ವಿದ್ಯುತ್ ವಲಯದ ಲೋಪಗಳನ್ನು ಬಹಿರಂಗಪಡಿಸಿದ ಸಿಎಜಿ ವರದಿ

Update: 2020-02-18 16:48 GMT

ಬೆಂಗಳೂರು, ಫೆ. 18: ರಾಜ್ಯದಲ್ಲಿನ ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಸಾರ್ವಜನಿಕ ವಲಯದ ಉದ್ದಿಮೆಗಳ ಪೈಕಿ ಐದು ಉದ್ದಿಮೆಗಳು ನಷ್ಟದಲ್ಲಿವೆ ಎಂಬ ಮಹತ್ವದ ಅಂಶವನ್ನು ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ ವರದಿ(ಸಿಎಜಿ) ಬಹಿರಂಗಪಡಿಸಿದೆ.

ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ 2018ಕ್ಕೆ ಕೊನೆಗೊಂಡ ವರ್ಷದ ವರದಿಯಲ್ಲಿ ಮಂಡಿಸಿದ್ದು, 11 ಸಾರ್ವಜನಿಕ ವಲಯದ ಉದ್ಯಮಗಳ ಪೈಕಿ ಆರು ಉದ್ದಿಮೆಗಳು ಲಾಭದಲ್ಲಿದ್ದು, ಉಳಿದ 5 ಉದ್ದಿಮೆಗಳ ನಷ್ಟದಲ್ಲಿವೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಮಹಾಲೆಕ್ಕಪರಿಶೋಧಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್ಥಿಕ ಮತ್ತು ರಾಜಸ್ವ ವಲಯದ ಲೆಕ್ಕಪರಿಶೋಧನೆ ಮಹಾಲೆಕ್ಕಪಾಲಕ ಅನೂಪ್ ಫ್ರಾನ್ಸಿಸ್ ಡುಂಗ್ ಡುಂಗ್, ವಿದ್ಯುತ್ ವಲಯ ಹೊರತುಪಡಿಸಿ ಇತರೆ ವಲಯದ 84 ಸಾರ್ವಜನಿಕ ವಲಯದ ಉದ್ದಿಮೆಗಳ ಪೈಕಿ ಕೇವಲ 45 ಉದ್ದಿಮೆಗಳು ಲಾಭದಲ್ಲಿದ್ದು, ಉಳಿದ 25 ಉದ್ದಿಮೆಗಳು ಕೋಟ್ಯಂತರ ರೂ.ನಷ್ಟದಲ್ಲಿವೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ವಲಯದ ಉದ್ಯಮಗಳ ಮೇಲೆ 2017-18ರ ಮಾರ್ಚ್ ಅಂತ್ಯದ ಲೆಕ್ಕಪರಿಶೋಧನಾ ವರದಿಯನ್ನು ರಾಜ್ಯ ಸರಕಾರಕ್ಕೆ ಮಂಡಿಸಲಾಗಿದೆ. ವರದಿಯಲ್ಲಿ ಎರಡು ಸಾಧನಾ ಲೆಕ್ಕಪರಿಶೋಧನೆಗಳು, 13 ಅನುಪಾಲನಾ ಲೆಕ್ಕಪರಿಶೋಧನಾ ಕಂಡಿಕೆಗಳು ಸೇರಿವೆ. ಒಟ್ಟು 107 ಸಾರ್ವಜನಿಕ ವಲಯ ಉದ್ಯಮ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಪೈಕಿ 94 ಉದ್ದಿಮೆಗಳು ಕಾರ್ಯನಿರತವಾಗಿವೆ ಎಂದರು. ರಾಯಚೂರು ವಿದ್ಯುತ್ ನಿಗಮ ಯೆರಮರಸ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಸ್ಥಾವರವು ಮಾರಾಟ ತೆರಿಗೆ ರಿಯಾಯಿತಿ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು, ಇದರಿಂದ 335 ಕೋಟಿ ರೂ.ಮೊತ್ತದ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಲಾಗಿದೆ.

ಅಲ್ಲದೆ, ಕಾಮಗಾರಿ ವಿಳಂಬದಿಂದಾಗಿ 49 ಕೋಟಿ ರೂ.ಹೆಚ್ಚವರಿ ಹೊರೆಯಾಗಿದೆ. ರೈಲಿನ ಬದಲು ರಸ್ತೆ ಮೂಲಕ ಕಲ್ಲಿದ್ದಲು ಸಾಗಣೆಯಿಂದ 25 ಕೋಟಿ ರೂ.ಹೆಚ್ಚುವರಿ ಹೊರೆಯಾಗಿದೆ. ಯೋಜನೆ ವಿಳಂಬದಿಂದ 4,900 ಕೋಟಿ ರೂ.ಹೊರೆಯಾಗಿದೆ ಎಂದು ವಿದ್ಯುತ್ ಇಲಾಖೆ ಲೋಪವನ್ನು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News