯ ಅತಿಥಿ ಉಪನ್ಯಾಸಕರಿಗೆ ತಾಂತ್ರಿಕ ಕಾರಣದಿಂದ ವೇತನ ಕೊಡಲು ಸಾಧ್ಯವಾಗಿಲ್ಲ. ಅದನ್ನು ಬಗೆಹರಿಸಿ ಹದಿನೈದು ದಿನದಲ್ಲಿ ಬಾಕಿ ವೇತನ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News