ಮಂಗಳೂರು ಪೊಲೀಸರಿಂದ ಪೂರ್ವ ನಿಯೋಜಿತ, ಉದ್ದೇಶಪೂರ್ವಕ ಗೋಲಿಬಾರ್: ಎಸ್.ಆರ್.ಪಾಟೀಲ್

Update: 2020-02-18 16:40 GMT

ಬೆಂಗಳೂರು, ಫೆ.18: ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಂಗಳೂರಿನ ಪೊಲೀಸರು ನಡೆಸಿದ ಗೋಲಿಬಾರ್ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿ, ತನಿಖೆ ಮಾಡಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್ತಿನಲ್ಲಿ ನಿಯಮ 68ರ ಅಡಿಯಲ್ಲಿ ಮಾತನಾಡಿದ ಅವರು, ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದವರ ಮಂಗಳೂರಿನ ಪೊಲೀಸರು ಪೂರ್ವ ನಿಯೋಜಿತ, ಉದ್ದೇಶಪೂರ್ವಕವಾಗಿಯೇ ಗೋಲಿಬಾರ್ ಮಾಡಿದ್ದಾರೆ. ಗೋಲಿಬಾರ್ ಮಾಡುವ ಮುನ್ನ ಯಾವುದೇ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಆಪಾದಿಸಿದರು.

ಪೊಲೀಸರ ಗೋಲಿಬಾರ್‌ನಿಂದ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಅಲ್ಲಿ ನಡೆದ ಈ ಘಟನೆ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ಅಂದು ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರಿದ್ದರು ಎಂದಿರುವ ಆಯುಕ್ತರು, ಎಫ್‌ಐಆರ್‌ನಲ್ಲಿ ಕೇವಲ 1500-2000 ಜನರಿದ್ದರು ಎಂದು ನಮೂದಿಸಿದ್ದು, ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಅಲ್ಲದೆ, ಅಷ್ಟು ಸಾಲದೆಂಬಂತೆ ಗೋಲಿಬಾರ್ ನಡೆಸಿದ್ದಾರೆ. ಇನ್ನು, ಮುಂದೆ ಹೋಗಿ ಆಸ್ಪತ್ರೆಗೆ ಐಸಿಯುಗೆ ಬೂಟ್ ಕಾಲಿನಲ್ಲಿ ಪ್ರವೇಶಿಸಿ, ಅಲ್ಲಿನ ಆವರಣದಲ್ಲಿ ಅಶ್ರುವಾಯು ಸಿಡಿಸಿದ್ದಾರೆ. ಅಂತರ್ಜಾಲ ಸಂಪರ್ಕ ಕಡಿತ, ಕರ್ಫ್ಯೂ ಸೇರಿದಂತೆ ಹಲವು ಘಟನೆಗಳು ಪೊಲೀಸರ ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ ಎಂದು ತಿಳಿಸಿದರು.

ಬೀದರ್‌ನ ಶಾಹಿನ್ ಶಾಲೆಯಲ್ಲಿ ನಾಟಕ ಮಾಡಿದರೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಕವಿತೆ ಓದಿದ ಕವಿ ಸಿರಾಜ್ ಬಿಸರಹಳ್ಳಿ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ಅಂದರೆ, ಇನ್ನು ಮುಂದೆ ಚಿತ್ರಕಲಾವಿದರು ಕಾರ್ಟೂನ್ ಬರೆದರೆ, ಕವಿಗಳು ಕವಿತೆ ಬರೆದರೆ ಅವರ ಮೇಲೂ ಪ್ರಕರಣ ದಾಖಲಿಸುತ್ತಾರೆ. ನಾವಿಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವಾ ಎಂದು ಪಾಟೀಲ್ ಪ್ರಶ್ನಿಸಿದರು.

ಕಲ್ಲಡ್ಕ ಶಾಲೆಯ ವಿರುದ್ಧ ಪ್ರಕರಣ ಆಗಿದೆಯಾ: ಸಂವಿಧಾನದ ವಿರುದ್ಧವಿರುವ ಸಿಎಎ ಕಾಯ್ದೆ ವಿರುದ್ಧ ನಾಟಕ ಮಾಡಿದ ಶಾಲೆಯ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ್ದೀರಾ. ಆದರೆ, ಇದೇ ವೇಳೆ, ಬಾಬರಿ ಮಸೀದಿ ಧ್ವಂಸ ಪ್ರಕರಣದ ಅಣಕು ಪ್ರದರ್ಶನ ನಡೆಸಿದ ಕಲ್ಲಡ್ಕ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆಯಾ ಎಂದು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News